ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

03 December 2009

ವಿಕಲತೆಯ ಕೂಪ: ಹಂದಿಗೋಡು ಕಾಯಿಲೆ

ಇಂದು ವಿಶ್ವ ಅಂಗವಿಕಲರ ದಿನಾಚರಣೆ.
ಅದ್ಯಾಕೋ ಒಂದು ವಿಧದ ಅಂಗವಿಕಲತೆಯೇ ಆಗಿರುವ ಹಂದಿಗೋಡು ಕಾಯಿಲೆ ಬಗ್ಗೆ ಹೇಳಬೇಕೆನಿಸುತ್ತಿದೆ.
ನಮ್ಮ ಶಿವಮೊಗ್ಗ ಜಿಲ್ಲೆ ಪ್ರಪಂಚದ ಇತಿಹಾಸಕ್ಕೆ ಏನೇನೇನೋ ಕೊಡುಗೆ ನೀಡಿದೆ. ಹಾಗೆಯೇ ಎರಡು ವಿಚಿತ್ರ ಖಾಯಿಲೆಗಳನ್ನೂ ಬಳುವಳಿಯಾಗಿ ನೀಡಿದೆ. ಅವುಗಳಲ್ಲಿ ಒಂದು ಕೆ.ಎಫ್.ಡಿ. ಎಂದು ಕರೆಯಲ್ಪಡುವ ಕ್ಯಾಸನೂರು ಕಾಡಿನ ಕಾಯಿಲೆ. ಇದನ್ನೇ ಮಂಗನ ಕಾಯಿಲೆ ಎಂತಲೂ ಕರೆಯುತ್ತಾರೆ. ನಮ್ಮ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರು ಎಂಬ ಹಳ್ಳಿ ಈ ಕಾಯಿಲೆಯ ತವರೂರು.
ಶಿವಮೊಗ್ಗ ಜಿಲ್ಲೆಯನ್ನೊಂದು ಕೊಡುಗೆ ಹಂದಿಗೋಡು ಕಾಯಿಲೆ. 'ಹಂದಿಗೋಡು ಸಿಂಡ್ರೋಮ್' ಎಂದು ವೈಧ್ಯಲೋಕದಲ್ಲಿ ಪರಿಚಿತವಿರುವ, ವ್ಯಕ್ತಿಯ ಅಂತ:ಸತ್ವವನ್ನೇ ಕುಗ್ಗಿಸಿ ಅಂಗವೈಕಲ್ಯಕ್ಕೆ ತಳ್ಳುವ ವಿಚಿತ್ರ ಕಾಯಿಲೆ. ಇದರ ತವರೂರು ನಮ್ಮ ಜಿಲ್ಲೆಯ ನಮ್ಮ ಸಾಗರ ತಾಲ್ಲೂಕಿನ ಹಂದಿಗೋಡು ಎಂಬ ಒಂದು ಪುಟ್ಟ ಹಳ್ಳಿ. ಈ ಹಳ್ಳಿಯೇ ಇಂದಿಗೂ ಇದರ ಪ್ರಮುಖ ಕಾರಸ್ಥಾನ ಕೂಡಾ ಆಗಿದೆ.
ಹಂದಿಗೋಡು ಸಾಗರ ಪಟ್ಟಣದಿಂದ ಕೇವಲ ಎಂಟು ಕಿ.ಮೀ. ದೂರದಲ್ಲಿರುವ ಒಂದು ಹಳ್ಳಿ. ಇಲ್ಲಿರುವ ಬಹುತೇಕ ಕುಟುಂಬಗಳು ದಲಿತ ವರ್ಗಕ್ಕೆ ಸೇರಿದವು. ಸಾಮಾನ್ಯವಾಗಿ ಇವರ ಕಸುಬು ಕೃಷಿ ಕೂಲಿ. ಇಂತಹ ದಲಿತ ಕುಟುಂಬಗಳನ್ನೇ ಈ ಕಾಯಿಲೆ ಕಳೆದ ಮೂರೂವರೆ ದಶಕಗಳಿಂದ ಕಾಡುತ್ತಿದೆ. ಅಲ್ಲಿನ ಒಂದು ವರ್ಗದ ಜನತೆಯ ಬದುಕನ್ನೇ ಮುರುಟಿ ಮುದ್ದೆ ಮಾಡಿ ಹಾಕಿದೆ. ಇಂತಹ ಒಂದು ಕಾಯಿಲೆಯನ್ನು ಗುರುತಿಸಿದವರು ಅಲ್ಲಿನ ಸಾಮಾಜಿಕ ಕಾರ್ಯಕರ್ತ ಹೆಚ್. ಎಂ. ಚಂದ್ರಶೇಖರ್. ಅಂದಿನಿಂದ ಇಂದಿನ ವರೆಗೆ ಪ್ರಪಂಚದಾಧ್ಯಂತ ಆನೇಕಾನೇಕ ಸಂಶೋಧನೆಗಳು ನಡೆದರೂ, ನಡೆಯುತ್ತಿದ್ದರೂ ಈ ಕಾಯಿಲೆಯ ಹುಟ್ಟಿಗೆ ಕಾರಣಗಳು ಸ್ಪಸ್ಟವಾಗಿ ತಿಳಿದಿಲ್ಲ. ಇಂದು ಈ ಕಾಯಿಲೆ ವಿಶ್ವದ ವೈಧ್ಯ ವಿಜ್ಞಾನಕ್ಕೇ ಸವಾಲಾಗಿ ಪರಿಣಮಿಸಿದೆ.
ಅಮಿತಾಬ್ ಬಚ್ಚನ್ ಮಗನಾಗಿ ಅಭಿಷೇಕ್ ಬಚ್ಚನ್ ಅಪ್ಪನಾಗಿ ನಟಿಸಿರುವ 'ಪಾ' ಚಿತ್ರದ ಬಗ್ಗೆ ಕೇಳಿರಬಹುದು. ಅಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ವಯೋ ವೃದ್ಧರಂತಹ ದೇಹ ಬೆಳವಣಿಗೆ ಹೊಂದಿದ 'ಪ್ರೊಜೇರಿಯಾ' ಎಂಬ ಕಾಯಿಲೆಯ ಕುರಿತು ಚಿತ್ರ ನಿರ್ಮಿಸಲಾಗಿದೆಯಂತೆ. ಪ್ರೋಜೇರಿಯಾಕ್ಕೆ ಸ್ವಲ್ಪ ವ್ಯತಿರಿಕ್ತವಾಗಿರುವಂತಹುದಿದು ಈ ಹಂದಿಗೋಡು ಕಾಯಿಲೆ. ಕಾಯಿಲೆ ಪೀಡಿತ ವ್ಯಕ್ತಿ ದಿನಗಳುರುಳಿದಂತೆ ಕುಬ್ಜನಾಗುತ್ತಾ ಹೋದಂತೆ ಕಾಣುತ್ತಾನೆ. ಕಾಲಿನ ಮಾಂಸಖಂಡಗಳು ಸಂಕುಚಿತಗೊಂಡು ಸಂಪೂರ್ಣ ದೇಹವೇ ಕುಗ್ಗಿ ನಡೆಯಲೂ ತುಂಬಾ ಕಷ್ಟಪಡುವಂತಾಗುತ್ತಾನೆ. ನಡೆಯಲೇ ಹೆಣಗಾಡುವಾಗ ಇನ್ನು ಕೆಲಸ ನಿರ್ವಹಿಸುವುದೆಂತು ಬಂತು..? ಹಾಗಾಗಿ ಆರ್ಥಿಕವಾಗಿಯೂ ವ್ಯಕ್ತಿ ಕುಬ್ಜನಾಗುತ್ತಾನೆ. ಇಂತಹ ದುಸ್ಥಿಯನ್ನು ನೀಡಿ 25-30 ರ ಯೌವ್ವನದಲ್ಲೇ ಸಾವಿನ ಮನೆಯೊಳಗೆ ಕರಕೊಂಡು ಬಿಡುತ್ತದೆ ಈ ಹಂದಿಗೋಡು ಕಾಯಿಲೆ.
ಈ ಧರೆಯ ಮೇಲಿರುವ ಚಿತ್ರ-ವಿಚಿತ್ರ ಕಾಯಿಲೆಗಳಿಗೆ ಲೆಕ್ಕವಿಲ್ಲ. ಹಾಗೆಯೇ ಮಲೆನಾಡು ಭಾಗದ ಒಂದೇ ಜಾತಿಯ ಜನರನ್ನೇ ಹೆಚ್ಚಾಗಿ ಕಾಡಿಸುತ್ತಿರುವ ಈ ಕಾಯಿಲೆ ಸಹ ತುಂಬಾ ವಿಚಿತ್ರವಾಗಿ ಕಾಣುತ್ತಿದೆ.


16 November 2009

ಕಥಾ ಪುಷ್ಪ


1. ಮಸುಕು

ಬೆಳಿಗ್ಗೆಯಿಂದ ಬಿಡುವಿಲ್ಲದೆ ಕೆಲಸ ಮಾಡಿದ ಬಾನುಗೆ ಈ ಭಾನುವಾರ ಯಾಕಾದ್ರೂ ಬರುತ್ತೋ ಏನೋ ಅನ್ನಿಸಿ ಬಿಟ್ಟಿತ್ತು. ಬಾಕಿ ದಿನಗಳಲ್ಲಾದರೆ ಕಾಲೇಜಿಗೆ ಹೋಗಿ-ಬರುವುದರಲ್ಲಿಯೇ ಸಮಯ ಕರಗಿ ದಿನಗಳುರುಳಿ ಹೋಗುತ್ತವೆ. ಆದರೆ ಇಂದು ಮಾತ್ರ ಗಡಿಯಾರವೇ ನಿಶ್ಚಲವಾದಂತೆ ಕಾಣುತ್ತಿತ್ತು. ಅಮ್ಮ ಬೇಗಂ ಬೆಳಿಗ್ಗೆ ಬೇಗ ಎದ್ದವಳೇ ಸಾಗರಕ್ಕೆ ಹೋಗಿದ್ದರೆ, ಅಣ್ಣ ಹಮೀದ ಏನೋ ಮೀಟಿಂಗ್ ಇದ್ದಿದ್ದರಿಂದ ಮಸೀದಿ ಕಡೆ ಹೋಗಿದ್ದ. ಅತ್ತಿಗೆಯಂತೂ ತವರು ಮನೆ ಸೇರಿ ಮೂರ್ನಾಲ್ಕು ದಿನಗಳೇ ಕಳೆದಿದ್ದವು. ಇವೆಲ್ಲವುಗಳಿಂದಾಗಿ ಬಾನು ಒಬ್ಬಳೇ ಇಂದು ಮನೆಯ ಹೊಣೆ ಹೊತ್ತಿದ್ದಳು. ಎದ್ದಾಗಿನಿಂದ ಕೆಲಸದ ಹಿಂದೆ ಕೆಲಸ ಮಾಡುತ್ತಾ ಬಂದಿದ್ದರೂ ಒಂದೂ ಮುಗಿದಂತೆ ಕಾಣಲಿಲ್ಲ. ಇಡೀ ಮನೆಯೆಂಬ ಮನೆಯೇ ಬಣಗುಡುತ್ತಿದ್ದುದರಿಂದ ಹೊರೆ ಕೆಲಸದ ನಡುವೆಯೂ ಏನೋ ಅವ್ಯಕ್ತ ಬೇಸರ ಮೂಡುತ್ತಿತ್ತು.
ಹೊತ್ತು ಹತ್ತಾಗುವ ವೇಳೆಗೆ "ಸಾಕಪ್ಪಾ ಈ ಮನೆಗೆಲಸದ ಸಹವಾಸ" ಎಂದು ಗೊಣಗುತ್ತಾ ಬಂದ ಬಾನು ಮಂಚದ ಮೇಲೆ ಕುಳಿತಳು. ಸುಮ್ಮನೆ ತೆಪ್ಪಗೆ ಮನೆಯ ಮೂಲೆಯಲ್ಲಿ ಕುಳಿತಿದ್ದ ಟಿ.ವಿ.ಯ ಸ್ವಿಚ್ಚು ಅದುಮಲು ಅದು ತನ್ನ ಭಾವಾಭಿನಯದ ಠೀವಿಯಿಂದಲೇ 'ತೇರಾ ಮೇರಾ ಬೀಚುಮೆ ಕೈಸಾ ಹೈಯೇ ಬಂಧನ್......' ಎಂದು ಶುರುಹಚ್ಚಿಕೊಳ್ಳುತ್ತಿದ್ದಂತೆ ಕರೆಂಟು 'ಟುಸ್' ಎಂದು ಹೋಯಿತು. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಮನಸ್ಸಿನಲ್ಲಿ ಇನ್ನಷ್ಟು ಬೇಸರ ಬೆಳೆಯುತ್ತಾ ಹೋಯಿತು. ಗೆಳತಿ ಉಷಾಳೊಂದಿಗಾದರೂ ಮಾತನಾಡಿ ರಿಲ್ಯಾಕ್ಸ್ ಆಗೋಣ ಎಂದು ಪಕ್ಕದಲ್ಲಿದ್ದ ಫೋನನ್ನೆತ್ತಿ ನಂಬರ್ ಒತ್ತಿದರೆ ಅಲ್ಲೂ ಅದೇ ಅಪಸ್ವರ " ನೀವು ಡಯಲ್ ಮಾಡಿದ ಮಾರ್ಗವು ತುಂಬಾ ಬ್ಯುಸಿಯಾಗಿದೆ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಪೋನನ್ನಿಡಿದು ಕುಟ್ಟ ಬೇಕೆನಿಸಿತು ಬಾನುಗೆ, ಆದರೆ ಈ ನಿರ್ಜೀವ ವಸ್ತುವಿಗೆ ಶಿಕ್ಷೆ ಕೊಟ್ಟು ಪ್ರಯೋಜನವಿಲ್ಲ ಎಂಬ ತಿಳಿವು ಹೊಳೆದು ಎಡಗೈಯಲ್ಲಿ ಹಿಡಿದಿದ್ದ ರಿಸೀವರನ್ನೊಮ್ಮೆ ನೋಡಿದಳು ಅದು ಆಕೆಯನ್ನೇ ನೋಡಿ ನಕ್ಕಂತೆ ಭಾಸವಾಯಿತು. ಅದರ ನೋಟದಿಂದ ತಪ್ಪಿಸಿಕೊಳ್ಳಲು ಅದನ್ನು ಅದರ ಸ್ವ-ಸ್ಥಾನದಲ್ಲಿಟ್ಟಳು. ಆಗಲೂ ಅದು 'ಫಟ್' ಎಂದು ನಕ್ಕಿತು.
ಇಂದು ಮನೆಯಲ್ಲಿರುವ ವಸ್ತುಗಳಿಗೆಲ್ಲಾ ಇಂದೇನೋ ಅಗೋಚರ ಜೀವ ಬಂದಿದೆ. ಅದಕ್ಕೇ ಅವು ತನ್ನನ್ನು ಅಣಕಿಸುತ್ತಿವೆ. ಅವುಗಳ ಗೊಡವೆಯೇ ತನಗೆ ಬೇಡವೆಂದು ಬಾನು ಹಾಗೇ ಮಂಚದ ತುದಿಗೊರಗಿ ಕುಳಿತಳು. ಆಗಲೂ ತಿಂಗಳಿಗೊಂದೊಂದು ವಸ್ತ್ರವ ಬದಲಿಸುವಂತೆ ಪುಟ ತಿರುಗಿಸಿ ನಳನಳಿಸುತ್ತಾ ಗೋಡೆಯ ಮೇಲೆ ನೇತಾಡುತ್ತಿದ್ದ ಕ್ಯಾಲೆಂಡರ್ ಅವಳ ಗಮನ ಸೆಳೆಯಿತು. ಅದನ್ನು ಮುದ್ದಿನಿಂದೆತ್ತಿ ತೊಡೆಯ ಮೇಲಿಟ್ಟುಕೊಂಡು ಒಂದೊಂದೇ ಹಾಳೆಯನ್ನು ತಿರುವುತ್ತಾ ಮುಂಬರುವ ದಿನಗಳನ್ನು ತನ್ನ ಕಣ್ಮುಂದೆ ತಂದುಕೊಂಡಳು. ಹೀಗೆ ನೋಡುತ್ತಿದ್ದಾಗ ರಂಜಾನು ಹಬ್ಬಕ್ಕೆ ಇನ್ನೆರಡೇ ತಿಂಗಳುಗಳಿವೆ ಎಂಬುದು ತಿಳಿದು ಮನಸ್ಸು ಉಲ್ಲಸಿತವಾಯಿತು. ರಂಜಾನು ಹಬ್ಬದ ಸಡಗರ ಸಂಭ್ರಮಗಳೆಲ್ಲಾ ಮನಸ್ಸಿನಲ್ಲಿ ಹಸಿ-ಹಸಿಯಾಗಿ ಮೂಡತೊಡಗಿದವು. ಹಬ್ಬಕ್ಕೆ ಬರುವ ನೆಂಟರಿಷ್ಟರು, ಹಬ್ಬದ ನೆವದಲ್ಲಾದರೂ ಬರುವ ಅಕ್ಕಂದಿರು, ತಮ್ಮ ಪುಟ್ಟ ಪುಟ್ಟ ಕಾಲ್ಗಳಲ್ಲಿ ಪಟಪಟನೆ ಓಡಾಡುತ್ತಾ ಮುದ್ದು ಮಾತಿನಿಂದ ಇಡೀ ಮನೆಯನ್ನೇ ಗಿಜಿಗುಡಿಸುವ ಅವರ ಮಕ್ಕಳು, ಹಬ್ಬಕ್ಕಿಂತಲೂ ಮೊದಲೇ ಹತ್ತುಬಾರಿ ಶುಭಾಷಯ ಕೋರುವ ಕೃಪಾ, ಶುಭಾ, ಉಷಾ ಮೊದಲಾದ ಗೆಳತಿಯರು, ಹೀಗೆ ಎಲ್ಲವೂ ಒಮ್ಮೆಗೇ ನೆನಪಾದವು. ಇವೆಲ್ಲಾ ನೆನಪಿನಿಂದ ಮನಸ್ಸು ಉಡುಗೆ-ತೊಡುಗೆಯ ಕಡೆ ಹರಿದು ಈ ಬಾರಿ ಹಬ್ಬಕ್ಕೆ ಹೇಗಾದರೂ ಮಾಡಿ ಒಂದು ಒಳ್ಳೆಯ ಚೂಡಿ ತರಿಸಲೇಬೇಕು ಎನಿಸಿತು. ಹೀಗೆ ತನ್ನ ಬಟ್ಟೆಯ ಬಗ್ಗೆ ಯೋಚನೆ ಹರಿದದ್ದೇ ತಡ ಕಳೆದ ಹದಿನೈದು ದಿನಗಳಿಂದಲೂ ತೊಳೆಯದೇ ಹಾಗೇ ನೇತಾಕಿದ್ದ ತನ್ನ ಬಟ್ಟೆಗಳ ನೆನಪಾಗಿ ಧಡಕ್ಕನೆ ಹೊರಗೋಗಿ ಸೂರ್ಯನನ್ನೊಮ್ಮೆ ದಿಟ್ಟಿಸಿದಳು. ನೆತ್ತಿಯ ಮೇಲೆ ಮೇಲೆ ಹತ್ತಲೆತ್ನಿಸುತ್ತಿದ್ದ ಸೂರ್ಯನ ಬಿಸಿಲು ಭೂಮಿಯ ಬಣ್ಣವನ್ನೇ ಬದಲಾಯಿಸುವಂತಿತ್ತು. ತೊಳೆದು ಹಾಕುತ್ತಿದ್ದಂತೆ ಬಟ್ಟೆಗಳು ಒಣಗುವುದು ಗ್ಯಾರಂಟಿ, ಹಾಗೇನೆ ಇಸ್ತ್ರೀನೂ ಮಾಡ ಬಹುದು ಎಂದೆಣಿಸಿ ನಾಲೆಯ ಮೇಲೆ ಜೋತು ಬಿದ್ದಿದ್ದ ಕೆಲವು ಚೂಡಿಗಳನ್ನು ಒಂದೆರಡು ನೈಟಿಗಳನ್ನು ಬಗಲಿಗವುಚಿಕೊಂಡು ಕೈಯಲ್ಲಿ ಒಂದು 'ಸುಂದರಿ'ಯನ್ನಿಡಿದು ಬಚ್ಚಲು ಮನೆಕಡೆ ನಡೆದಳು.
ಬಾನು ಒಂದೊಂದೇ ಚೂಡಿಯನ್ನು ನೆನೆಸಿ ಸೋಪು ಹಚ್ಚುತ್ತಿದ್ದಂತೆ ಅದನ್ನು ತರಲು ತಾನು ಪಟ್ಟ ಪರಿಶ್ರಮಗಳೆಲ್ಲಾ ಮಿದುಳಿನಾಳದಲ್ಲಿ ಅನಾವರಣಗೊಳ್ಳುತ್ತಿದ್ದವು. ಅಣ್ಣನ ಮದುವೆಯಲ್ಲಿ ಮನೆಯವರು ಸ್ವ-ಇಚ್ಚೆಯಿಂದ ಎರಡು ಚೂಡಿ ತಂದಿದ್ದು ಬಿಟ್ಟರೆ ಉಳಿದೆಲ್ಲವೂ ತಾನು ಕಾಡಿ-ಬೇಡಿ ತರಿಸಿಕೊಂಡಂತಹವೇ ಆಗಿದ್ದವು. ಹೀಗೆ ನಾನಾ ನೆನಪುಗಳೊಂದಿಗೆ ಎಲ್ಲವನ್ನೂ ತೊಳೆದು ಕೊನೆಯಲ್ಲಿ ತನಗೆ ಅಚ್ಚು ಮೆಚ್ಚೆನಿಸಿದ ಪಳಪಳನೆ ಹೊಳೆವ ಕೆಂಪು ಚೂಡಿಯನ್ನು ತೊಳೆಯಲು ಕೈಯಲ್ಲಿ ಹಿಡಿಯುತ್ತಿದ್ದಂತೆ ಎದೆ ಒಡೆಯುವಂತಹ ಆಘಾತವಾಯಿತು. ಕಳೆದೊಂದು ವಾರದಿಂದ ತೊಡದೇ ಹಾಗೇ ಇಟ್ಟಿದ್ದ ಆ ಚೂಡಿಯನ್ನು ಇಲಿ ಎಂಬೋ ಪ್ರಾಣಿ ತನಗೆ ಮನಬಂದಂತೆ ಕಚ್ಚಿ-ಕಡಿದು ಹಾಕಿತ್ತು. ಬರೋಬ್ಬರಿ ಅಂಗೈ ಅಗಲದಷ್ಟನ್ನಾದರೂ ತುಂಡು ಮಾಡಿತ್ತು.! ಅರೆಕ್ಷಣ ಬಾನೂಗೆ ಏನು ಮಾಡಲೂ ತೋಚದಾಯಿತು. ಇಲಿ ಎಲ್ಲಿಯಾದರೂ ಸಿಕ್ಕಿದರೆ ಸುಟ್ಟು ಬೂದಿ ಮಾಡುವಷ್ಟು ಕೋಪ ನೆತ್ತಿಗೇರಿತು. ಆದರೂ ತನ್ನ ಅಸಹಾಯಕತೆಯ ಅರಿವಾಗಿ ಅಳುವುದೊಂದೇ ಬಾಕಿಯುಳಿಯಿತು. ಇಡೀ ಚೂಡಿಯನ್ನು ಎತ್ತಿ ತನ್ನ ಮೈ ಗೆ ಆನಿಸಿ ಹಿಡಿದಳು- ಪ್ಯಾಚುಮಾಡಿ ಧರಿಸಬಹುದೇನೋ ಎಂಬ ಆಸೆಯಿಂದ. ಆದರೆ ಇಲಿ ಚೂಡಿಯ ಹಿಂಬಾಗದ ಸೊಂಟದ ಭಾಗವನ್ನೇ ತುಂಡರಿಸಿಬಿಟ್ಟಿತ್ತು. 'ಪ್ಯಾಚು' ಮಾಡಿ ತೊಟ್ಟರೂ ಅಸಹ್ಯವಾಗಿ ಕಾಣುವಂತಿತ್ತು. ಅದರ ವೇಲೂ ಸಹ ಅದನ್ನು ಮುಚ್ಚುವಂತಿರಲಿಲ್ಲ. ಅದಾಗಲೇ ಬಿಸಿಲ ಝಳದಿಂದ ಬಳಲಿ ಬಂದ ಬೇಗಂ ಒಳಗಡಿ ಇಡುತ್ತಿದ್ದಂತೆ ಬಾನು ಕುಡಿಯಲು ತಣ್ಣನೆಯ ನೀರು ತಂದುಕೊಟ್ಟಳು, ಜೊತೆಗೆ ಇಲಿಕಡಿದ ಚೂಡಿಯನ್ನು ತಂದು ತೋರಿಸಿ ತನ್ನ ಅಳಲನ್ನು ತೋಡಿಕೊಂಡಳು. ಎಲ್ಲವನ್ನೂ ಗಮನಿಸಿದ ಬೇಗಂ ನಿರ್ಲಿಪ್ತತೆಯಿಂದ "ಹ್ಞಾ.. ನಂ ಬಗ್ಗೆ ನಮಿಗೆ ಜವಾಬ್ದಾರಿಲ್ಲಾಂದ್ರೆ ಹೀಂಗೇ ಆಗೋದು, ಬಟ್ಟೆನಾದ್ರೂ ಅಷ್ಟೇ ಬಾಳಾದ್ರೂ ಅಷ್ಟೇ" ಎಂದಾಗ ಬಾನುಗೆ ತಾಯಿಯ ಮಾತಿನ ತಳ ಬುಡ ಅರ್ಥವಾಗಲಿಲ್ಲ. " ನಂಗೆ ಅದೆಲ್ಲಾ ಗೊತ್ತಾಗೊಲ್ಲಮ್ಮ, ನನ್ನ ಬಂಗಾರದಂತ ಡ್ರೆಸ್ ನ ಇಲಿ ತಿಂದು ಹಾಕಿದೆ. ನನಗೀಗ ಇನ್ನೊಂದು ಡ್ರೆಸ್ ಕೊಡುಸ್ತೀಯೋ ಇಲ್ವೋ..? " ಎಂದು ಸ್ವಲ್ಪ ಬಿರುಸಾಗಿಯೇ ಕೇಳಿದಳು ಬಾನು. "ನನ್ನ ಬಳಿ ನಯಾ ಪೈಸೆನೂ ಇಲ್ಲಮ್ಮಾ ಬೇಕಾದ್ರೆ ನಿಮ್ಮಣ್ಣನ ಕೇಳ್ಕೋ ಹೋಗ್" ಎಂದೇಳಿ ಮುಖ ತಿರುಗಿಸಿದರೂ ಬೆನ್ನು ಬಿಡದ ಬಾನು " ಪ್ಲೀಸ್ ಅಮ್ಮಾ, ಈಗ ಬೇಡಮ್ಮಾ, ಇನ್ನೆರಡು ತಿಂಗಳಲ್ಲಿ ರಂಜಾನ್ ಬರುತ್ತೆ ಆಗ ಕೊಡ್ಸಮ್ಮಾ" ಎಂದು ಅನುನಯವಾಗಿ ಬೇಡಿಕೊಂಡಾಗ ಬೇಗಂಗೆ 'ಇಲ್ಲ' ಎನ್ನಲಾಗಲಿಲ್ಲ. 'ನೋಡೋಣ' ಎಂದಷ್ಟೇ ಹೇಳಿ ಅಡುಗೆ ಮನೆ ಒಳಹೊಕ್ಕಳು.
ರಾತ್ರಿ ಮಲಗಿದಾಗಲೂ ಕೂಡಾ ಬಾನು ಗೆ ತನ್ನ ಆ ಚೂಡಿಯ ನೆನಪು ಕಾಡುತ್ತಿತ್ತು. ! ಜೊತೆಗೆ ಇಲಿಗಳ ಬಗೆಗಿನ ಕೋಪವೂ ಇಮ್ಮಡಿಸುತ್ತಿತ್ತು. ತಾನು ಮಲಗಿದ ಮಂಚದಡಿಯಲ್ಲಿ ಹಲ್ಲಿಯೋ ಜಿರಲೆಯೋ, ಸರಕ್ಕೆಂದರೂ ಸಹ ದೀಪ ಹಾಕಿ ತಳ-ಬುಡ ಸೋಸುತ್ತಿದ್ದಳು. ಏನೂ ಕಾಣದಿದ್ದರೂ ಸಹ ದಿನಾಲು ಇಲಿಹುಡುಕುವುದ ಬಿಡುತ್ತಿರಲಿಲ್ಲ. ಇನ್ನುಳಿದ ಚೂಡಿಗಳಿಗೂ ಅಂತಹ ದುರ್ಗತಿ ಒದಗದಿರಲೆಂದು ಒಂದೆರಡು ರಾತ್ರಿ ಪಕ್ಕದ ಮನೆಯ ಬೆಕ್ಕನ್ನು ತಂದೂ ಸಹ ಹಾಲೆರೆದು ತನ್ನ ಬಳಿ ಇಟ್ಟುಕೊಂಡಳು. ಆದರೆ ಅವಳಿಗೆ ನಿದ್ರೆ ಹತ್ತುತ್ತಿದ್ದಂತೆ ಅದು ಒಡತಿಯ ಮನೆ ಸೇರಿರುತ್ತಿತ್ತು!
ಬಾನು ಕಾಲೇಜಿಗೆ ಹೋದಾಗಲೂ ಸಹ ತನ್ನ ಗೆಳತಿಯರೊಡನೆ ತನ್ನ ಗತಿಸಿದ ಚೂಡಿಯ ವರ್ಣನೆ ಮಾಡಿದ್ದೇ ಮಾಡಿದ್ದು. ತನ್ನ ವ್ಯಥೆಯನ್ನು ಹೇಳಿದ್ದೇ ಹೇಳಿದ್ದು. ಯಾರ ಕೆಂಪನೆಯ ಡ್ರೆಸ್ ಕಂಡರೂ ಬಾನುಗೆ ತನ್ನ ಚೂಡಿಯ ನೆನಪು ಬರುತ್ತಿತ್ತು. ಇನ್ನೊಂದು ಬಂದು ಅದರ ಸ್ಥಾನ ತುಂಬಿ ಅವಳ ಮೈ ಅಲಂಕರಿಸುವವರೆಗೂ ಅವಳ ಮನಸ್ಸು ಆ ಗತ ಚೂಡಿಯ ನೆನಪಿನಿಂದ ಹೊರಬರಲು ಸಾಧ್ಯವಿರಲಿಲ್ಲ. ಹೊಸದನ್ನು ತರಿಸಿಕೊಳ್ಳಲು ಬಾಯ್ಬಿಟ್ಟು ಅಣ್ಣನೊಡನೆ ಕೇಳುವ ಧೈರ್ಯವೂ ಆಕೆಗಿರಲಿಲ್ಲ.
ಮೊದಲೆಲ್ಲಾ ಆಗಿದ್ದರೆ ಬಾನು ಅಣ್ಣನೊಡನೆ ನೇರವಾಗಿ ಮಾತನಾಡುತ್ತಿದ್ದಳು. ತಮಾಷೆ ಮಾಡುತ್ತಿದ್ದಳು. ಹರಟೆ ಹೊಡೆಯುತ್ತಿದ್ದಳು. ಜೋಕ್ ಹೇಳಿ ನಗಿಸುತ್ತಿದ್ದಳು. ಅವನೂ ಅಷ್ಟೇ ತಂಗಿಯೊಡನೆ ಬಹಳ ಪ್ರೀತಿಯಿಂದಲೇ ಮಾತನಾಡುತ್ತಿದ್ದ. ತಾನು ಏನೇ ತಂದರೂ ತಂಗಿಗೆ ಮೊದಲು ತೋರಿಸುತ್ತಿದ್ದ. ಅವಳು ಏನೇ ಕೇಳಿದರೂ 'ಇಲ್ಲ' ಎನ್ನದೆ ತಂದು ಕೊಡುತ್ತಿದ್ದ. ಆದರೆ ಅವನ ಮದುವೆ ಯಾವಾಗ ಆಯ್ತೋ ಆಗಿನಿಂದ ಅವನ ವರ್ತನೆಗಳು ಬದಲಾದವು. ತಂಗಿ ಏನೇ ಕೇಳಿದರೂ ಗದರಿಸುವ ದನಿಯಲ್ಲೇ ಅವನ ಮಾತುಗಳಿರುತ್ತಿದ್ದವು. ಮೊದಮೊದಲು ಬಾನು, ಅಣ್ಣನ ಪ್ರೀತಿಯಲ್ಲಿ ಅತ್ತಿಗೆ ಪಾಲು ಪಡೆದಿದ್ದರ ಪರಿಣಾಮವಿದು ಅಂದುಕೊಂಡಳಾದರೂ ಪ್ರೀತಿಯಲ್ಲಿ ಪಾಲು ಮಾಡಲಾಗದೆಂಬುದು ಅರಿವಾಗುತ್ತಿದ್ದಂತೆ ತನ್ನನ್ನು ನಿಯಂತ್ರಿಸಲು ಅಣ್ಣ ಬಳಸುತ್ತಿರುವ ಅಸ್ತ್ರವಿದು ಎಂದು ಮನವರಿಕೆಯಾಯಿತು.
ಬಾನು ಹೈಸ್ಕೂಲು ಮುಗಿಸಿ ಕಾಲೇಜು ಸೇರುವುದೂ ಸಹ ಅಣ್ಣ ಹಮೀದನಿಗೆ ಇಷ್ಟವಿರಲಿಲ್ಲ. ಅವಳ ತಾಯಿ ಮತ್ತು ಅವಳ ಮೇಲೆ ಅತೀವ ಪ್ರೀತಿ ಹೊಂದಿದ್ದ ತಂದೆಯಿಂದಾಗಿ ಬಾನು ಕಾಲೇಜು ಮೆಟ್ಟಿಲು ಹತ್ತುವಂತಾಗಿತ್ತು. ಆದರೆ ಆ ವಿಧಿಗೆ ಏನನ್ನಿಸಿತೋ ಏನೋ ಬಾನು ಪ್ರಥಮ ಪಿ.ಯು.ಸಿ. ಮುಗಿಸುವಷ್ಟರಲ್ಲಿ ಅವಳ ತಂದೆ ವಿಧಿವಶರಾದರು. ಅಂದಿನಿಂದ ಅವಳ ಅಂತಃಸತ್ವವೇ ಅಡಗಿಹೋದಂತಾಯಿತು. ಈಗ ತಾಯಿಯ ಬೆಂಬಲವೊಂದರಿಂದಲೇ ಕಾಲೇಜಿಗೆ ಹೋಗುತ್ತಿರುವಳಾದರೂ ಆ ಬೆಂಬಲದ ಶಕ್ತಿ ಕ್ಷಣಿಕವಾದದ್ದು ಎಂಬುದರಲ್ಲಿ ಅನುಮಾನವಿರಲಿಲ್ಲ. ಅಪ್ಪನ ಮರಣದ ನಂತರ ಮನೆಯ ಜವಾಬ್ದಾರಿ ಅಣ್ಣನ ಹಿಡಿತದಲ್ಲಿದ್ದುದರಿಂದ ಹಾಗೂ ಅಣ್ಣನ ಕೈಗಳೇ ತಮ್ಮ ಹೊಟ್ಟೆಯನ್ನೂ ತುಂಬಿಸುತ್ತಿದ್ದುದರಿಂದ ಬಾನು ಮತ್ತು ಬೇಗಂ ಹಮೀದನ ಅಣತಿಯಂತೆ ನಡೆಯುವುದು ಅನಿವಾರ್ಯವಾಗಿತ್ತು. ಹೀಗಾಗಿ ಬಾನು ಅಣ್ಣನೆದುರಿಗೆ ಗಟ್ಟಿಯಾಗಿ ಮಾತನಾಡುತ್ತಿರಲಿಲ್ಲ. ತತ್ಪರಿಣಾಮವಾಗಿ ಅತ್ತಿಗೆಯೊಡನೆಯ ಮಾತೂ ಅಷ್ಟಕಷ್ಟೆ. ಏನಾದರೂ ಕೇಳಿದರೆ ಹಾಂ, ಹೂಂ ಎಂದಷ್ಟೇ ಉತ್ತರ. ಎಲ್ಲಿ ಅತ್ತಿಗೆಯೊಡನೆ ಅತಿ ಸಲುಗೆಯಿಂದ ವರ್ತಿಸಿದರೆ ಅಣ್ಣ ಬಯ್ಯುತ್ತಾನೋ ಎಂಬ ಅಂಜಿಕೆ. ಇಂತಹ ಸ್ಥಿತಿಯಲ್ಲಿ ಬಾನು ಹೇಗೆ ತಾನೇ ಅಣ್ಣನ ಬಳಿ ಧೈರ್ಯದಿಂದ ಕೇಳಿ ತನ್ನ ಬೇಡಿಕೆ ಈಡೇರಿಸಿಕೊಂಡಾಳು.? ಅದಕ್ಕಾಗಿಯೇ ಬಾನು ತನ್ನ ತಾಯಿಯ ಮೂಲಕ ಒತ್ತಡ ತಂದು ತನ್ನ ಆಸೆ ಪೂರೈಸಿಕೊಳ್ಳುತ್ತಿದ್ದಳು.
********
ರಂಜಾನು ಹಬ್ಬಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಅಕ್ಕಂದಿರು ಅವರ ಮಕ್ಕಳೆಲ್ಲಾ ಜಮಾಯಿಸಿದರು. ಮನೆಯ ಯಾವ ಮೂಲೆಯಲ್ಲಿ ನೋಡಿದರೂ ಹಬ್ಬದ ವಾತಾವರಣ. ಸದಾ ಬಣಗುಡುತ್ತಿದ್ದ ಮನೆಯಲ್ಲಿ ಪುಟ್ಟ ಮಕ್ಕಳ ಕಲರವ. ಈ ಮಕ್ಕಳು ಕಳೆದ ವರ್ಷ ತನ್ನ ಟಾಲ್ಕಂ ಪೌಡರನ್ನು ನೀರಿನಲ್ಲಿ ಅದ್ದಿ ಮುದ್ದೆ ಮಾಡಿದ್ದು ಬಾನುಗೆ ನೆನಪಾಗಿ ಈಗ ಅವುಗಳ ಕೈಗೆ ಏನೂ ಸಿಗದಂತೆ ಎಚ್ಚರಿಕೆ ವಹಿಸಿದಳು. ತಾನೂ ಸಹ ಕಾಲೇಜಿಗೆ ರಜೆ ಹಾಕಿ ಎಲ್ಲರೊಡಗೂಡಿ ರಂಜಾನು ಆಚರಿಸಿದಳು. ಬಹುದಿನಗಳಿಂದ ಒತ್ತಡ ತಂದಿದ್ದರ ಫಲಶೃತಿ ಎಂಬಂತೆ ಹಬ್ಬಕ್ಕೊಂದು ಚೂಡಿಯೂ ಬಂದಿತ್ತು. ಅದು ಇಲಿ ಕಡಿದು ಹಾಳಾದ ಆ ಚೂಡಿಯನ್ನು ಹೋಲುತ್ತಿರಲಿಲ್ಲವಾದರೂ ಹೊಸದಾದುದರಿಂದ ಅದು ಚೆನ್ನಾಗಿಯೇ ಇತ್ತು. ಆಸೆ ಪಟ್ಟಂತೆ ಬಾನು ಹೊಸ ವಸ್ತ್ರತೊಟ್ಟು ಹಬ್ಬ ಆಚರಿಸಿದಳು, ಖುಷಿಪಟ್ಟಳು, ಸಂಭ್ರಮಿಸಿದಳು.
ಹಬ್ಬ ಮುಗಿದ ಒಂದು ವಾರಕ್ಕೇ ಅಕ್ಕಂದಿರೆಲ್ಲಾ ತಂತಮ್ಮ ಊರಿಗೆ ಹೊರಟು ಹೋಗುತ್ತಿದ್ದಂತೆ ಮನೆ ಬಣಗುಡಲಾರಂಭಿಸಿತಾದರೂ ನಾಳೆಯಿಂದ ಕಾಲೇಜಿಗೆ ಹೋಗಬೇಕೆಂಬ ಸಂತಸವೂ ಬಾನುವಿನ ಮನಸ್ಸಿನಾಳದಲ್ಲಿ ಮೇಳೈಸಿದ್ದರಿಂದ ಅದರ ಪರಿಣಾಮ ಬಾನುವಿಗಾಗಲಿಲ್ಲ.
ನವ ಚೈತನ್ಯದಿಂದೆಂಬಂತೆ ಬೆಳಿಗ್ಗೆ ಎದ್ದು ಹೊಸ ಚೂಡಿಯನ್ನು ತೊಟ್ಟು ಕಾಲೇಜಿಗೆ ಹೊರಡಲು ಅಣಿಯಾಗುತ್ತಿದ್ದ ಬಾನುಳ ಬಳಿ ಬಂದ ಬೇಗಂ " ಬೇಬೀ ತಗೋ, ಇವತ್ನಿಂದ ಇದನ್ನೂ ಹಾಕೊಂಡೋಗು" ಎಂದು ಒಂದು ಕಪ್ಪನೆಯ ಕವರನ್ನು ಮಗಳ ಕೈಗಿತ್ತಳು. ಬಾನು ಆಶ್ವರ್ಯಾಭರಿತ ಕುತೂಹಲದಿಂದ ಬಿಚ್ಚಿದಾಕ್ಷಣ ಹೃದಯವೇ ಒಮ್ಮೆ ನಿಂತು ಹೋದಂತೆನಿಸಿತು. "ಬು...ರು...ಖಾ.... ಯಾರಿಗಮ್ಮಾ.. ಇದು" ತೊದಲುತ್ತಲೇ ನುಡಿದಳು ಬಾನು. " ನಿನ್ಗೇ ಕಣಮ್ಮಾ... ಮೊನ್ನೇನೆ ನಿಮ್ಮಣ್ಣ ತಂದಿಟ್ಟಿದ್ದ. ಇನ್ಮೇಲೆ ನೀನೆಲ್ಲಿಗೇ ಹೋಗೋದಾದ್ರೂ ಇದ್ನ ಹಾಕೊಂಡೇ ಹೋಗ್ಬೇಕಂತೆ" ತನ್ನಾಜ್ಞೆಯಲ್ಲವಿದು ಎನ್ನುವ ರೀತಿಯಲ್ಲಿ ಬೇಗಂ ಹೇಳುತ್ತಿದ್ದರೂ ಬಾನುಗೆ ತನ್ನಮ್ಮನೂ ಕೂಡಾ ತನ್ನ ಸ್ವಾತಂತ್ರ್ಯದ ಸಂಹಾರ ಮಾಡುತ್ತಿರುವಂತೆ ತೋರಿತು. " ಯಾಕಮ್ಮಾ ಇದು ? ನಾನೇನು ಇಷ್ಟು ದಿನ ಹಾಗೇ ಹೋಗಿ ಬರಲಿಲ್ವಾ..? ಮಾತು ಮಾತಿಗೂ ಬಾನೂಳ ದ್ವನಿ ಗದ್ಗಧಿತವಾಗುತ್ತಿತ್ತು. ಇಷ್ಟು ದಿನ ತನ್ನಣ್ಣನ ಅನುಮಾನದ ಪಹರೆಯನ್ನು ಸಹಿಸಿದ್ದಳು. ಕಿಂಚಿತ್ತೂ ಅನುಮಾನ ಬರದಂತೆ ನಡೆದಿದ್ದಳು ಕೋಡಾ. ಆದರೂ ತನ್ನಣ್ಣ ತನ್ನ ಸೌಂದರ್ಯ ಮುಚ್ಚುವ ಪ್ರಯತ್ನ ಮಾಡಿದ್ದು ಅವಳಲ್ಲಿ ಅತೀವ ದು:ಖ ತಂದಿತು. ಇಡೀ ತರಗತಿಯಲ್ಲಿ ಒಬ್ಬಳೇ ಇರುವ ತಾನು ಈ ಬುರುಖಾ ಧರಿಸಿ ಕುಳಿತುಕೊಳ್ಳುವುದನ್ನು ನೆನಪಿಸಿಕೊಳ್ಳಲೂ ಅವಳಿಂದ ಸಾಧ್ಯವಾಗಲಿಲ್ಲ. ಕಂಬನಿ ತುಂಬಿದ ಕಂಗಳಿಂದಲೇ " ಇಲ್ಲ, ಆಗೊಲ್ಲಮ್ಮ; ನನ್ನಿಂದ ಖಂಡೀತಾ ಸಾಧ್ಯವಿಲ್ಲ. ಈ ಈ ಕಾಲೇಜಿಗೆ ಹೋಗೋದನ್ನೇ ಬಿಡು ಅನ್ನು, ಬಿಡ್ತೀನಿ. ಆದ್ರೆ ಮುಸುಕಾಕ್ಕೊಂಡು ಕಾಲೇಜಿಗೆ ಹೋಗು ಅಂತ ಖಂಡಿತಾ ಹೇಳ್ಬೇಡಾ" ಎನ್ನುತ್ತಾ ಗೋಡೆಗೆ ತಲೆಕೊಟ್ಟು ರೋಧಿಸಲಾರಂಭಿಸಿದಳು. ಮಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಳಾದರೂ ಬೇಗಂ " ಹಾಂಗೆಲ್ಲ ಹಠ ಮಾಡ್ಬಾರ್ದಮ್ಮ. ನಮ್ಮ ರಕ್ಷಣೆಗೆ ನಾವಿದನ್ನು ಹಾಕೊಳ್ಲೇ ಬೇಕು. ನಾನು ನಿನ್ ಗಿಂತ ಸಣ್ಣೋಳಿದ್ದಾಗ್ಲೇ ಹಾಕ್ತಿದ್ದೆ. ಇದು ನಂ ಧರ್ಮದ ಸಂಪ್ರದಾಯ" ಎಂದರೂ ಬಾನು ಅವಳಾವ ಮಾತಿಗೂ ಕಿವಿಕೊಡದಂತೆ ರೋಧಿಸುತ್ತಲೇ " ಬರೀ ಬಟ್ಟೆ ನಮ್ಮ ಜೀವನಾನೇ ರಕ್ಷಿಸುತ್ತಾ..? ಇದಾವುದೂ ಇಲ್ದೆ ಇರೋ ನನ್ನ ಗೆಳತಿಯರಿಲ್ವಾ..? ಅವರದೂ ಜೀವ ಅಲ್ವಾ..? ಎಂದೆಲ್ಲಾ ಪ್ರಶ್ನಿಸಿದಳು. ಮಗಳ ಪ್ರಶ್ನೆಗಳಿಗೆ ಉತ್ತರ ಕಾಣದ ಬೇಗಂ ಒದ್ದೆ ಕಣ್ಣುಗಳಿಂದಲೇ ಒಳ ಹೋದರು. ಅಲ್ಲೇ ಕುಸಿದು ಕುಳಿತ ಬಾನು ಅಗಿನ್ನೂ ಕಾಲಡಿಯೇ ಬಿದ್ದಿದ್ದ ಬುರುಕಾವನ್ನು ಬೀಸಿ ಎಸೆದು, ತನ್ನ ಮೊಣಕಾಲುಗಳೆರಡನ್ನೂ ಕೈಗಳಿಂದ ಬಂಧಿಸಿ, ನಡುವೆ ತಲೆ ಹುದುಗಿಸಿ ಮುಸಿ-ಮುಸಿ ಅಳುತ್ತಾ ಕುಳಿತಳು. ಕುಳಿತ ಬಾನೂಳ ತಲೆಯಲ್ಲಿ ಸಾವಿರಗಟ್ಟಲೆ ಯೋಚನೆಗಳು ಹರಿದಾಡಿದವು. ನಡು ನಡುವೆ ಎರಡು ಬಾರಿ ಮಗಳನ್ನು ಸಮಾಧಾನಿಸಲು ಬಂದ ಬೇಗಂ ಅದು ಸಾಧ್ಯವಾಗದೇ ಕೈಚೆಲ್ಲಿ ಗುರುವಾರದ ಸಂತೆಗೆಂದು ಸಾಗರಕ್ಕೆ ಹೋದರು.
ಮಧ್ಯಾಹ್ನ ಊಟಕ್ಕೆ ಬಂದ ಹಮೀದ ಹೆಂಡತಿಯಿಂದ ಮನೆಯ ಪರಿಸ್ಥಿತಿಯನ್ನರಿತ ನಂತರ " ಇನ್ಮೇಲೆ ಬುರುಖಾ ಹಾಕದೆ ಹೊಸಲು ದಾಟಬಾರದು" ಎಂದಿದ್ದು, ಬಾನೂಳ ಕಿವಿಗೂ ಕೇಳಿ ಅನುರಣನಗೊಳ್ಳತೊಡಗಿತು. 'ಇನ್ನು ಮುಂದೆ ಪ್ರತಿದಿನವೂ ನನಗೆ ಭಾನುವಾರವೇ' ಎಂದು ಮನದಲ್ಲೇ ದುಃಖಿಸುತ್ತಾ ಬಾನು ಕುಳಿತಿದ್ದಾಗಲೇ ಅವಳಿಗೇ ಅರಿವಿಲ್ಲದೆ ಅಲ್ಲೇ ಮಂಪರು ಹತ್ತಿ ನಿದ್ದೆ ಬಂದು ಬಿಟ್ಟಿತ್ತು.! ಎಚ್ಚರವಾದಾಗ ಸಂಜೆಯಾಗಿತ್ತು. ಒಮ್ಮೆಗೇ ಕಣ್ಣು ಬಿಟ್ಟಾಗ ಎದುರಿಗೆ ತಾನೇ ಎಸೆದಿದ್ದ ಬುರುಕಾದ ಅಡಿಯಲ್ಲಿ ಇಲಿ ಕಡಿದು ಹಾಳು ಮಾಡಿದ್ದ ತನ್ನ ಆ ಕೆಂಪು ಚೂಡಿ ಸಿಕ್ಕಾಕಿಕೊಂಡಿರುವುದು ಮಸುಕು ಮಸುಕಾಗಿ ಕಾಣುತ್ತಿತ್ತು. ತನ್ನ ಆಸೆ, ಆಕಾಂಕ್ಷೆ, ಭಾವನೆಗಳ ರೂಪದಲ್ಲಿ ಚೂಡಿ ಬಿದ್ದಿದೆಯೇನೋ ಅನ್ನಿಸಿ ಕಿಟಕಿ ಸಂದಿಯಿಂದ ಹೊರಗೆ ನೋಡಿದರೆ ಬಾನಂಚಿನಲ್ಲಿ ಮೋಡದ ಮುಸುಕಿನಿಂದ ಮುಚ್ಚಲ್ಪಟ್ಟ ಸೂರ್ಯ ಮಸುಕು ಮಸುಕಾಗಿ ಕಾಣುತ್ತಿದ್ದ..!!

09 November 2009

ಕಳ್ಳ ಮನಸ್ಸು...!

ಸೋಮಾರಿ ತನವೆಂಬುದು ಹೆಗಲೇರಿ ಕುಳಿತುಬಿಟ್ಟಿತೆಂದರೆ ಮನಸ್ಸು ಕಳ್ಳ ಬೀಳಲಾರಂಭಿಸುತ್ತದೆ. ತಪ್ಪಿಸಿಕೊಳ್ಳಲೆತ್ನಿಸುವ ಮನಸ್ಸಿಗೆ ಸಿಗುವ ಕಳ್ಳದಾರಿಗಳೇ ಅನೇಕ. ಅದರಲ್ಲೂ ಈ ಬರೆಯುವ ವಿಚಾರದಲ್ಲಂತೂ ತಪ್ಪಿಸಿಕೊಳ್ಳಲು ಮನಸ್ಸು ಹುಡುಕುವ ನೆವಗಳು ಅಷ್ಟಿಷ್ಟಲ್ಲ. ಮೊದಮೊದಲು ನೆಲದ ಮೇಲೆ ಕುಳಿತು ಮೊಣಕೈಮಂಡಿಯೂರಿ ಕುಳಿತು ಬರೆಯತೊಡಗಿದಾಗ 'ಛೇ ಒಂದು ಟೇಬಲ್ಲು ಅಂತ ಇದ್ರೆ ಇನ್ನೂ ಹೆಚ್ಚಾಗಿ, ಬಹಳ ಹೊತ್ತು ಬರೆಯಬಹುದು' ಅನಿಸುತ್ತದೆ. ಅದೂ ಆಯ್ತು ಟೇಬಲ್ಲೂ ಬಂತು ಹೊಂದಿಕೆಯಾಗುವ ಕುರ್ಚಿಯೂ ಅಣಿಯಾಗುತ್ತೆ. ಆದರೆ ಮನಸು ಬರವಣಿಗೆಯಲ್ಲಿ ತೊಡಗಿತಾ ಹುಹುಂ ಹೀಗೆ ಕೈಯಲ್ಲಿ ಬರೆದು ಮತ್ತೆ ಕಂಪ್ಯೂಟರ್ ನಲ್ಲಿ ಟೈಪಿಸುವುದಕ್ಕಿಂತ ನೇರವಾಗಿ ಕಂಪ್ಯೂಟರ್ ಎದುರಿಗೇ ಕುಳಿತು ಯೋಚನೆಗಳನ್ನೆಲ್ಲಾ ಹಾಗೇ ಹಸಿಹಸಿಯಾಗಿ ಅಚ್ಚಿಸಬಹುದಲ್ಲಾ ಅಂತ ಯೋಚಿಸುತ್ತದೆ. ಇನ್ನು ಎಲ್ಲವೂ ಸರಿಯಾಗಿವೆ ಎಂದಿಟ್ಟುಕೊಂಡರೆ 'ಛೇ ಇವತ್ತು ಬೇಡ ಭಾನುವಾರ ಇಡೀ ದಿನ ರಜೆ ಇದೆಯಲ್ವಾ, ಅವತ್ತು ಬರೆಯೋಣ' ಎಂದು ಜಾರಿಕೊಳ್ಳುತ್ತದೆ. ಹೋಗಲಿ ಆ ಭಾನುವಾರವಾದರೂ ಬರೆಯಲು ತೊಡಗೀತಾ ಅಂದುಕೊಂಡರೆ 'ವಾರದಿಂದ ಬಾಕಿ ಉಳಿದ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು, ಒಂದು ಚಿಕ್ಕ ನಿದ್ರೆ ಮಾಡಿ ಕೂತು ಬಿಡೋಣ' ಎಂದು ತಪ್ಪಿಸಿಕೊಳ್ಳುತ್ತೆ. ಅಷ್ಟರಲ್ಲಿ ಸಂಜೆ ಆಗುತ್ತೆ, ನಾಳೆಯ ಕೆಲಸಕಾರ್ಯಗಳು ನೆನಪಾಗಿ ಮನಸ್ಸು ಆ ಕಡೆ ಹೊರಳುತ್ತೆ. ಹೀಗೆ ಮನಸ್ಸು ಇಲ್ಲದ್ದನ್ನು ಹುಡುಕುತ್ತಾ, ದಿನಗಳನ್ನು ಕಳೆಯುತ್ತಾ ವ್ಯಕ್ತಿತ್ವವನ್ನೇ ನಿಷ್ಪ್ರಯೋಜಕ ಗೊಳಿಸುತ್ತದೆ. ಇನ್ನು ಹಬ್ಬ-ಹರಿದಿನಗಳು ಬಂದರಂತೂ ಮುಗಿಯಿತು. ಊರಿಗೋಗಿ ಹಬ್ಬದ ಸಡಗರ ಮುಗಿಸಿ ಬರುವವರೆಗೂ ಮನಸ್ಸು ಒಂದಕ್ಷರ ಬರೆಯಲೂ ಮುಂದಾಗುವುದಿಲ್ಲ. ಹೀಗಾಗಿ ಒಮ್ಮೆ ಮನಸ್ಸಿಗೆ ಹೊಳೆದ ಒಂದು ವಿಚಾರ ಎಷ್ಟೋ ದಿನಗಳ ನಂತರ ಕೃತಿರೂಪಕ್ಕೆ ಇಳಿಯುತ್ತದೆ. ಇನ್ನೂ ಕೆಲವು ಮನಸಿನಲ್ಲೇ ಸತ್ತು ಮಲಗುತ್ತವೆ.

ನನಗೂ ಹೀಗೇ ಆಯ್ತು
ಇತ್ತೀಚೆಗೆ ಯಥೇಚ್ಚವಾಗಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಉತ್ತರ ಕರ್ನಾಕದ ಬಹುಪಾಲು ಹಳ್ಳಿಗಳು ನೆರೆಯಲ್ಲಿ ಕೊಚ್ಚಿಹೋಗಿ ಹಳ್ಳಿಗೆ ಹಳ್ಳಿಗಳೇ ನಾಶವಾಗಿ ಹೋದಾಗ, ಇಡೀ ಕರ್ನಾಕದ ಜನತೆಯೇ ಅತೀವ ಮಾನವೀಯತೆಯಿಂದ ನೆರೆಯ ಸಂತ್ರಸ್ತರ ನೆರವಿಗೆ ನಿಂತಾಗ. ಬ್ಲಾಗ್ ನಲ್ಲಿ ಹಾಕಲು ಒಂದು ಲೇಖನ ಬರೆಯಬೇಕೆಂದು ಕೊಂಡೆ ಅರ್ಧಂಬರ್ಧ ಬರೆದಿಟ್ಟೆ ಕೂಡಾ. ಅಷ್ಟರಲ್ಲಿ ದೀಪಾವಳಿ ಬಂತು ಊರಿಗೆ ಹೋಗುವ ಸಡಗರ. ಊರಿಂದ ಬಂದು ಪ್ರಕಟಿಸೋಣ ಅಂತಿದ್ದೆ. ಅಷ್ಟರಲ್ಲಿ ನೆರೆ ಇಳಿದಿತ್ತು. ನನ್ನ ಲೇಖನ ಅದರ ಅರ್ಥವನ್ನೂ ಕಳೆದುಕೊಂಡಿತ್ತು.
ತಿಂಗಳು ಕಳೆಯುತ್ತಾ ಬಂದರೂ ಬ್ಲಾಗ್ ಅಪ್ ಡೇಟ್ ಮಾಡದೇ ತಪ್ಪಿಸಿಕೊಳ್ಳುತ್ತಿರುವ ಬಗ್ಗೆ. ಕಾರಣ ಹೇಳಲಿಕ್ಕಾಗದೇ ಇಷ್ಟೆಲ್ಲಾ ಬರೆಯ ಬೇಕಾಯಿತು.

ಪರ್ಶು..,

06 October 2009

ಸಚ್ಚಿ ಕವನ

ಹಾಯ್ ಪ್ರೆಂಡ್ಸ್....

ಕ್ಷಮಿಸಿ ಹೇಳಿದಂತೆ ನಡೆದುಕೊಳ್ಳಲಾಗುತ್ತಿಲ್ಲ.. ಬ್ಲಾಗ್ ಪ್ರಾರಂಭಿಸಿದ ತರುವಾಯ ಪ್ರತಿವಾರ ಬರೆಯುತ್ತೇನೆ ಎಂದು ಹೇಳಿದ್ದೆನಾದರೂ, ಮೂರನೇ ವಾರದಲ್ಲೇ ಕೊಟ್ಟ ಮಾತಿಗೂ ತಪ್ಪಿದ್ದೇನೆ., ಇದಕ್ಕೆ ವೆಬ್ ಸೆನ್ಸ್ ಕಾರಣ ಎಂದು ಕುಂಟು ನೆವ ಹೇಳಲು ಮನಸ್ಸಾಗುತ್ತಿಲ್ಲ. ಆದರೆ ಈ ಬ್ಲಾಗ್ ನ ಲೇ-ಔಟ್ ಅನ್ನು ಸ್ವಲ್ಪ ಬದಲಾಯಿಸಿ ಬರೆಯಲು ಕೂರೋಣ ಎಂಬ ಉದ್ದೇಶದಿಂದಷ್ಟೇ ತಪ್ಪಿಸಿಕೊಂಡಿದ್ದೇನೆ. ಹೊಸ ಟೆಂಪ್ಲೆಟ್ ಒಂದನ್ನು ಹುಡುಕಿ ಇಲ್ಲಿ ಅಳವಡಿಸಲು ಮಾತ್ರ ಈ ವೆಬ್ ಸೆನ್ಸ್ ಸ್ವಲ್ಪ ತೊಡಕಾಗಿದೆ ಅಷ್ಟೆ. ಹಾಗೇ ಈ ಬ್ಲಾಗ್ ನ ಉದ್ದೇಶಕ್ಕೆ ಅನುಗುಣವಾದ ಕೆಲವು ವೆಬ್ ಲಿಂಕ್ ಗಳ ತಡಕಾಟದಲ್ಲಿದ್ದೇನೆ.. ನಿಮಗಾವುದಾದರೂ ಉಪಯುಕ್ತ ತಾಣ ಸಿಕ್ಕರೆ ಖಂಡಿತ ಮರೆಯದೆ ತಿಳಿಸಿ. ಈ ನಡುವೆ ನಮ್ಮ ಸಚ್ಚಿ (ಸಚ್ಚಿದಾನಂದ) ರವರು ತುಂಬಾ ಆಸ್ಥೆಯಿಂದ ತಮ್ಮ ಒಂದು ಕವನವನ್ನು ಕಳಿಸಿದ್ದಾರೆ. ಅದನ್ನೂ ಇಲ್ಲಿ ಪ್ರಕಟಿಸುತ್ತಿದ್ದೇನೆ. ಓದಿ, ನಿಮಗನಿಸಿದ್ದನ್ನು ಅವರಿಗೆ ತಿಳಿಸಿ. ಮುಂದಿನ ಬರಹದಲ್ಲಿ ಮತ್ತೆ ಸಿಕ್ತೀನಿ...





ಸಚ್ಚಿದಾನಂದರವರ



ಬೀದಿ ಹೈಕಳು


ನೋಡಿದ್ದೀರ ಬೀದಿ ಹೈಕಳ
ಏನೂ ಅರಿಯದ ಮಕ್ಕಳ
ದೇಹ ಮೂಳೆ ಚಕ್ಕಳ
ಮಾತಾಡ್ತಾವೆ ಉರಿದಂತೆ ಅರಳ
ಕಣ್ಣಲಿ ಆಸೆ ಪಳಪಳ
ಕನಸುಗಳು ತುಂಬಿದ ಮನಸ್ಸಿನ ಅಂಗಳ
ನಡತೆ ತೀರ ಸರಳ
ಧೈರ್ಯ ತುಂಬಾ ವಿರಳ
ಇವರ ಸ್ಥಿತಿಗತಿ ಬಹಳ ಕರಾಳ
ಇವರ ಉತ್ಸಾಹ ಮಾಡುತ್ತದೆ ಮರುಳ
ಇವರಿಗೆ ಮಾಮೂಲು ಬೈಗುಳ
ಇವರ ದಿನಚರಿ ಪೂರ್ತಿ ಜಗಳ
ಇವರ ನೋವು ಹಿಚುಕುತ್ತದೆ ಕರುಳ
ಇವರ ಸಾವು ಬಿಗಿಯುತ್ತದೆ ಕೊರಳ
ಬಿಸಿಲಲಿ ಬೆಂದು ಬಯಸಿವೆ ನೆರಳ
ಆಗಲಿ ಇವರಿಗೆ ಮಂಗಳ.
--------ಸಕ್ಕತ್ ಸಚ್ಚಿ

24 September 2009

ಬಲಗೈಯಿಂದ ಕೊಟ್ಟಿದ್ದು ಎಡಗೈಯಿಗೆ ತಿಳಿಯಬಾರದು


ಹಾಯ್ ಫ್ರೆಂಡ್ಸ್...

ಸ್ವಯಂಕೃತಾಪರಾಧದಿಂದಾಗಿ ಘಟಿಸುವ ಘಟನೆಗಳಲ್ಲಿ ನೊಂದವರಿಗೆ ಲಕ್ಷೋಪಲಕ್ಷ ಪರಿಹಾರವನ್ನು ನೀಡಿ, ನಮ್ಮ ಜನಪ್ರತಿನಿಧಿಗಳು ಪ್ರಚಾರ ಪಡೆಯುವಾಗಲೆಲ್ಲಾ ನನ್ನ ಮನಸ್ಸು ಕಸಿವಿಸಿಗೊಳ್ಳುತ್ತದೆ. ಪ್ರಸ್ತುದಲ್ಲಿ ನೊಂದವರನ್ನು ಸಂತೈಸುವ ನೆವದಲ್ಲಿ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಹಣದ ಚೆಕ್ಕನ್ನು ನೀಡುವ ಭಂಗಿಯ ಪೋಟೋಗಳು ರಾರಾಜಿಸುವಂತೆ ಮಾಡುವುದನ್ನು ಕಂಡಾಗ ಇವರು ಮುಂದೆ ಘಟಿಸಲಿರುವ ಇನ್ಯಾವುದೋ ಇಂತಹ ಘಟನೆಗೆ ಮುನ್ನುಡಿ ಬರೆಯುತ್ತಿದ್ದಾರಾ ಅನಿಸುತ್ತದೆ. ಕೆಲವು ತಿಂಗಳ ಹಿಂದೆ ಬೆಂಗಳೂರಿನ ಮೋರಿಯೊಂದರಲ್ಲಿ ಬಾಲಕ ಅಭಿಷೇಕ ಕೊಚ್ಚಿಕೊಂಡು ಹೋಗಿ ಆನಂತರ ನಮ್ಮ ಪ್ರತಿನಿಧಿಗಳು ಸಾಂತ್ವಾನದೊಂದಿಗೆ 'ಪರಿಹಾರ ಹಣ' ವನ್ನು ನೀಡುವಾಗ ಹೀಗೇ ಅನಿಸಿತ್ತು. ಮೊನ್ನೆ ಮೊನ್ನೆ ಇದೇ ಬೆಂಗಳೂರಿನ ಮೋರಿಯಲ್ಲಿ ಬಾಲಕ ವಿಜಯ್ ಕೂಡಾ ತೇಲಿ ಹೋಗಿ ಹೀಗೇ ಪರಿಹಾರದ ಹಣ ನೀಡುವಾಗಲೂ ಹೀಗೇ ಅನಿಸಿತು. ರಾಜ್ಯದ ರೈತನೊಬ್ಬ ಬದುಕಿಗೆ ಅಂಜಿ ಸಾವಿಗೆ ಶರಣಾದಾಗ 'ಸಾಲ ಭಾದೆ ತಾಳದೆ ರೈತನ ಆತ್ಮಹತ್ಯೆ' ಎಂದು ಸಾಂತ್ವಾನದೊಂದಿಗೆ ಹಣ ನೀಡಿದಾಗಲೂ ಮುಂದೊಂದು ಇಂತಹುದೇ ಘಟನೆಗೆ ಇದು ಪ್ರೇರೇಪಣೆಯಾಗಬಹುದಾ ಅನಿಸಿದೆ. ಅನಿಸುತ್ತಿದೆ.

ಇವೆಲ್ಲವೂ ಆಕಸ್ಮಿಕ ಘಟನೆಗಳಾಗಿರಬಹುದು ಆದರೆ ಮುಂದೆ ಘಟಿಸುವಂತಹವೂ ಆಕಸ್ಮಿಕವೇ ಆಗಿರುತ್ತವಾ...? ಈ ಜಗತ್ತಿನಲ್ಲಿ ಹಣದ ವ್ಯಾಮೋಹದಿಂದಾಗಿ ಎಂತೆಂತಹ ಘಟನೆಗಳು ಬೇಕಾದರೂ ಜರುಗಬಹುದು. ಹೆಣ್ಣು, ಹೊನ್ನು, ಮಣ್ಣು ಈ ಮೂರರಿಂದಾಗಿಯೇ ಈ ಧರೆಯಲ್ಲಿ ಅಕ್ರಮ, ಅನಾಚಾರಗಳು, ನಡೆಯುತ್ತಿವೆ ಎಂಬುದು ನಮಗೆ ಮಹಾಭಾರತದ ಕಾಲದಿಂದಲೂ ಗೊತ್ತಿರುವ ವಿಚಾರ. ಈ ಮೂರರಲ್ಲಿ ಹೆಣ್ಣನ್ನು ಹೊರತುಪಡಿಸಿ ಉಳಿದೆರಡರ ಹಿಂದಿರುವುದು ಮನುಷ್ಯನ ಹಣದ ವ್ಯಾಮೋಹ. ಈ ವ್ಯಾಮೋಹಕ್ಕೆ ಬಲಿಯಾದ ಮನುಷ್ಯ ಹಣದ ಗಳಿಕೆಗಾಗಿ ಇಂದು ಎಲ್ಲಾ ರೀತಿಯ ಕುಕೃತ್ಯಗಳನ್ನೂ ಮಾಡುತ್ತಿದ್ದಾನೆ. ಹಣಕ್ಕಾಗಿಯೇ ಹೊತ್ತು, ಹೆತ್ತು, ಸಾಕಿದ ತಂದೆ-ತಾಯಿಯನ್ನೂ ನಿರ್ದಯವಾಗಿ ಕೊಲೆಗೈದ ಮಕ್ಕಳಿಲ್ಲವೇ..? ಸೋದರ-ಸೋದರಿಯರನ್ನೇ ಹೆಣವಾಗಿಸಿದ ಸೋದರರಿಲ್ಲವೇ..? ಬಂಧುತ್ವವನ್ನೇ ಮರೆತು ಬಾಂಧವ್ಯಕ್ಕೆ ಬೆಂಕಿ ಇಟ್ಟ ಬಂಧುಗಳಿಲ್ಲವೇ..? ಹೀಗಿರುವಾಗ ಸುಲಭವಾಗಿ ಸಿಗುವ 'ಪರಿಹಾರದ ಹಣ'ಕ್ಕಾಗಿ ಇಂತಹ ಆಕಸ್ಮಿಕ ಘಟನೆಗಳನ್ನು ಸೃಷ್ಟಿಸುವ ನೀಚರಿರಲಾರರೆನ್ನಲಾದೀತಾ..?

ಸಾಲಭಾದೆಯಿಂದ ಸತ್ತ ರೈತನ ಕುಟುಂಬಕ್ಕೆ ಪರಿಹಾರದ ಹಣವನ್ನು ನೀಡುವುದನ್ನು ಟೀವಿಯಲ್ಲಿ ನೋಡುತ್ತಿದ್ದ ರೈತ ಮಹಿಳೆಯೊಬ್ಬಳು ತನ್ನ ಗಂಡನನ್ನುದ್ದೇಶಿಸಿ "ಥೂ ಮೂದೇವಿ, ನೀನೂ ಇದೀಯ ದಂಡಕ್ಕೆ, ನೋಡಲ್ಲಿ ಆ ಯಪ್ಪ ಸತ್ತು ಇಡೀ ಸಂಸಾರನ ಸುಕುವಾಗಿ ಇಟ್ಟ. ನೀನು ಇದ್ದೂ ಸತ್ತಂಗಿದೀಯ.." ಎಂದು ಮೂದಲಿಸುತ್ತಿದ್ದಳಂತೆ. ಇಂತಹ ಮಾತನ್ನು ಕೇಳಿದ ಆ ಗಂಡಿನ ಪೌರುಷ ಏನನ್ನು ನಿರ್ಧರಿಸಬಹುದು..? ದಿನಾಲು ಹೆಂಡತಿ ಮಕ್ಕಳೊಡನೆ ಬೈಯಿಸಿಕೊಂಡು ಇರುವುದಕ್ಕಿಂತ ಸಾವು ಅವನಿಗೆ ಸುಖಕರವಾಗಿ ತೋರಲಾರದಾ..? ತಾನು ಇನ್ನು ದುಡಿದು ಸಂಸಾರವನ್ನು ಸುಖವಾಗಿಡಲಾಗದು ಸತ್ತಾದರೂ ಅವರಿಗೆ ನೆಮ್ಮದಿ ನೀಡೋಣ ಎಂದು ನಮ್ಮ ರೈತ ಸ್ವಯಂಕೃತವಾಗಿ ಪರಿಹಾರ ಹಣದ ಆಸೆಯಿಂದ ಆತ್ಮಹತ್ಯೆಗೆ ಶರಣಾದರೆ ಯಾರನ್ನು ಹೊಣೆ ಮಾಡಬಹುದು..? ರೈತನೊಬ್ಬ ಸತ್ತ ತಕ್ಷಣ ಸಾಂತ್ವಾನ ಹೇಳುವ ನೆವದಲ್ಲಿ ಹೋಗಿ ಅವನ ಕುಟುಂಬಕ್ಕೆ ಹಣದ ಚೆಕ್ ಇಟ್ಟು 'ದು:ಖ' ಮರೆಸಲೆತ್ನಿಸುವ ನಮ್ಮ ವ್ಯವಸ್ಥೆಯ ರುವಾರಿಗಳು ಮತ್ತು ಅದನ್ನು ಯಥಾವತ್ತು ತೋರಿಸಿ ಪ್ರಚಾರನೀಡುವ ಮಾಧ್ಯಮಗಳು ಎಲ್ಲರೂ ಹೊಣೆಗಾರರೇ ಅಲ್ಲವೇ..?

ಹಾಗಂತ ಕುಟುಂಬದ ಆಧಾರ ಸ್ಥಂಭವನ್ನೇ ಕಳೆದುಕೊಂಡು ಕಂಗೆಟ್ಟ ಕುಟುಂಬಕ್ಕೆ ಆರ್ಥೀಕ ನೆರವೀಯುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯವಲ್ಲ. ಇದನ್ನೇ ವೈಭವೀಕರಿಸಿ ಪ್ರಚುರ ಪಡಿಸುವುದು ತಪ್ಪು. ನಮ್ಮಲ್ಲಿ ಒಂದು ಮಾತಿದೆ 'ಬಲಗೈಯಿಂದ ಕೊಟ್ಟಿದ್ದು ಎಡಗೈಯಿಗೆ ತಿಳಿಯಬಾರದು' ಹಾಗೆ ನಾವು ಇನ್ನೊಬ್ಬರಿಗೆ ನೆರವೀಯಬೇಕು. ಇಂತಹ ಒಂದು ಪದ್ದತಿಯನ್ನೂ ಹೀಗೆ ಆಕಸ್ಮಿಕವಾಗಿ ಮಡಿದವರ ಕುಟುಂಬಕ್ಕೆ ಸೂಕ್ತ ನೆರವು ನೀಡುವ ಸಂದರ್ಭದಲ್ಲಿ ಅನುಸರಿಸಬೇಕು.

ಅಭೀಷೇಕ್, ವಿಜಯ್ ಪ್ರಕರಣದಿಂದ ಪ್ರೇರಿತವಾಗಿ ಹಣದಾಸೆಗೆ ಯಾವ ತಾಯಿಯಾದರೂ ತನ್ನ ಕರುಳ ಕುಡಿಯನ್ನು ತೇಲಿಬಿಟ್ಟಾಳು ಎಚ್ಚರದಿಂದಿರಬೇಕು. ಒಬ್ಬ ರೈತನ ಸಾವಿನ ನಂತರ ದೊರಕಿದ ಹಣದಿಂದ ಪ್ರೇರಿತನಾಗಿ ಇನ್ನೊಬ್ಬ ಅಂತಹ ಹಣದ ಆಸೆಗೆ ಸಾವಿನೆಡೆಗೆ ನಡೆಯುವುದನ್ನೂ 'ರೈತರ ಆತ್ಮಹತ್ಯೆ'ಯ ಪಟ್ಟಿಯಲ್ಲಿ ಸ್ಥಾನ ಪಡೆಯುವುದನ್ನು ತಪ್ಪಿಸಬೇಕು.ನಮ್ಮ ಸಂವಹನ ಮಾಧ್ಯಮಗಳು ಈ ಎಡೆಗೆ ಸೂಕ್ತ ಗಮನ ಹರಿಸಬೇಕು. ನೀವೇನಂತೀರಾ...?

ಪರಶು..,
renukatanaya@gmail.com

17 September 2009

ಹೇಳಬೇಕೆನಿಸಿದ್ದು.

ಹಾಯ್ ಫ್ರೆಂಡ್ಸ್...

ನಾನು ಕಳೆದವಾರ ಬ್ಲಾಗ್ ಪ್ರಾರಂಭಿಸಿ ಬರೆದ ಬರಹದ ಮೇಲೆ ಎರಡು ತೀಕ್ಷ್ಣ ಪ್ರತಿಕ್ರಿಯೆಗಳು ಮೌಖಿಕವಾಗಿಯೇ ವ್ಯಕ್ತವಾದವು. ಅವುಗಳಲ್ಲಿ ಒಂದು ನೀವು ಹೀಗೆ ಏನೇನಕ್ಕೋ ಹೋಲಿಸಿಕೊಂಡು ಬರೆಯುವುದು ಸರಿಕಾಣದು ಎಂಬುದಾದರೆ ಇನ್ನೋಂದು ಪ್ರಥಮ ದಿನವೇ ಇಷ್ಟು ಉದ್ದುದ್ದವಾಗಿ ಬರೆದರೆ ಓದೋರ್ಯಾರು..? ಎಂಬುದು.

ಮೊದಲ ಪ್ರತಿಕ್ರಿಯೆಗೆ ಹೆಚ್ಚಿಗೆ ಏನನ್ನೂ ಹೇಳಲು ಇಚ್ಚಿಸುವುದಿಲ್ಲ. ಪ್ರಾರಂಭದಲ್ಲಿ ಶಿರ್ಷಿಕೆಗಳನ್ನು ಅರ್ಥೈಸಲು ಏನೇನು ಹೇಳಬೇಕಿತ್ತೋ ಅಷ್ಟನ್ನು ಮಾತ್ರ ಹೇಳಿದ್ದೇನೆ ಅಂದುಕೊಳ್ಳುತ್ತೇನೆ. ಎರಡನೆಯದರ ಬಗೆಗೆ ಹೇಳಬೇಕೆಂದರೆ ಕೊಂಚ ಸಮಯ, ತಾಳ್ಮೆಯಿಂದ ಓದುವ ಮನಸ್ಸು ನಿಮ್ಮದಾಗಿದ್ದರೆ ಅದೇನು ಮಹದ್ ಆಗಿರಲಿಲ್ಲ. ಮನುಷ್ಯ ಮನಸ್ಸು ಮಾಡಿದರೆ ಒಂದು ಗೋಲಿ ಗಾತ್ರದ ಕಲ್ಲನ್ನು ದಿನಾಲೂ ಅರೆದು ತೇದು ಚೂರು ಚೂರೇ ತಿಂದರೂ ಕೆಲವೇ ದಿನಗಳಲ್ಲಿ ಅದು ಇನ್ನಿಲ್ಲದಂತೆ ಮಾಡಬಹುದು. ಹಾಗೆಯೇ ಎಂತಹ ಬೃಹದ್ ಕೃತಿಯಾದರೂ ಅದರ ಗಾತ್ರದ ಕಲ್ಪನೆಯನ್ನು ಹೊರಗಿಟ್ಟು ಸಮಯ ಸಿಕ್ಕಾಗೆಲ್ಲಾ ಸ್ವಲ್ಪ, ಸ್ವಲ್ಪ ಓದಿ ಮುಗಿಸಿದರೂ ಅದು ಬೃಹತ್ ಎನಿಸುವುದೇ ಇಲ್ಲ. ಹೀಗಿರುವಾಗ ನನ್ನ ನಾಲ್ಕು ಪುಟದ ಬರಹವೇನು ಮಹಾ..!?

ನನಗೆ ಬಸ್ ಸ್ಟ್ಯಾಂಡಿನಲ್ಲಿ, ಹೋಟೇಲು-ಕ್ಯಾಂಟೀನುಗಳಲ್ಲಿ ಅಪರಿಚಿತರಾಗಿ ಸಿಕ್ಕವರು ಒಮ್ಮೊಮ್ಮೆ " ನೀವು ಸರ್ಕಾರದಿಂದ ಮಾಸಾಶನ ತಗೋಳ್ತಿದೀರಾ..? ಹೇಗೆ ಸಾರ್ ತಗೋಳೋದು" ಅಂತಲೋ ಅಥವಾ " ನೀವು ಬಸ್ ಪಾಸ್ ಮಾಡ್ಸಿದೀರಾ ಹೇಗೆ ಸಾರ್ ಮಾಡ್ಸೋದು" ಅಂತಲೋ ಕೇಳಿದ್ದಿದೆ. ತಮ್ಮ ಅಣ್ಣನ ಮಗನಿಗೋ, ತಮ್ಮನ ಮಗನಿಗೋ, ಚಿಕ್ಕಪ್ಪನ ಮಗನಿಗೋ, ದೊಡ್ಡಪ್ಪನ ಮಗನಿಗೋ ಇಂತಹ ಸಂಬಂಧಿಕರಿಗೋ ಅಥವಾ ಸ್ನೇಹಿತರಿಗೋ 'ನನ್ನಂತಹ ಯಾರಿಗೋ' ಚಿಕ್ಕ ಸಹಾಯ ಮಾಡೋಣವೆಂದೇ ಅವರೆಲ್ಲಾ ನನಗೆ ತಿಳಿದಿರಬಹುದೆಂಬ ದೃಷ್ಠಿಯಿಂದಲೇ ನನ್ನನ್ನು ಕೇಳಿರುತ್ತಾರೆ. ಆಗೆಲ್ಲಾ ನಾನು ಏನು ಹೇಳಬೇಕೆಂದು ತೋಚದೇ ಪೇಚಾಡಿದ್ದೇನೆ. ತಿಳಿದಷ್ಟನ್ನೇ ಹೇಳಿ ನುಣುಚಿಕೊಂಡಿದ್ದೇನೆ. ನಂತರದಲ್ಲಿ ನಾನೂ ನನಗೇ ಸಂಬಂಧಿಸಿದ ಇಂತಹ ಮಾಹಿತಿಗಳನ್ನೆಲ್ಲ ತಿಳಕೋ ಬೇಕು ಅಂತ ಅಂತರ್ಜಾಲವನ್ನೂ ಜಾಲಾಡಿದ್ದೇನೆ. ಬ್ಲಾಗ್ ಪರಿಚಿತವಾದ ಮೇಲೆ 'ನಮಗೆ' ಅನುಕೂಲವಾಗುವಂತಹ ಸಂಬಂಧಿಸಿದ ಮಾಹಿತಿಗಳನ್ನೆಲ್ಲಾ ಒಳಗೊಂಡ ಯಾವುದಾದರೂ ಬ್ಲಾಗ್ ಇರಬಹುದಾ ಎಂದು ಹುಡುಕಾಡಿದ್ದೇನೆ . ಎಲ್ಲೂ ಸಿಗದೇ ಹೀಗೆ ಹುಡುಕುವ ಬದಲು ನಾನೇ ಏಕೆ ಇಂತಹ ಬ್ಲಾಗೊಂದ ಪ್ರಾರಂಭಿಸಬಾರದು ಎಂಬ ಯೋಚನೆ ಬಂದಾಗ ಈ ಕಾರ್ಯಕ್ಕೆ ಕೈ ಹಾಕಿದೆ.

ಬ್ಲಾಗ್ ಪ್ರಾರಂಭಿಸಿಯಾಗಿದೆ, ಬಿಗ್ ಬಜಾರ್ ನಲ್ಲಿ ಅಗತ್ಯ ವಸ್ತುಗಳೆಲ್ಲವೂ ಒಂದೆಡೆ ದೊರಕುವಂತೆ, ಸಂಬಂಧಿಸಿದ ಮಾಹಿತಿಗಳೆಲ್ಲವೂ ಒಂದೆಡೆ ಲಭ್ಯವಿರುವ ಬ್ಲಾಗನ್ನು ರೂಪಿಸಬೇಕೆಂದಿದ್ದೇನೆ. ಅದಕ್ಕಾಗಿ ದಿನಾಲು ಅಪ್ ಡೇಟ್ ಮಾಡುವ ಗೋಜಿಗೆ ಹೋಗಲಾರೆ. ವಾರದಲ್ಲಿ ಒಂದು ದಿನ ಪ್ರತಿ ಗುರುವಾರ ಏನಾದರೂ ಬರೆಯುತ್ತೇನೆ. ನಡುನಡುವೆ ಸಂಬಂಧಿತ ಲಿಂಕ್ ಗಳನ್ನು ಹುಡುಕುಡುಕಿ ಜೋಡಿಸಬೇಕೆಂದಿದ್ದೇನೆ. ಕಾಲಾವಕಾಶವನ್ನು ತೆಗೆದುಕೊಂಡೇ ಬ್ಲಾಗ್ ಗೆ ಒಂದು ಸ್ಪಷ್ಟ ರೂಪ ನೀಡಲು ಬಯಸಿದ್ದೇನೆ.

ಇದಕ್ಕೆಲ್ಲಾ ನಿಮ್ಮ ಸಲಹೆ-ಸಹಕಾರ ಅತ್ಯಗತ್ಯ, ನಿಮಗೆ ತಿಳಿದಿದ್ದನ್ನು ಮತ್ತು ಈ ಬ್ಲಾಗ್ ಬಗ್ಗೆ ನಿಮ್ಮ ಯೋಜನೆಗಳನ್ನು ತಪ್ಪದೇ ನನ್ನ ಮೇಲ್ ಮೂಲಕ ಅಥವಾ ಖುದ್ಧಾಗಿ ತಿಳಿಸಿ. ನೀವೂ ಈ ಬ್ಲಾಗಿಗೆ ಸಂಬಂಧಿಸಿದಂತೆ ಏನೇನೇನು ಮಾಡಬಹುದು ಎಂಬುದನ್ನು ಮುಂದಿನ ಬರಹಗಳಲ್ಲಿ ಹೇಳುತ್ತೇನೆ....


ನಿಮ್ಮವನು
ಪರಶು..,

renukatanaya@gmail.com

10 September 2009

ಸ್ವಾಗತ

ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ



ನಿರ್ವಿಘ್ನಂ ಕುರುಮೇ ದೇವಾ ಸರ್ವ ಕಾರ್ಯೇಷು ಸರ್ವದಾ



ಪ್ರತಿಯೊಂದು ನೂತನ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವಾಗಲೂ ವಿಘ್ನನಿವಾರಕನನ್ನು ಸ್ತುತಿಸುವುದು ವಾಡಿಕೆ. ಇಲ್ಲಿಯೂ ಈ ಬ್ಲಾಗನ್ನು ಪ್ರಾರಂಭಿಸುವ ಸಂದರ್ಭದಲ್ಲಿ ವಕ್ರತುಂಡ ಮಹಾಕಾಯನಿಗೆ ವಿಶೇಷವಾಗಿ ನಮಿಸುತ್ತಿದ್ದೇನೆ. ವಾಡಿಕೆಗಾಗಿ ಮಾತ್ರವಲ್ಲ. ಅವನು ಈ ಬ್ಲಾಗಿನ ಅಧಿನಾಯಕ. ಅದು ಹೇಗೆ ಎಂದು ವಿವರಿಸುವ ಮೊದಲು ನಿಮಗೆಲ್ಲರಿಗೂ ಹೃತ್ಪೂರ್ವಕವಾದ, ಆತ್ಮೀಯವಾದ ಸ್ವಾಗತವನ್ನು ಕೋರುತ್ತೇನೆ. ವ್ಯಕ್ತಿಯೊಬ್ಬ ಹೊಸ ಮನೆಯನ್ನು ಕಟ್ಟಿ, ಗೃಹ ಪ್ರವೇಶದ ದಿನದಂದು ಬಾಗಿಲ ಬಳಿಯಲ್ಲಿಯೇ ನಿಂತು " ಓಹೋ ಈಗ ಬಂದಿರಾ... ಬನ್ನಿ ಬನ್ನಿ" ಎಂದು ಕೈ ಹಿಡಿದು ಸ್ವಾಗತಿಸುವಷ್ಟೇ ಆಪ್ತತೆಯಿಂದ ನಿಮ್ಮನ್ನೆಲ್ಲಾ ಸ್ವಾಗತಿಸುತ್ತಿದ್ದೇನೆ. ಎಲ್ಲರಿಗೂ ಆದರ ಪೂರ್ವಕ ಸ್ವಾಗತ-ಸುಸ್ವಾಗತ.



ಇಂದು ಒಂದು ವಿಶೇಷವಾದ ದಿನ. ಒಂಭತ್ತನೇ ತಾರೀಖು, ಒಂಭತ್ತನೇ ತಿಂಗಳು, ಎರಡು ಸಾವಿರದ ಒಂಭತ್ತನೇ ವರ್ಷ. ಹೀಗೆ ಮೂರೂ ಒಂಭತ್ತುಗಳು ಏಕರೇಖೆಯಲ್ಲಿ ನಿಂತ ದಿನ. ಇಂತಹ ಸಂಖ್ಯಾ ಸಮಾನತೆಯ ವಿಶೇಷ ದಿನಗಳಲ್ಲಿ ಏನಾದರೊಂದು ವಿಶೇಷವಾದದ್ದನ್ನು ಮಾಡಬೇಕು ಎಂಬ ತುಡಿತ ಬಹುತೇಕರಲ್ಲಿ ಇರುತ್ತದೆ. ಕೆಲವರು ಈ ದಿನದ ನೆನಪಿಗಾಗಿ ಒಡವೆ-ವಸ್ತ್ರ ಗಳನ್ನು ಕೊಳ್ಳುತ್ತಾರೆ, ಬೈಕು-ಕಾರು ಖರೀದಿಸುತ್ತಾರೆ, ಆಸ್ತಿ-ಪಾಸ್ತಿ ಕೊಳ್ಳುತ್ತಾರೆ, ಸ್ನೇಹಿತರೊಡಗೂಡಿ ಭೋಜನ ಮಾಡುತ್ತಾರೆ, ಪಾನಗೋಷ್ಠಿ ಏರ್ಪಡಿಸುತ್ತಾರೆ, ಗ್ರೂಫ್ ಫೋಟೋ ತೆಗೆಸಿಕೊಳ್ತಾರೆ ಹೀಗೆ ಅವರವರ ಅಭಿಲಾಷೆಗೆ ತಕ್ಕಂತೆ ನೆನಪಿನಲ್ಲುಳಿಯುವ ಏನಾದರೊಂದು ಕಾರ್ಯಕ್ಕೆ ಕೈ ಹಾಕುತ್ತಾರೆ. ಹೀಗೆ ನಾನೂ ಏನಾದರೊಂದು ಮಾಡಬೇಕಲ್ಲ ಅಂತ ಯೋಚಿಸುತ್ತಿದ್ದಾಗ ಥಟ್ಟನೆ ಯೋಚನೆಗೆ ಬಂದಿದ್ದು, ಈ ಬ್ಲಾಗ್ ತೆರೆಯುವ ಆಲೋಚನೆ. ಹೀಗೆ ಬಹುದಿನಗಳ ಹಿಂದೆಯೇ ಆಲೋಚನೆ ಮನಸ್ಸಿಗೆ ಬಂದು ರೂಪು-ರೇಷೆಗಳು ಸಿದ್ಧಗೊಳ್ಳುತ್ತಿರುವಾಗಲೇ ಮತ್ತೊಂದು ಶಂಕೆ ನನ್ನಲ್ಲಿ ತಲೆ ಎತ್ತಿತು. ಈಗಾಗಲೇ 'ನಮ್ಮದು' ಅಂತ 'ಪುನರ್ನವ' ಬ್ಲಾಗ್ ಇರುವಾಗ ನಾನು ಇನ್ನೊಂದನ್ನು ಪ್ರಾರಂಭಿಸುವುದು ಸರಿಯೇ ಎಂದು ನನ್ನನ್ನೆ ನಾನು ಪ್ರಶ್ನಿಸಿಕೊಂಡೆ. ಈ ಬಗ್ಗೆ ರೇವಪ್ಪರೊಡನೆ ಚರ್ಚಿಸಲಾಗಿ ಅವರು "ಅವಶ್ಯವಾಗಿ ತೆರಿರಿ" ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಲ್ಲದೆ, ಅಸೋಸಿಯೇಟ್ ಬ್ಲಾಗ್ ಗಳನ್ನು ತೆರೆಯುವಂತೆ ಪುನರ್ನವದಲ್ಲೂ ತಿಳಿಸಿದಾಗ 'ನಾನು-ನನ್ನಂತಹವರನ್ನು' ದೃಷ್ಠಿಯಲ್ಲಿಟ್ಟುಕೊಂಡು ಬ್ಲಾಗೊಂದ ತೆರೆಯುವ ನಿರ್ಧಾರ ತಾಳಿದೆ. ನನ್ನ ಯೋಚನೆ-ಯೋಜನೆಗಳ ಚಿಕ್ಕ ರೂಪವೇ ಈ 'ವಕ್ರವೃಕ್ಷ'
ಯಾಕೆ ಈ ಹೆಸರು..?

ಸರಿಯಾಗಿ ಉಚ್ಚರಿಸಲೂ ಆಗದ 'ವಕ್ರವೃಕ್ಷ' ಹೆಸರು ಈ ಬ್ಲಾಗಿಗೇಕೆ ಎನಿಸಬಹುದು. ಸಾಮಾನ್ಯವಾಗಿ ಎಲ್ಲಾ ಕಡೆ ಹೆಸರಿಡುವಾಗ ಅರ್ಥಬದ್ದವಾದ ಹೆಸರಿಡಬೇಕೆಂದೇ ಯೋಚಿಸಿ ಹೆಸರಿನ ಆಯ್ಕೆ ಮಾಡುತ್ತಾರೆ. ನಾನೂ ಸಹ ಬ್ಲಾಗಿನ ಉದ್ದೇಶಕ್ಕೆ ಅನುಗುಣವಾದ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಕೊಳ್ಳುತ್ತೇನೆ. ಮೊದಲು 'ವಕ್ರವೃಕ್ಷ' ಹೆಸರನ್ನು ನನ್ನ ವರ್ಷದ ದಿನಚರಿ ಪುಸ್ತಕದ ಶೀರ್ಷಿಕೆಯಾಗಿ ಬಳಸುತ್ತಿದ್ದೆ. ಅದ್ಯಾಕೋ ನನ್ನಲ್ಲಿ 'ನಾನೊಂದು ವಕ್ರ ವಕ್ರವಾಗಿ ಬೆಳೆದ ಮರದಂತೆ' ಎಂಬ ಆತ್ಮಾಭಿಮಾನ ಬೇರೂರಿಬಿಟ್ಟಿತ್ತು. ಅದಕ್ಕೆ ಸ್ಪೂರ್ತಿಯಾಗಿದ್ದುದು ಇಲ್ಲಿ ಉಪ ಶೀರ್ಷಿಕೆಯಾಗಿ ನೀಡಿರುವ 'ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?' ಎಂಬ ವಾಕ್ಯವಿರಬಹುದು. ಶ್ರೀಗಂಧದ ಮರ ಅಂಕು-ಡೊಂಕಾಗಿ, ವಕ್ರ-ವಕ್ರವಾಗಿ ಹೇಗೆ ಬೆಳೆದಿದ್ದರೂ ಸಹ ಅದು ಹೊರಸೂಸುವ ಸುಗಂಧದಲ್ಲೇನಾದರೂ ಕೊರತೆ ಕಂಡು ಬರುವುದೇ..? ಹಾಗೆಯೇ ಮನುಷ್ಯ ಕಪ್ಪಗೆ-ಕುಳ್ಳಗೆ, ದಪ್ಪಗೆ-ಗುಂಡಗೆ, ವಿಕಲ ಚೇತನನಾಗಿ, ವಕ್ರ-ವಕ್ರವಾಗಿ ಹೇಗೆ ಬೆಳೆದಿದ್ದರೂ ಸಹ ಅವರಲ್ಲಿನ ಪ್ರೀತಿ, ಸ್ನೇಹ, ಮಮತೆ ವಾತ್ಸಲ್ಯಗಳಾದಿಯಾದ ಸದ್ಗುಣಗಳ ಸುವಾನೆಗೆನೂ ಕೊರತೆ ಇರಲಾರದು. ವಕ್ರವಾಗಿ ಬೆಳೆದ ಶ್ರೀಗಂಧದ ವೃಕ್ಷದಲ್ಲೂ 'ಗಂಧ' ವೆಂಬುದು ಅದರ ನಯವಾದ ತಿರುಳಿನಲ್ಲಿರುವಂತೆ ಸದ್ಗುಣಗಳೂ ಸಹ ಮನುಷ್ಯನ ಪರಿಶುದ್ಧವಾದ ಆತ್ಮದಲ್ಲಿರುವುವು ಎಂಬುದು ನನ್ನ ನಂಬಿಕೆ. ಇಂತಹ ನಂಬಿಕೆಗಳ ನೆಪವಿಟ್ಟುಕೊಂಡು ಸೂಚಿಸಿರುವುದೇ ಈ ಹೆಸರು.


ಉದ್ದೇಶ-ಸದುದ್ದೇಶ

ಬ್ಲಾಗ್ ಪ್ರಾರಂಭಿಸಿರುವ ಉದ್ದೇಶ ಇದೇ ಎಂದು ಅಡಿಗೆರೆ ಎಳೆದಷ್ಟು ಸ್ಪಷ್ಟವಾಗಿ ಹೇಳಲಾಗದಿದ್ದರೂ 'ನಾನು-ನನ್ನಂತಹವರಿಗೆ' ಕಿಂಚಿತ್ತಾದರೂ ನೆರವೀಯಬೇಕೆಂಬ ಹಂಬಲ ಮನದಾಳದಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ಯಾರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಹವಣಿಸುತ್ತಿರುವೆವೋ ಅವರಿಗೆ ಸಹಕಾರಿಯಾಗುವಂತಹ, ಸ್ಪೂರ್ತಿಯಾಗುವಂತಹ ಲೇಖನಗಳನ್ನು ಬರೆದು, ಬರೆಯಿಸಿ ಪ್ರಕಟಿಸುವ, ತಮ್ಮ ಕೊರತೆಗಳನ್ನೂ ಮೀರಿ ನಿಂತು ಸಾಧನೆ ತೋರಿದವರನ್ನು ಶ್ಲಾಘಿಸುವ ಬಯಕೆಯಿದೆ. ಇಂತಹವರ ಏಳಿಗೆಗೆ ಶ್ರಮಿಸುತ್ತಿರುವ ಸರ್ಕಾರ, ಸಂಘ-ಸಂಸ್ಥೆಗಳ ಅಂತರ್ಜಾಲ ತಾಣಗಳನ್ನು ವೆಬ್ ಲಿಂಕ್ ನೀಡುವ ಉದ್ದೇಶವಿದೆ. ಸರಕಾರಗಳು ಹೊರತರುವ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಪರಿಚಿತರಿಂದ ಪರಿಚಯಿಸುವ ಸಂಕಲ್ಪವಿದೆ. ಅಷ್ಟೇ ಅಲ್ಲದೆ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ನಿಮ್ಮ ಲೇಖನಗಳನ್ನೂ, ಚಿಂತನೆಗೆ ಹಚ್ಚುವ ವೈಚಾರಿಕ ಬರಹಗಳನ್ನೂ ಪ್ರಕಟಿಸುತ್ತಾ ಕ್ರಿಯಾ ಶೀಲನಾಗಿರಬೇಕೆಂಬ ತುಡಿತವಿದೆ. ಇವೆಲ್ಲವಕ್ಕೂ ನಿಮ್ಮ ಸಲಹೆ, ಸಹಕಾರ, ಸ್ಪಂದನೆ, ಸಹಭಾಗಿತ್ವ ಅತ್ಯಗತ್ಯವಾಗಿದೆ.

ಪುನರ್ನವ ಎಂಬ ತಾಯಿಬೇರು



ಹೌದು, ಕರ್ನಾಟಕ ಸರ್ಕಾರ ಸಚಿವಾಲಯ ಕಿರಿಯ ಸಹಾಯಕರ ಬ್ಲಾಗೊಂದು ಪ್ರಾರಂಭ ಗೊಳ್ಳುವವರೆಗೂ ನನಗೆ ಅಂತರ್ಜಾಲ ಲೋಕದಲ್ಲಿ ಇಂತಹದೊಂದು ಬ್ಲಾಗ್ ವಲಯ ಇದೆ ಎನ್ನುವುದೇ ಗೊತ್ತಿರಲಿಲ್ಲ.! ಅಂದು ಸಚ್ಚಿಯ ನ್ಯೂ ಇಯರ್ ಪಾರ್ಟಿಯಲ್ಲಿ ರೇವಪ್ಪ " ನಾನೂ ಒಂದು ಬ್ಲಾಗ್ ತೆರೆದಿದೀನಿ, ಅದರಲ್ಲಿ ಈ ಫೋಟೋ ಹಾಕ್ತೀನಿ" ಅಂತ ತಮ್ಮ ಮೊಬೈಲಿನಿಂದ ಫೋಟೋ ಕ್ಲಿಕ್ಕಿಸಿದಾಗಲೂ ನನಗೆ ತಳ-ಬುಡ ಅರ್ಥವಾಗಿರಲಿಲ್ಲ..!! ಮರುದಿನ ರೇವಪ್ಪರಿಂದ ಪಡೆದಿದ್ದ ಬ್ಲಾಗ್ ವಿಳಾಸವನ್ನು ಇಂಟರ್ ನೆಟ್ ಎಕ್ಸ್ ಪ್ಲೋರರ್ ನಲ್ಲಿ ಟೈಪಿಸಿ ಎಂಟರ್ ಒತ್ತಿದಾಗಲೇ ನಾನು ಬ್ಲಾಗ್ ಎಂಬ ಮಹಾಮನೆಯ ಮೆಟ್ಟಿಲ ಮೇಲೆ ಬಂದು ಬಿದ್ದಿದ್ದೆ. ಅಂದಿನಿಂದ ಇಂದಿನವರೆಗೆ ನಾನು ನಡೆದ ಪಯಣ, ಪಡೆದ ಜ್ಞಾನ ನನ್ನನ್ನು ಈ ವಕ್ರವೃಕ್ಷವನ್ನು ಪೋಷಿಸುವ ಮಟ್ಟಕ್ಕೆ ತಂದು ನಿಲ್ಲಿಸಿರುವುದು. ನಾನಿಂದು ಏನೇನು ಅಳವಡಿಸಲು ಯೋಜಿಸಿರುವೆನೋ ಅವೆಲ್ಲವೂ ಪುನರ್ನವದ ಬಳುವಳಿಗಳೇ. ವೃಕ್ಷವೊಂದಕ್ಕೆ ಹುಟ್ಟಿನಿಂದಲೇ ಆಧಾರವಾಗಿರುವುದು ತಾಯಿಬೇರು. ಈ ವಕ್ರವೃಕ್ಷಕ್ಕೆ ಪುನರ್ನವವೇ ತಾಯಿಬೇರು. ಪುನರ್ನವದಿಂದ, ರೇವಪ್ಪರ ಮೂಲಕ ಕಲಿತದ್ದು ಬಹಳಷ್ಟು. ಪ್ರಾರಂಭದಲ್ಲಿ "ನಮ್ಮದು ಫೈವ್ ಸ್ಟಾರ್ ಹೋಟೆಲ್ ಇಲ್ಲಿ ಉತ್ಕೃಷ್ಟವಾದದ್ದನ್ನೇ ಬಡಿಸಲಾಗುವುದು" ಎಂದು ಹೇಳಿದ್ದ ರೇವಪ್ಪ ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಉತ್ಕೃಷ್ಠ, ಅತ್ಯುತ್ಕೃಷ್ಟವಾದ ಹೊಸ ಹೊಸ ಗೆಜೆಟ್ ಗಳನ್ನು ತಂದು ಕೂರಿಸುತ್ತಿದ್ದಾರೆ. ಅಷ್ಟೇ ಅಲ್ಲ ಅವುಗಳ ಕಾರ್ಯ ವೈಖರಿಯ ಬಗ್ಗೆನೂ ಸವಿವರವಾಗಿ ವಿವರಿಸುತ್ತಾರೆ. ಬ್ಲಾಗ್ ಬಗೆಗೆ ಬಹಳಷ್ಟನ್ನು ಕಲಿಸಿದ ರೇವಪ್ಪ ನಮಗೆಲ್ಲ 'ಬ್ಲಾಗ್ ಗುರು'ವಿನಂತಾಗಿದ್ದಾರೆ. ಪ್ರತಿ ಬಾರಿ ಬ್ಲಾಗ್ ನಲ್ಲಿ ಹೊಸದನ್ನು ಸೇರಿಸಿದಾಗಲೂ ಬ್ಲಾಗ್ ನಲ್ಲಿ ವಿವರಿಸುವುದಷ್ಟೇ ಅಲ್ಲ, ಖುದ್ದು, ನನ್ನ ಸೆಕ್ಷನ್ ಗೆ ಬಂದು ನನ್ನ ಟೇಬಲ್ ಎದುರು ಖುರ್ಚಿ ಎಳೆದು ಕೂತು, ಇದು ಹೀಗೆ, ಇದು ಹೀಗೀಗೆ ಎಂದು ವಿವರಿಸಿ, ವಿವರಿಸಿ ಹೇಳಿದ್ದಾರೆ. ಕೆಲವೊಮ್ಮೆ ಆಫೀಸು ಮುಗಿಸಿ ಮನೆಗೆ ಹೋಗುವಾಗಲೂ ನನ್ನ ಡೌಟುಗಳನ್ನು ಪರಿಹರಿಸಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ ನಾನು ಬ್ಲಾಗ್ ಪ್ರಾರಂಭಿಸಬೇಕೆಂದುಕೊಂಡ ಈ ದಿನ (09/09/09) ನಮ್ಮಲ್ಲಿ ಬ್ಲಾಗ್ ಸ್ಪಾಟ್ ಓಪನ್ ಆಗ್ತಾನೇ ಇರಲಿಲ್ಲ. ಬೆಳಿಗ್ಗೆಯಿಂದ ಪ್ರಯತ್ನ ಪಡುತ್ತಿದ್ದೆ. ನಡುವೆ ರೇವಪ್ಪನನ್ನು ಚಾಟ್ ಮೂಲಕ ಸಂಪರ್ಕಿಸಿ, ಎಲ್ಲವನ್ನೂ ಅವರೇ ಪ್ರಾರಂಭಿಸಲು ಕೇಳಿಕೊಂಡೆ. 'ತಾಳ್ಮೆ ಇರಲಿ ಸರಿಹೋಗುತ್ತೆ' ಎಂದರು ರೇವಪ್ಪ. ಸಂಜೆ ವರೆಗೂ ತಾಳ್ಮೆಯಿಂದಲೇ ಪ್ರಯತ್ನಿಸುತ್ತಿದ್ದೆ. ಪ್ರಾರಂಬಿಸಲನುವಾಗುವಂತಹ ಲಕ್ಷಣಗಳು ತೋರಲಿಲ್ಲವಾದ್ದರಿಂದ. ರೇವಪ್ಪನಿಗೆ ಸಕಲವನ್ನೂ ಮೇಲ್ ಮಾಡೋಣ ಎಂದು ಅಣಿಯಾಗಿ, ಕೊನೇ ಬಾರಿಗೆಂಬಂತೆ ಬ್ಲಾಗ್ ಸ್ಪಾಟ್ ತಲುಪಲು ಪ್ರಯತ್ನಿಸಿದೆ. ಅಂತೂ ಓಪನ್ ಆಯ್ತು. ಅದೇ ವೇಳೆಗೆ ನನ್ನ ಮೊಬೈಲ್ ಗೆ 'surprise' ಅಂತ ಮೆಸೇಜ್ ಒಂದು ಬಂತು, ನೋಡ್ತೀನಿ ರೇವಪ್ಪನಿಂದ..! ಬ್ಲಾಗ್ ಸ್ಪಾಟ್ ಈಗ ಓಪನ್ ಆಗಿದ್ದು ರೇವಪ್ಪಗೆ ಹೇಗೆ ತಿಳೀತು ಅಂತ ರಿಪ್ಲೆ ಬರೆಯುತ್ತಿದ್ದಾಗಲೇ ರೇವಪ್ಪ ನನ್ನೆದುರಿಗೇ ಹಾಜರ್..!! ಕೊನೆಗೆ ಈ ಬ್ಲಾಗ್ ಗೆ ಅಪ್ ಲೋಡ್ ಮಾಡುವ ಎಲ್ಲಾ ವಿಧಾನಗಳನ್ನೂ ನನಗೆ ವಿವರಿಸಿ ರೇವಪ್ಪ ತೆರಳಿದರು.

ಇಂತಿಪ್ಪ ರೇವಪ್ಪನ ಕ್ರಿಯೇಟಿವಿಟಿಯನ್ನು ಮೆಚ್ಚಲೇ ಬೇಕು. ಅವರ ಕ್ರಿಯಾಶೀಲತೆಗೆ ಈ ಒಂಭತ್ತು ತಿಂಗಳಲ್ಲಿ ಪುನರ್ನವದಲ್ಲಾದ ಬದಲಾವಣೆಗಳೇ ಸಾಕ್ಷಿ. ನನಗನಿಸುತ್ತದೆ ತುಂಬಾ ಫಾಸ್ಟ್ ಆಗಿ ಊಟ ಮುಗಿಸುವವರು ತಮ್ಮ ಕೆಲಸದಲ್ಲೂ ತುಂಬಾ ಕ್ರಿಯಾಶೀಲರಾಗಿರುತ್ತಾರೆನೋ ಅಂತ. ಪರೀಕ್ಷಿಸಬೇಕೆಂದರೆ, ರೇವಪ್ಪನನ್ನು ಒಂದು ದಿನ ನಿಮ್ಮೊಂದಿಗೆ ಊಟಕ್ಕೆ ಆಹ್ವಾನಿಸಿ, ಅಥವಾ ಅವರು ಕರೆದಾಗ ತಪ್ಪದೇ ಹೋಗಿ. ಹಾಗೇ ಇನ್ನೂ ಒಂದು ಬೇರು ರೂಪುಗೊಂಡಿದೆ ಅದು ಮಂಜುದಾದಾರ 'ಗೆಳೆಯರ ಅಂಗಳ'. ಇಂತಹ ಬೇರು-ಬಿಳಲುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ. ವೃಕ್ಷ frout ಇಲ್ಲದಿದ್ದರೆ ಬದುಕಬಲ್ಲದು, root ಇಲ್ಲದಿದ್ದರೆ ಸಾಧ್ಯವಿಲ್ಲವಲ್ಲವೇ..?



ಗಣೇಶನೇಕೆ ಅಧಿನಾಯಕ
-

ನಾನು ಮೊದಲೇ ಹೇಳಿದಂತೆ ನಮ್ಮ ಗಣೇಶ ಈ ಬ್ಲಾಗಿನ ಅಧಿನಾಯಕ. ಅವನೂ ನಮ್ಮ 'ಕೆಟಗರಿಗೆ' ಸೇರಿದವನು ಕಣ್ರೀ.. ಅದು ಹೇಗೆ ಅಂತೀರಾ ದೇಹದ ಯಾವುದೇ ಸದೃಶ ಅಂಗಗಳು ಶಾಶ್ವತವಾಗಿ ಊನವಾಗಿದ್ರೂ ಅವರನ್ನು ವಿಕಲಚೇತನರು ಅಂತೀವಿ. ಗಣೇಶನಿಗೂ ಒಂದು ದಂತ ಭಗ್ನವಾಗಿದೆ ಆದುದರಿಂದ ಅವನೂ..... ಹೋಗ್ರೀ ಒಂದು ಹಲ್ಲು ಮುರಿದಿದ್ದಕ್ಕೇ ವಿಕಲಾತೀತ ಅನ್ನೋಕಾಗುತ್ತಾ ಅಂತೀರಾ? ನಮ್ಮ ನಿಮ್ಮಂತಹ ದಂತವಾಗಿದ್ರೆ ಅನ್ನೋಕಾಗೊಲ್ಲ ಆದರೆ ಅವನದು ಗಜದಂತ ನೋಡಿ, ಅದಕ್ಕೆ. ಹಾಗಂತ ಧನ್ವಂತರಿ ಏನು ಸರ್ಟಿಫಿಕೇಟ್ ಕೊಟ್ಟಿದ್ನಾ ಅಂತೀರಾ..? ಅದರ ಅವಶ್ಯಕತೆ ಅವನಿಗೆ ಇರಲಿಲ್ಲ. 'ನನ್ನ ಒಂದು ಹಲ್ಲು ಮುರಿದಿದೆ' ಎಂದು ಯಾವಾಗಲೂ ಗಣೇಶ ಕೀಳರಿಮೆಯಿಂದ ಹಿಂಜರಿಯಲಿಲ್ಲ. ತನ್ನ ನ್ಯೂನತೆಯನ್ನು ಮರೆತು ಅಥವಾ ಅದನ್ನು ಗಣನೆಗೆ ತೆಗೆದುಕೊಳ್ಳದ ಗಣನಾಯಕ ಸಕಲ ಕಾರ್ಯಗಳಲ್ಲೂ ಅಗ್ರಪೂಜೆಗೆ ಪಾತ್ರನಾದ. ಅದೆಲ್ಲಾ ಸರಿ ಈ ಗಜವದನನನ್ನು ಏಕದಂತ ನನ್ನಾಗಿ ಮಾಡಿದವರು ಯಾರು ಗೊತ್ತಾ..? ಮತ್ಯಾರೂ ಅಲ್ಲ ಆ ಪರಶುರಾಮ. ಅದೇನಾಯ್ತು ಅಂತ ಹೇಳ್ತೀನಿ ಕೇಳಿ. ಒಮ್ಮೆ ಕೈಲಾಸದಲ್ಲಿ ಪಾರ್ವತಿ-ಪರಮೇಶ್ವರರು ಒಂದು ಗಹನವಾದ ವಿಚಾರವನ್ನು ಚರ್ಚಿಸಲು ತೊಡಗುತ್ತಾರೆ. ಆಗ ಅಲ್ಲೇ ಇದ್ದ ತುಂಟ ಗಣಪ ಡಿಸ್ಟರ್ಬ್ ಮಾಡುತ್ತಿರುತ್ತಾನೆ, ಇದನ್ನು ಮನಗಂಡ ದಂಪತಿ ಗಣೇಶನನ್ನು ಕರೆದು " ನೋಡು ಪುಟ್ಟಾ, ನಾವು ಏಕಾಂತದಲ್ಲಿ ಏನನ್ನೋ ಮಾತನಾಡುವುದಿದೆ. ನೀನು ಹೊರಗೆ ನಿಂತು, ನಮ್ಮ ಅಪ್ಪಣೆ ಇಲ್ಲದೆ ಯಾರೂ ಒಳಗೆ ಬಾರದಂತೆ ಕಾಯುತ್ತಿರು" ಎನ್ನುತ್ತಾರೆ. ಮಾತಾ-ಪಿತರ ಮಾತಿಗೆ ತಲೆಬಾಗಿದ ನಮ್ಮ ಗಣೇಶ ಕೈಲಾಸದ ದ್ವಾರದಲ್ಲಿ ದ್ವಾರ ಪಾಲಕನಾಗಿ ಕಾವಲು ನಿಲ್ಲುತ್ತಾನೆ. ಇತ್ತ ಪಾರ್ವತಿ ಪರಮೇಶ್ವರರು ಜಗದ್ವಿಚಾರಗಳ ವಿವೇಚಿತ ಚಿಂತನಾತ್ಮಕ ಚರ್ಚೆಗೆ ತೊಡಗುತ್ತಾರೆ. ಸತಿ-ಪತಿಯರಿಗೆ ಈ ಜಗತ್ತೇ ಅವರ ಸಂಸಾರವಾದುದರಿಂದ ಒಂದರ್ಥದಲ್ಲಿ ಸಾಂಸಾರಿಕ ಜೀವನದ ಆಗು-ಹೋಗುಗಳ ಬಗ್ಗೆ ಮಾತಿಗೆ ಕುಳಿತಿರುತ್ತಾರೆ. ಹೀಗಿರುವಾಗ ತನ್ನಘೋರ ತಪಶ್ಯಕ್ತಿಯಿಂದ ಪರಶಿವನಿಂದಲೇ 'ಪರಶು'ವನ್ನು ಪಡೆದವನೂ, ಪಿತೃವಾಕ್ಯ ಪರಿಪಾಲಕನೆಂದು ಜಗದ್ವಿಖ್ಯಾತನಾದವನೂ, ರೇಣುಕಾತನಯನೂ ಆದ ಪರಶುರಾಮನು ಯಾವುದೋ ಒಂದು ಅರ್ಜೆಂಟ್ ಕೆಲಸದ ನಿಮಿತ್ತ ಪರಮೇಶ್ವರನನ್ನು ಕಾಣಲು ಕೈಲಾಸದೆಡೆ ಓಡಿ ಬರುತ್ತಾನೆ. ಕೈಲಾಸದ ದ್ವಾರದೆಡೆ ಯಾರೋ ದೌಡಾಯಿಸುವುದನ್ನು ಕಂಡ ಗಣೇಶ ಅವನನ್ನು ತಡೆಯಲು ಸಜ್ಜಾಗುತ್ತಾನೆ. ಇದನ್ನು ನಿರೀಕ್ಷಿಸದೇ ಎಂದಿನಂತೆ ಬರುತ್ತಿದ್ದ ಪರಶುರಾಮನು ಕ್ಷಣವೊತ್ತು ಅವಕ್ಕಾದರೂ ಸಾವರಿಸಿಕೊಂಡು, ಒಳ ಬಿಡುವಂತೆ ಗಣೇಶನನ್ನು ನಯವಾಗಿ ಕೇಳುತ್ತಾನೆ. ಪರಶುರಾಮನ ಯಾವ ಬೆಣ್ಣೆ ಮಾತಿಗೂ ಬೆಲೆ ಕೊಡದೆ ಗಣೇಶ " ಮಾತಾ-ಪಿತರು ಏಕಾಂತದಲ್ಲಿದ್ದಾರೆ. ಸ್ವಲ್ಪಹೊತ್ತು ಬಿಟ್ಟು ಬನ್ನಿ" ಎಂಬಂತೆ ಆಜ್ಞಾಪಿಸುತ್ತಾನೆ. ಎಲ್ಲಾ ವಿಧದಲ್ಲೂ ಹೇಳಿ ನೋಡಿದ ಪರಶುರಾಮನು ತಾಳ್ಮೆಗೆಟ್ಟು ಗದರಿಸಿ ಹೇಳುತ್ತಾನೆ. ಅವನ ಗದರಿಕೆಗೂ ಕ್ಯಾರೇ ಅನ್ನದೇ ಗಣೇಶ ತನ್ನ ಪಟ್ಟನ್ನೇ ಬಿಗಿ ಹಿಡಿಯುತ್ತಾನೆ. ಹೀಗೆ ರೇಣುಕಾತನಯನಿಗೂ ಪಾರ್ವತಿತನಯನಿಗೂ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿ ಇಬ್ಬರೂ ಯುದ್ಧಕ್ಕೆ ಅಣಿಯಾಗುತ್ತಾರೆ. ಇವರ ಮಾತು, ಕೃತ್ಯಗಳ ಪರಿಣಾಮದಿಂದ ತ್ರಿಲೋಕಗಳೂ ಕಂಪಿಸುತ್ತವೆ. ಪರಶುರಾಮನ ಪ್ರತಿಯೊಂದು ತಂತ್ರಕ್ಕೂ ಪ್ರತಿತಂತ್ರ ರೂಪಿಸಿ ಗಣೇಶನು ಪರಶುರಾಮನನ್ನೇ ಎದುರಿಸುತ್ತಾನೆ. ಇದರಿಂದ ಹತಾಶೆಗೊಂಡಂತಾದ ರೇಣುಕಾತನಯನು ತನ್ನಲ್ಲಿರುವ 'ಪರಶು' ಆಯುಧವನ್ನು ಮಂತ್ರಿಸಿ ಗಣೇಶನೆಡೆ ಬಿಡುತ್ತಾನೆ.ಪರಿಣಾಮವಾಗಿ ಕೈಲಾಸವೇ ಒಂದರೆಕ್ಷಣ ಗಡ ಗಡ ಗಡ ನಡುಗುತ್ತದೆ. ಇದರಿಂದ ಎಚ್ಚೆತ್ತವರಾದ ಪಾರ್ವತಿ-ಪರಮೇಶ್ವರರು ಹೊರಬಂದು ನೋಡುವಷ್ಟರಲ್ಲಿ, ಗಣೇಶನ ಕುತ್ತಿಗೆಯನ್ನು ಕತ್ತರಿಸಲು ಚಿಮ್ಮಿ ಬಂದ ಆಯುಧ ಅವನ ಬೃಹತ್ ಶಕ್ತಿಗೆ ಬೆದರಿ ಅವನ ಒಂದು ದಂತವನ್ನು ಮಾತ್ರ ಬೇಧಿಸಿ ಮುಂದೆ ಸಾಗುತ್ತದೆ. ಪರಮೇಶ್ವರನನ್ನು ಕಂಡೊಡನೆ ರೇಣುಕಾತನಯನ ಸಿಟ್ಟು ಕರಿಗಿ ನೀರಾಗುತ್ತದೆ. ಗಣೇಶನಲ್ಲೂ ಕ್ಷಮೆ ಕೋರಿ ಅವನಿಗೆ ತಲೆಬಾಗುತ್ತಾನೆ. ಆದರೂ ಗಣೇಶನ ಮುದ್ದಾದ ಒಂದು ದಂತ ಕೈಲಾಸದ ಧರೆಗುರುಳಿರುತ್ತದೆ. ಹೀಗೆ ರೇಣುಕಾತನಯನಿಂದಾಗಿ ಏಕದಂತನಾದ ನಮ್ಮ ಗಣೇಶನನ್ನು ವಕ್ರವೃಕ್ಷದ ಅಧಿನಾಯಕ ನನ್ನಾಗಿ ಅನುಸ್ಥಾಪಿಸಲಾಗಿದೆ.
ಅರಿಕೆ

ನಾನು ಪುನರ್ನವದಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳಲಾಗಲಿಲ್ಲ ಎಂಬ ಅಳುಕು ಸಹಜವಾಗಿಯೇ ಇದೆಯಾದರೂ 'ಅಗೋಚರವಾಗಿ' ನಾನಿದ್ದೇನೆ ಅನಿಸುತ್ತಿದೆ, ಪ್ರತಿ ಬಾರಿಯೂ ನನ್ನನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇದು ಹೀಗೆ ಎನ್ನುತ್ತಲೇ ತಿದ್ದಿದ, ತಿಳಿಸಿದ, ಕಲಿಸಿದ ನಿಮಗೆ ಕೃತಜ್ಞತೆಗಳು. ನೀಮ್ಮ ಸಲಹೆ, ಸಹಕಾರಗಳ ಸವಿಜಲವನ್ನು ವಕ್ರವೃಕ್ಷಕ್ಕೂ ಎರೆದು ಸೊಂಪಾಗಿ ಬೆಳೆಸಲು ನೆರವಾಗುತ್ತೀರೆಂಬ ದೃಢ ನಂಬಿಕೆ ನನ್ನಲ್ಲಿದೆ.....

ನಮಸ್ಕಾರ.....

ಪರಶು..,
ನಿಮಗೇನೆನೆಸಿತು..?

ಇಲ್ಲಿಗೆ ಬರೆಯಿರಿ

renukatanaya@gmail.com