ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

24 September 2009

ಬಲಗೈಯಿಂದ ಕೊಟ್ಟಿದ್ದು ಎಡಗೈಯಿಗೆ ತಿಳಿಯಬಾರದು


ಹಾಯ್ ಫ್ರೆಂಡ್ಸ್...

ಸ್ವಯಂಕೃತಾಪರಾಧದಿಂದಾಗಿ ಘಟಿಸುವ ಘಟನೆಗಳಲ್ಲಿ ನೊಂದವರಿಗೆ ಲಕ್ಷೋಪಲಕ್ಷ ಪರಿಹಾರವನ್ನು ನೀಡಿ, ನಮ್ಮ ಜನಪ್ರತಿನಿಧಿಗಳು ಪ್ರಚಾರ ಪಡೆಯುವಾಗಲೆಲ್ಲಾ ನನ್ನ ಮನಸ್ಸು ಕಸಿವಿಸಿಗೊಳ್ಳುತ್ತದೆ. ಪ್ರಸ್ತುದಲ್ಲಿ ನೊಂದವರನ್ನು ಸಂತೈಸುವ ನೆವದಲ್ಲಿ ಎಲ್ಲಾ ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಹಣದ ಚೆಕ್ಕನ್ನು ನೀಡುವ ಭಂಗಿಯ ಪೋಟೋಗಳು ರಾರಾಜಿಸುವಂತೆ ಮಾಡುವುದನ್ನು ಕಂಡಾಗ ಇವರು ಮುಂದೆ ಘಟಿಸಲಿರುವ ಇನ್ಯಾವುದೋ ಇಂತಹ ಘಟನೆಗೆ ಮುನ್ನುಡಿ ಬರೆಯುತ್ತಿದ್ದಾರಾ ಅನಿಸುತ್ತದೆ. ಕೆಲವು ತಿಂಗಳ ಹಿಂದೆ ಬೆಂಗಳೂರಿನ ಮೋರಿಯೊಂದರಲ್ಲಿ ಬಾಲಕ ಅಭಿಷೇಕ ಕೊಚ್ಚಿಕೊಂಡು ಹೋಗಿ ಆನಂತರ ನಮ್ಮ ಪ್ರತಿನಿಧಿಗಳು ಸಾಂತ್ವಾನದೊಂದಿಗೆ 'ಪರಿಹಾರ ಹಣ' ವನ್ನು ನೀಡುವಾಗ ಹೀಗೇ ಅನಿಸಿತ್ತು. ಮೊನ್ನೆ ಮೊನ್ನೆ ಇದೇ ಬೆಂಗಳೂರಿನ ಮೋರಿಯಲ್ಲಿ ಬಾಲಕ ವಿಜಯ್ ಕೂಡಾ ತೇಲಿ ಹೋಗಿ ಹೀಗೇ ಪರಿಹಾರದ ಹಣ ನೀಡುವಾಗಲೂ ಹೀಗೇ ಅನಿಸಿತು. ರಾಜ್ಯದ ರೈತನೊಬ್ಬ ಬದುಕಿಗೆ ಅಂಜಿ ಸಾವಿಗೆ ಶರಣಾದಾಗ 'ಸಾಲ ಭಾದೆ ತಾಳದೆ ರೈತನ ಆತ್ಮಹತ್ಯೆ' ಎಂದು ಸಾಂತ್ವಾನದೊಂದಿಗೆ ಹಣ ನೀಡಿದಾಗಲೂ ಮುಂದೊಂದು ಇಂತಹುದೇ ಘಟನೆಗೆ ಇದು ಪ್ರೇರೇಪಣೆಯಾಗಬಹುದಾ ಅನಿಸಿದೆ. ಅನಿಸುತ್ತಿದೆ.

ಇವೆಲ್ಲವೂ ಆಕಸ್ಮಿಕ ಘಟನೆಗಳಾಗಿರಬಹುದು ಆದರೆ ಮುಂದೆ ಘಟಿಸುವಂತಹವೂ ಆಕಸ್ಮಿಕವೇ ಆಗಿರುತ್ತವಾ...? ಈ ಜಗತ್ತಿನಲ್ಲಿ ಹಣದ ವ್ಯಾಮೋಹದಿಂದಾಗಿ ಎಂತೆಂತಹ ಘಟನೆಗಳು ಬೇಕಾದರೂ ಜರುಗಬಹುದು. ಹೆಣ್ಣು, ಹೊನ್ನು, ಮಣ್ಣು ಈ ಮೂರರಿಂದಾಗಿಯೇ ಈ ಧರೆಯಲ್ಲಿ ಅಕ್ರಮ, ಅನಾಚಾರಗಳು, ನಡೆಯುತ್ತಿವೆ ಎಂಬುದು ನಮಗೆ ಮಹಾಭಾರತದ ಕಾಲದಿಂದಲೂ ಗೊತ್ತಿರುವ ವಿಚಾರ. ಈ ಮೂರರಲ್ಲಿ ಹೆಣ್ಣನ್ನು ಹೊರತುಪಡಿಸಿ ಉಳಿದೆರಡರ ಹಿಂದಿರುವುದು ಮನುಷ್ಯನ ಹಣದ ವ್ಯಾಮೋಹ. ಈ ವ್ಯಾಮೋಹಕ್ಕೆ ಬಲಿಯಾದ ಮನುಷ್ಯ ಹಣದ ಗಳಿಕೆಗಾಗಿ ಇಂದು ಎಲ್ಲಾ ರೀತಿಯ ಕುಕೃತ್ಯಗಳನ್ನೂ ಮಾಡುತ್ತಿದ್ದಾನೆ. ಹಣಕ್ಕಾಗಿಯೇ ಹೊತ್ತು, ಹೆತ್ತು, ಸಾಕಿದ ತಂದೆ-ತಾಯಿಯನ್ನೂ ನಿರ್ದಯವಾಗಿ ಕೊಲೆಗೈದ ಮಕ್ಕಳಿಲ್ಲವೇ..? ಸೋದರ-ಸೋದರಿಯರನ್ನೇ ಹೆಣವಾಗಿಸಿದ ಸೋದರರಿಲ್ಲವೇ..? ಬಂಧುತ್ವವನ್ನೇ ಮರೆತು ಬಾಂಧವ್ಯಕ್ಕೆ ಬೆಂಕಿ ಇಟ್ಟ ಬಂಧುಗಳಿಲ್ಲವೇ..? ಹೀಗಿರುವಾಗ ಸುಲಭವಾಗಿ ಸಿಗುವ 'ಪರಿಹಾರದ ಹಣ'ಕ್ಕಾಗಿ ಇಂತಹ ಆಕಸ್ಮಿಕ ಘಟನೆಗಳನ್ನು ಸೃಷ್ಟಿಸುವ ನೀಚರಿರಲಾರರೆನ್ನಲಾದೀತಾ..?

ಸಾಲಭಾದೆಯಿಂದ ಸತ್ತ ರೈತನ ಕುಟುಂಬಕ್ಕೆ ಪರಿಹಾರದ ಹಣವನ್ನು ನೀಡುವುದನ್ನು ಟೀವಿಯಲ್ಲಿ ನೋಡುತ್ತಿದ್ದ ರೈತ ಮಹಿಳೆಯೊಬ್ಬಳು ತನ್ನ ಗಂಡನನ್ನುದ್ದೇಶಿಸಿ "ಥೂ ಮೂದೇವಿ, ನೀನೂ ಇದೀಯ ದಂಡಕ್ಕೆ, ನೋಡಲ್ಲಿ ಆ ಯಪ್ಪ ಸತ್ತು ಇಡೀ ಸಂಸಾರನ ಸುಕುವಾಗಿ ಇಟ್ಟ. ನೀನು ಇದ್ದೂ ಸತ್ತಂಗಿದೀಯ.." ಎಂದು ಮೂದಲಿಸುತ್ತಿದ್ದಳಂತೆ. ಇಂತಹ ಮಾತನ್ನು ಕೇಳಿದ ಆ ಗಂಡಿನ ಪೌರುಷ ಏನನ್ನು ನಿರ್ಧರಿಸಬಹುದು..? ದಿನಾಲು ಹೆಂಡತಿ ಮಕ್ಕಳೊಡನೆ ಬೈಯಿಸಿಕೊಂಡು ಇರುವುದಕ್ಕಿಂತ ಸಾವು ಅವನಿಗೆ ಸುಖಕರವಾಗಿ ತೋರಲಾರದಾ..? ತಾನು ಇನ್ನು ದುಡಿದು ಸಂಸಾರವನ್ನು ಸುಖವಾಗಿಡಲಾಗದು ಸತ್ತಾದರೂ ಅವರಿಗೆ ನೆಮ್ಮದಿ ನೀಡೋಣ ಎಂದು ನಮ್ಮ ರೈತ ಸ್ವಯಂಕೃತವಾಗಿ ಪರಿಹಾರ ಹಣದ ಆಸೆಯಿಂದ ಆತ್ಮಹತ್ಯೆಗೆ ಶರಣಾದರೆ ಯಾರನ್ನು ಹೊಣೆ ಮಾಡಬಹುದು..? ರೈತನೊಬ್ಬ ಸತ್ತ ತಕ್ಷಣ ಸಾಂತ್ವಾನ ಹೇಳುವ ನೆವದಲ್ಲಿ ಹೋಗಿ ಅವನ ಕುಟುಂಬಕ್ಕೆ ಹಣದ ಚೆಕ್ ಇಟ್ಟು 'ದು:ಖ' ಮರೆಸಲೆತ್ನಿಸುವ ನಮ್ಮ ವ್ಯವಸ್ಥೆಯ ರುವಾರಿಗಳು ಮತ್ತು ಅದನ್ನು ಯಥಾವತ್ತು ತೋರಿಸಿ ಪ್ರಚಾರನೀಡುವ ಮಾಧ್ಯಮಗಳು ಎಲ್ಲರೂ ಹೊಣೆಗಾರರೇ ಅಲ್ಲವೇ..?

ಹಾಗಂತ ಕುಟುಂಬದ ಆಧಾರ ಸ್ಥಂಭವನ್ನೇ ಕಳೆದುಕೊಂಡು ಕಂಗೆಟ್ಟ ಕುಟುಂಬಕ್ಕೆ ಆರ್ಥೀಕ ನೆರವೀಯುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯವಲ್ಲ. ಇದನ್ನೇ ವೈಭವೀಕರಿಸಿ ಪ್ರಚುರ ಪಡಿಸುವುದು ತಪ್ಪು. ನಮ್ಮಲ್ಲಿ ಒಂದು ಮಾತಿದೆ 'ಬಲಗೈಯಿಂದ ಕೊಟ್ಟಿದ್ದು ಎಡಗೈಯಿಗೆ ತಿಳಿಯಬಾರದು' ಹಾಗೆ ನಾವು ಇನ್ನೊಬ್ಬರಿಗೆ ನೆರವೀಯಬೇಕು. ಇಂತಹ ಒಂದು ಪದ್ದತಿಯನ್ನೂ ಹೀಗೆ ಆಕಸ್ಮಿಕವಾಗಿ ಮಡಿದವರ ಕುಟುಂಬಕ್ಕೆ ಸೂಕ್ತ ನೆರವು ನೀಡುವ ಸಂದರ್ಭದಲ್ಲಿ ಅನುಸರಿಸಬೇಕು.

ಅಭೀಷೇಕ್, ವಿಜಯ್ ಪ್ರಕರಣದಿಂದ ಪ್ರೇರಿತವಾಗಿ ಹಣದಾಸೆಗೆ ಯಾವ ತಾಯಿಯಾದರೂ ತನ್ನ ಕರುಳ ಕುಡಿಯನ್ನು ತೇಲಿಬಿಟ್ಟಾಳು ಎಚ್ಚರದಿಂದಿರಬೇಕು. ಒಬ್ಬ ರೈತನ ಸಾವಿನ ನಂತರ ದೊರಕಿದ ಹಣದಿಂದ ಪ್ರೇರಿತನಾಗಿ ಇನ್ನೊಬ್ಬ ಅಂತಹ ಹಣದ ಆಸೆಗೆ ಸಾವಿನೆಡೆಗೆ ನಡೆಯುವುದನ್ನೂ 'ರೈತರ ಆತ್ಮಹತ್ಯೆ'ಯ ಪಟ್ಟಿಯಲ್ಲಿ ಸ್ಥಾನ ಪಡೆಯುವುದನ್ನು ತಪ್ಪಿಸಬೇಕು.ನಮ್ಮ ಸಂವಹನ ಮಾಧ್ಯಮಗಳು ಈ ಎಡೆಗೆ ಸೂಕ್ತ ಗಮನ ಹರಿಸಬೇಕು. ನೀವೇನಂತೀರಾ...?

ಪರಶು..,
renukatanaya@gmail.com

17 September 2009

ಹೇಳಬೇಕೆನಿಸಿದ್ದು.

ಹಾಯ್ ಫ್ರೆಂಡ್ಸ್...

ನಾನು ಕಳೆದವಾರ ಬ್ಲಾಗ್ ಪ್ರಾರಂಭಿಸಿ ಬರೆದ ಬರಹದ ಮೇಲೆ ಎರಡು ತೀಕ್ಷ್ಣ ಪ್ರತಿಕ್ರಿಯೆಗಳು ಮೌಖಿಕವಾಗಿಯೇ ವ್ಯಕ್ತವಾದವು. ಅವುಗಳಲ್ಲಿ ಒಂದು ನೀವು ಹೀಗೆ ಏನೇನಕ್ಕೋ ಹೋಲಿಸಿಕೊಂಡು ಬರೆಯುವುದು ಸರಿಕಾಣದು ಎಂಬುದಾದರೆ ಇನ್ನೋಂದು ಪ್ರಥಮ ದಿನವೇ ಇಷ್ಟು ಉದ್ದುದ್ದವಾಗಿ ಬರೆದರೆ ಓದೋರ್ಯಾರು..? ಎಂಬುದು.

ಮೊದಲ ಪ್ರತಿಕ್ರಿಯೆಗೆ ಹೆಚ್ಚಿಗೆ ಏನನ್ನೂ ಹೇಳಲು ಇಚ್ಚಿಸುವುದಿಲ್ಲ. ಪ್ರಾರಂಭದಲ್ಲಿ ಶಿರ್ಷಿಕೆಗಳನ್ನು ಅರ್ಥೈಸಲು ಏನೇನು ಹೇಳಬೇಕಿತ್ತೋ ಅಷ್ಟನ್ನು ಮಾತ್ರ ಹೇಳಿದ್ದೇನೆ ಅಂದುಕೊಳ್ಳುತ್ತೇನೆ. ಎರಡನೆಯದರ ಬಗೆಗೆ ಹೇಳಬೇಕೆಂದರೆ ಕೊಂಚ ಸಮಯ, ತಾಳ್ಮೆಯಿಂದ ಓದುವ ಮನಸ್ಸು ನಿಮ್ಮದಾಗಿದ್ದರೆ ಅದೇನು ಮಹದ್ ಆಗಿರಲಿಲ್ಲ. ಮನುಷ್ಯ ಮನಸ್ಸು ಮಾಡಿದರೆ ಒಂದು ಗೋಲಿ ಗಾತ್ರದ ಕಲ್ಲನ್ನು ದಿನಾಲೂ ಅರೆದು ತೇದು ಚೂರು ಚೂರೇ ತಿಂದರೂ ಕೆಲವೇ ದಿನಗಳಲ್ಲಿ ಅದು ಇನ್ನಿಲ್ಲದಂತೆ ಮಾಡಬಹುದು. ಹಾಗೆಯೇ ಎಂತಹ ಬೃಹದ್ ಕೃತಿಯಾದರೂ ಅದರ ಗಾತ್ರದ ಕಲ್ಪನೆಯನ್ನು ಹೊರಗಿಟ್ಟು ಸಮಯ ಸಿಕ್ಕಾಗೆಲ್ಲಾ ಸ್ವಲ್ಪ, ಸ್ವಲ್ಪ ಓದಿ ಮುಗಿಸಿದರೂ ಅದು ಬೃಹತ್ ಎನಿಸುವುದೇ ಇಲ್ಲ. ಹೀಗಿರುವಾಗ ನನ್ನ ನಾಲ್ಕು ಪುಟದ ಬರಹವೇನು ಮಹಾ..!?

ನನಗೆ ಬಸ್ ಸ್ಟ್ಯಾಂಡಿನಲ್ಲಿ, ಹೋಟೇಲು-ಕ್ಯಾಂಟೀನುಗಳಲ್ಲಿ ಅಪರಿಚಿತರಾಗಿ ಸಿಕ್ಕವರು ಒಮ್ಮೊಮ್ಮೆ " ನೀವು ಸರ್ಕಾರದಿಂದ ಮಾಸಾಶನ ತಗೋಳ್ತಿದೀರಾ..? ಹೇಗೆ ಸಾರ್ ತಗೋಳೋದು" ಅಂತಲೋ ಅಥವಾ " ನೀವು ಬಸ್ ಪಾಸ್ ಮಾಡ್ಸಿದೀರಾ ಹೇಗೆ ಸಾರ್ ಮಾಡ್ಸೋದು" ಅಂತಲೋ ಕೇಳಿದ್ದಿದೆ. ತಮ್ಮ ಅಣ್ಣನ ಮಗನಿಗೋ, ತಮ್ಮನ ಮಗನಿಗೋ, ಚಿಕ್ಕಪ್ಪನ ಮಗನಿಗೋ, ದೊಡ್ಡಪ್ಪನ ಮಗನಿಗೋ ಇಂತಹ ಸಂಬಂಧಿಕರಿಗೋ ಅಥವಾ ಸ್ನೇಹಿತರಿಗೋ 'ನನ್ನಂತಹ ಯಾರಿಗೋ' ಚಿಕ್ಕ ಸಹಾಯ ಮಾಡೋಣವೆಂದೇ ಅವರೆಲ್ಲಾ ನನಗೆ ತಿಳಿದಿರಬಹುದೆಂಬ ದೃಷ್ಠಿಯಿಂದಲೇ ನನ್ನನ್ನು ಕೇಳಿರುತ್ತಾರೆ. ಆಗೆಲ್ಲಾ ನಾನು ಏನು ಹೇಳಬೇಕೆಂದು ತೋಚದೇ ಪೇಚಾಡಿದ್ದೇನೆ. ತಿಳಿದಷ್ಟನ್ನೇ ಹೇಳಿ ನುಣುಚಿಕೊಂಡಿದ್ದೇನೆ. ನಂತರದಲ್ಲಿ ನಾನೂ ನನಗೇ ಸಂಬಂಧಿಸಿದ ಇಂತಹ ಮಾಹಿತಿಗಳನ್ನೆಲ್ಲ ತಿಳಕೋ ಬೇಕು ಅಂತ ಅಂತರ್ಜಾಲವನ್ನೂ ಜಾಲಾಡಿದ್ದೇನೆ. ಬ್ಲಾಗ್ ಪರಿಚಿತವಾದ ಮೇಲೆ 'ನಮಗೆ' ಅನುಕೂಲವಾಗುವಂತಹ ಸಂಬಂಧಿಸಿದ ಮಾಹಿತಿಗಳನ್ನೆಲ್ಲಾ ಒಳಗೊಂಡ ಯಾವುದಾದರೂ ಬ್ಲಾಗ್ ಇರಬಹುದಾ ಎಂದು ಹುಡುಕಾಡಿದ್ದೇನೆ . ಎಲ್ಲೂ ಸಿಗದೇ ಹೀಗೆ ಹುಡುಕುವ ಬದಲು ನಾನೇ ಏಕೆ ಇಂತಹ ಬ್ಲಾಗೊಂದ ಪ್ರಾರಂಭಿಸಬಾರದು ಎಂಬ ಯೋಚನೆ ಬಂದಾಗ ಈ ಕಾರ್ಯಕ್ಕೆ ಕೈ ಹಾಕಿದೆ.

ಬ್ಲಾಗ್ ಪ್ರಾರಂಭಿಸಿಯಾಗಿದೆ, ಬಿಗ್ ಬಜಾರ್ ನಲ್ಲಿ ಅಗತ್ಯ ವಸ್ತುಗಳೆಲ್ಲವೂ ಒಂದೆಡೆ ದೊರಕುವಂತೆ, ಸಂಬಂಧಿಸಿದ ಮಾಹಿತಿಗಳೆಲ್ಲವೂ ಒಂದೆಡೆ ಲಭ್ಯವಿರುವ ಬ್ಲಾಗನ್ನು ರೂಪಿಸಬೇಕೆಂದಿದ್ದೇನೆ. ಅದಕ್ಕಾಗಿ ದಿನಾಲು ಅಪ್ ಡೇಟ್ ಮಾಡುವ ಗೋಜಿಗೆ ಹೋಗಲಾರೆ. ವಾರದಲ್ಲಿ ಒಂದು ದಿನ ಪ್ರತಿ ಗುರುವಾರ ಏನಾದರೂ ಬರೆಯುತ್ತೇನೆ. ನಡುನಡುವೆ ಸಂಬಂಧಿತ ಲಿಂಕ್ ಗಳನ್ನು ಹುಡುಕುಡುಕಿ ಜೋಡಿಸಬೇಕೆಂದಿದ್ದೇನೆ. ಕಾಲಾವಕಾಶವನ್ನು ತೆಗೆದುಕೊಂಡೇ ಬ್ಲಾಗ್ ಗೆ ಒಂದು ಸ್ಪಷ್ಟ ರೂಪ ನೀಡಲು ಬಯಸಿದ್ದೇನೆ.

ಇದಕ್ಕೆಲ್ಲಾ ನಿಮ್ಮ ಸಲಹೆ-ಸಹಕಾರ ಅತ್ಯಗತ್ಯ, ನಿಮಗೆ ತಿಳಿದಿದ್ದನ್ನು ಮತ್ತು ಈ ಬ್ಲಾಗ್ ಬಗ್ಗೆ ನಿಮ್ಮ ಯೋಜನೆಗಳನ್ನು ತಪ್ಪದೇ ನನ್ನ ಮೇಲ್ ಮೂಲಕ ಅಥವಾ ಖುದ್ಧಾಗಿ ತಿಳಿಸಿ. ನೀವೂ ಈ ಬ್ಲಾಗಿಗೆ ಸಂಬಂಧಿಸಿದಂತೆ ಏನೇನೇನು ಮಾಡಬಹುದು ಎಂಬುದನ್ನು ಮುಂದಿನ ಬರಹಗಳಲ್ಲಿ ಹೇಳುತ್ತೇನೆ....


ನಿಮ್ಮವನು
ಪರಶು..,

renukatanaya@gmail.com

10 September 2009

ಸ್ವಾಗತ

ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ



ನಿರ್ವಿಘ್ನಂ ಕುರುಮೇ ದೇವಾ ಸರ್ವ ಕಾರ್ಯೇಷು ಸರ್ವದಾ



ಪ್ರತಿಯೊಂದು ನೂತನ ಕೆಲಸ-ಕಾರ್ಯಗಳನ್ನು ಪ್ರಾರಂಭಿಸುವಾಗಲೂ ವಿಘ್ನನಿವಾರಕನನ್ನು ಸ್ತುತಿಸುವುದು ವಾಡಿಕೆ. ಇಲ್ಲಿಯೂ ಈ ಬ್ಲಾಗನ್ನು ಪ್ರಾರಂಭಿಸುವ ಸಂದರ್ಭದಲ್ಲಿ ವಕ್ರತುಂಡ ಮಹಾಕಾಯನಿಗೆ ವಿಶೇಷವಾಗಿ ನಮಿಸುತ್ತಿದ್ದೇನೆ. ವಾಡಿಕೆಗಾಗಿ ಮಾತ್ರವಲ್ಲ. ಅವನು ಈ ಬ್ಲಾಗಿನ ಅಧಿನಾಯಕ. ಅದು ಹೇಗೆ ಎಂದು ವಿವರಿಸುವ ಮೊದಲು ನಿಮಗೆಲ್ಲರಿಗೂ ಹೃತ್ಪೂರ್ವಕವಾದ, ಆತ್ಮೀಯವಾದ ಸ್ವಾಗತವನ್ನು ಕೋರುತ್ತೇನೆ. ವ್ಯಕ್ತಿಯೊಬ್ಬ ಹೊಸ ಮನೆಯನ್ನು ಕಟ್ಟಿ, ಗೃಹ ಪ್ರವೇಶದ ದಿನದಂದು ಬಾಗಿಲ ಬಳಿಯಲ್ಲಿಯೇ ನಿಂತು " ಓಹೋ ಈಗ ಬಂದಿರಾ... ಬನ್ನಿ ಬನ್ನಿ" ಎಂದು ಕೈ ಹಿಡಿದು ಸ್ವಾಗತಿಸುವಷ್ಟೇ ಆಪ್ತತೆಯಿಂದ ನಿಮ್ಮನ್ನೆಲ್ಲಾ ಸ್ವಾಗತಿಸುತ್ತಿದ್ದೇನೆ. ಎಲ್ಲರಿಗೂ ಆದರ ಪೂರ್ವಕ ಸ್ವಾಗತ-ಸುಸ್ವಾಗತ.



ಇಂದು ಒಂದು ವಿಶೇಷವಾದ ದಿನ. ಒಂಭತ್ತನೇ ತಾರೀಖು, ಒಂಭತ್ತನೇ ತಿಂಗಳು, ಎರಡು ಸಾವಿರದ ಒಂಭತ್ತನೇ ವರ್ಷ. ಹೀಗೆ ಮೂರೂ ಒಂಭತ್ತುಗಳು ಏಕರೇಖೆಯಲ್ಲಿ ನಿಂತ ದಿನ. ಇಂತಹ ಸಂಖ್ಯಾ ಸಮಾನತೆಯ ವಿಶೇಷ ದಿನಗಳಲ್ಲಿ ಏನಾದರೊಂದು ವಿಶೇಷವಾದದ್ದನ್ನು ಮಾಡಬೇಕು ಎಂಬ ತುಡಿತ ಬಹುತೇಕರಲ್ಲಿ ಇರುತ್ತದೆ. ಕೆಲವರು ಈ ದಿನದ ನೆನಪಿಗಾಗಿ ಒಡವೆ-ವಸ್ತ್ರ ಗಳನ್ನು ಕೊಳ್ಳುತ್ತಾರೆ, ಬೈಕು-ಕಾರು ಖರೀದಿಸುತ್ತಾರೆ, ಆಸ್ತಿ-ಪಾಸ್ತಿ ಕೊಳ್ಳುತ್ತಾರೆ, ಸ್ನೇಹಿತರೊಡಗೂಡಿ ಭೋಜನ ಮಾಡುತ್ತಾರೆ, ಪಾನಗೋಷ್ಠಿ ಏರ್ಪಡಿಸುತ್ತಾರೆ, ಗ್ರೂಫ್ ಫೋಟೋ ತೆಗೆಸಿಕೊಳ್ತಾರೆ ಹೀಗೆ ಅವರವರ ಅಭಿಲಾಷೆಗೆ ತಕ್ಕಂತೆ ನೆನಪಿನಲ್ಲುಳಿಯುವ ಏನಾದರೊಂದು ಕಾರ್ಯಕ್ಕೆ ಕೈ ಹಾಕುತ್ತಾರೆ. ಹೀಗೆ ನಾನೂ ಏನಾದರೊಂದು ಮಾಡಬೇಕಲ್ಲ ಅಂತ ಯೋಚಿಸುತ್ತಿದ್ದಾಗ ಥಟ್ಟನೆ ಯೋಚನೆಗೆ ಬಂದಿದ್ದು, ಈ ಬ್ಲಾಗ್ ತೆರೆಯುವ ಆಲೋಚನೆ. ಹೀಗೆ ಬಹುದಿನಗಳ ಹಿಂದೆಯೇ ಆಲೋಚನೆ ಮನಸ್ಸಿಗೆ ಬಂದು ರೂಪು-ರೇಷೆಗಳು ಸಿದ್ಧಗೊಳ್ಳುತ್ತಿರುವಾಗಲೇ ಮತ್ತೊಂದು ಶಂಕೆ ನನ್ನಲ್ಲಿ ತಲೆ ಎತ್ತಿತು. ಈಗಾಗಲೇ 'ನಮ್ಮದು' ಅಂತ 'ಪುನರ್ನವ' ಬ್ಲಾಗ್ ಇರುವಾಗ ನಾನು ಇನ್ನೊಂದನ್ನು ಪ್ರಾರಂಭಿಸುವುದು ಸರಿಯೇ ಎಂದು ನನ್ನನ್ನೆ ನಾನು ಪ್ರಶ್ನಿಸಿಕೊಂಡೆ. ಈ ಬಗ್ಗೆ ರೇವಪ್ಪರೊಡನೆ ಚರ್ಚಿಸಲಾಗಿ ಅವರು "ಅವಶ್ಯವಾಗಿ ತೆರಿರಿ" ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಲ್ಲದೆ, ಅಸೋಸಿಯೇಟ್ ಬ್ಲಾಗ್ ಗಳನ್ನು ತೆರೆಯುವಂತೆ ಪುನರ್ನವದಲ್ಲೂ ತಿಳಿಸಿದಾಗ 'ನಾನು-ನನ್ನಂತಹವರನ್ನು' ದೃಷ್ಠಿಯಲ್ಲಿಟ್ಟುಕೊಂಡು ಬ್ಲಾಗೊಂದ ತೆರೆಯುವ ನಿರ್ಧಾರ ತಾಳಿದೆ. ನನ್ನ ಯೋಚನೆ-ಯೋಜನೆಗಳ ಚಿಕ್ಕ ರೂಪವೇ ಈ 'ವಕ್ರವೃಕ್ಷ'
ಯಾಕೆ ಈ ಹೆಸರು..?

ಸರಿಯಾಗಿ ಉಚ್ಚರಿಸಲೂ ಆಗದ 'ವಕ್ರವೃಕ್ಷ' ಹೆಸರು ಈ ಬ್ಲಾಗಿಗೇಕೆ ಎನಿಸಬಹುದು. ಸಾಮಾನ್ಯವಾಗಿ ಎಲ್ಲಾ ಕಡೆ ಹೆಸರಿಡುವಾಗ ಅರ್ಥಬದ್ದವಾದ ಹೆಸರಿಡಬೇಕೆಂದೇ ಯೋಚಿಸಿ ಹೆಸರಿನ ಆಯ್ಕೆ ಮಾಡುತ್ತಾರೆ. ನಾನೂ ಸಹ ಬ್ಲಾಗಿನ ಉದ್ದೇಶಕ್ಕೆ ಅನುಗುಣವಾದ ಹೆಸರನ್ನೇ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಕೊಳ್ಳುತ್ತೇನೆ. ಮೊದಲು 'ವಕ್ರವೃಕ್ಷ' ಹೆಸರನ್ನು ನನ್ನ ವರ್ಷದ ದಿನಚರಿ ಪುಸ್ತಕದ ಶೀರ್ಷಿಕೆಯಾಗಿ ಬಳಸುತ್ತಿದ್ದೆ. ಅದ್ಯಾಕೋ ನನ್ನಲ್ಲಿ 'ನಾನೊಂದು ವಕ್ರ ವಕ್ರವಾಗಿ ಬೆಳೆದ ಮರದಂತೆ' ಎಂಬ ಆತ್ಮಾಭಿಮಾನ ಬೇರೂರಿಬಿಟ್ಟಿತ್ತು. ಅದಕ್ಕೆ ಸ್ಪೂರ್ತಿಯಾಗಿದ್ದುದು ಇಲ್ಲಿ ಉಪ ಶೀರ್ಷಿಕೆಯಾಗಿ ನೀಡಿರುವ 'ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?' ಎಂಬ ವಾಕ್ಯವಿರಬಹುದು. ಶ್ರೀಗಂಧದ ಮರ ಅಂಕು-ಡೊಂಕಾಗಿ, ವಕ್ರ-ವಕ್ರವಾಗಿ ಹೇಗೆ ಬೆಳೆದಿದ್ದರೂ ಸಹ ಅದು ಹೊರಸೂಸುವ ಸುಗಂಧದಲ್ಲೇನಾದರೂ ಕೊರತೆ ಕಂಡು ಬರುವುದೇ..? ಹಾಗೆಯೇ ಮನುಷ್ಯ ಕಪ್ಪಗೆ-ಕುಳ್ಳಗೆ, ದಪ್ಪಗೆ-ಗುಂಡಗೆ, ವಿಕಲ ಚೇತನನಾಗಿ, ವಕ್ರ-ವಕ್ರವಾಗಿ ಹೇಗೆ ಬೆಳೆದಿದ್ದರೂ ಸಹ ಅವರಲ್ಲಿನ ಪ್ರೀತಿ, ಸ್ನೇಹ, ಮಮತೆ ವಾತ್ಸಲ್ಯಗಳಾದಿಯಾದ ಸದ್ಗುಣಗಳ ಸುವಾನೆಗೆನೂ ಕೊರತೆ ಇರಲಾರದು. ವಕ್ರವಾಗಿ ಬೆಳೆದ ಶ್ರೀಗಂಧದ ವೃಕ್ಷದಲ್ಲೂ 'ಗಂಧ' ವೆಂಬುದು ಅದರ ನಯವಾದ ತಿರುಳಿನಲ್ಲಿರುವಂತೆ ಸದ್ಗುಣಗಳೂ ಸಹ ಮನುಷ್ಯನ ಪರಿಶುದ್ಧವಾದ ಆತ್ಮದಲ್ಲಿರುವುವು ಎಂಬುದು ನನ್ನ ನಂಬಿಕೆ. ಇಂತಹ ನಂಬಿಕೆಗಳ ನೆಪವಿಟ್ಟುಕೊಂಡು ಸೂಚಿಸಿರುವುದೇ ಈ ಹೆಸರು.


ಉದ್ದೇಶ-ಸದುದ್ದೇಶ

ಬ್ಲಾಗ್ ಪ್ರಾರಂಭಿಸಿರುವ ಉದ್ದೇಶ ಇದೇ ಎಂದು ಅಡಿಗೆರೆ ಎಳೆದಷ್ಟು ಸ್ಪಷ್ಟವಾಗಿ ಹೇಳಲಾಗದಿದ್ದರೂ 'ನಾನು-ನನ್ನಂತಹವರಿಗೆ' ಕಿಂಚಿತ್ತಾದರೂ ನೆರವೀಯಬೇಕೆಂಬ ಹಂಬಲ ಮನದಾಳದಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ಯಾರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಹವಣಿಸುತ್ತಿರುವೆವೋ ಅವರಿಗೆ ಸಹಕಾರಿಯಾಗುವಂತಹ, ಸ್ಪೂರ್ತಿಯಾಗುವಂತಹ ಲೇಖನಗಳನ್ನು ಬರೆದು, ಬರೆಯಿಸಿ ಪ್ರಕಟಿಸುವ, ತಮ್ಮ ಕೊರತೆಗಳನ್ನೂ ಮೀರಿ ನಿಂತು ಸಾಧನೆ ತೋರಿದವರನ್ನು ಶ್ಲಾಘಿಸುವ ಬಯಕೆಯಿದೆ. ಇಂತಹವರ ಏಳಿಗೆಗೆ ಶ್ರಮಿಸುತ್ತಿರುವ ಸರ್ಕಾರ, ಸಂಘ-ಸಂಸ್ಥೆಗಳ ಅಂತರ್ಜಾಲ ತಾಣಗಳನ್ನು ವೆಬ್ ಲಿಂಕ್ ನೀಡುವ ಉದ್ದೇಶವಿದೆ. ಸರಕಾರಗಳು ಹೊರತರುವ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಪರಿಚಿತರಿಂದ ಪರಿಚಯಿಸುವ ಸಂಕಲ್ಪವಿದೆ. ಅಷ್ಟೇ ಅಲ್ಲದೆ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ನಿಮ್ಮ ಲೇಖನಗಳನ್ನೂ, ಚಿಂತನೆಗೆ ಹಚ್ಚುವ ವೈಚಾರಿಕ ಬರಹಗಳನ್ನೂ ಪ್ರಕಟಿಸುತ್ತಾ ಕ್ರಿಯಾ ಶೀಲನಾಗಿರಬೇಕೆಂಬ ತುಡಿತವಿದೆ. ಇವೆಲ್ಲವಕ್ಕೂ ನಿಮ್ಮ ಸಲಹೆ, ಸಹಕಾರ, ಸ್ಪಂದನೆ, ಸಹಭಾಗಿತ್ವ ಅತ್ಯಗತ್ಯವಾಗಿದೆ.

ಪುನರ್ನವ ಎಂಬ ತಾಯಿಬೇರು



ಹೌದು, ಕರ್ನಾಟಕ ಸರ್ಕಾರ ಸಚಿವಾಲಯ ಕಿರಿಯ ಸಹಾಯಕರ ಬ್ಲಾಗೊಂದು ಪ್ರಾರಂಭ ಗೊಳ್ಳುವವರೆಗೂ ನನಗೆ ಅಂತರ್ಜಾಲ ಲೋಕದಲ್ಲಿ ಇಂತಹದೊಂದು ಬ್ಲಾಗ್ ವಲಯ ಇದೆ ಎನ್ನುವುದೇ ಗೊತ್ತಿರಲಿಲ್ಲ.! ಅಂದು ಸಚ್ಚಿಯ ನ್ಯೂ ಇಯರ್ ಪಾರ್ಟಿಯಲ್ಲಿ ರೇವಪ್ಪ " ನಾನೂ ಒಂದು ಬ್ಲಾಗ್ ತೆರೆದಿದೀನಿ, ಅದರಲ್ಲಿ ಈ ಫೋಟೋ ಹಾಕ್ತೀನಿ" ಅಂತ ತಮ್ಮ ಮೊಬೈಲಿನಿಂದ ಫೋಟೋ ಕ್ಲಿಕ್ಕಿಸಿದಾಗಲೂ ನನಗೆ ತಳ-ಬುಡ ಅರ್ಥವಾಗಿರಲಿಲ್ಲ..!! ಮರುದಿನ ರೇವಪ್ಪರಿಂದ ಪಡೆದಿದ್ದ ಬ್ಲಾಗ್ ವಿಳಾಸವನ್ನು ಇಂಟರ್ ನೆಟ್ ಎಕ್ಸ್ ಪ್ಲೋರರ್ ನಲ್ಲಿ ಟೈಪಿಸಿ ಎಂಟರ್ ಒತ್ತಿದಾಗಲೇ ನಾನು ಬ್ಲಾಗ್ ಎಂಬ ಮಹಾಮನೆಯ ಮೆಟ್ಟಿಲ ಮೇಲೆ ಬಂದು ಬಿದ್ದಿದ್ದೆ. ಅಂದಿನಿಂದ ಇಂದಿನವರೆಗೆ ನಾನು ನಡೆದ ಪಯಣ, ಪಡೆದ ಜ್ಞಾನ ನನ್ನನ್ನು ಈ ವಕ್ರವೃಕ್ಷವನ್ನು ಪೋಷಿಸುವ ಮಟ್ಟಕ್ಕೆ ತಂದು ನಿಲ್ಲಿಸಿರುವುದು. ನಾನಿಂದು ಏನೇನು ಅಳವಡಿಸಲು ಯೋಜಿಸಿರುವೆನೋ ಅವೆಲ್ಲವೂ ಪುನರ್ನವದ ಬಳುವಳಿಗಳೇ. ವೃಕ್ಷವೊಂದಕ್ಕೆ ಹುಟ್ಟಿನಿಂದಲೇ ಆಧಾರವಾಗಿರುವುದು ತಾಯಿಬೇರು. ಈ ವಕ್ರವೃಕ್ಷಕ್ಕೆ ಪುನರ್ನವವೇ ತಾಯಿಬೇರು. ಪುನರ್ನವದಿಂದ, ರೇವಪ್ಪರ ಮೂಲಕ ಕಲಿತದ್ದು ಬಹಳಷ್ಟು. ಪ್ರಾರಂಭದಲ್ಲಿ "ನಮ್ಮದು ಫೈವ್ ಸ್ಟಾರ್ ಹೋಟೆಲ್ ಇಲ್ಲಿ ಉತ್ಕೃಷ್ಟವಾದದ್ದನ್ನೇ ಬಡಿಸಲಾಗುವುದು" ಎಂದು ಹೇಳಿದ್ದ ರೇವಪ್ಪ ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಉತ್ಕೃಷ್ಠ, ಅತ್ಯುತ್ಕೃಷ್ಟವಾದ ಹೊಸ ಹೊಸ ಗೆಜೆಟ್ ಗಳನ್ನು ತಂದು ಕೂರಿಸುತ್ತಿದ್ದಾರೆ. ಅಷ್ಟೇ ಅಲ್ಲ ಅವುಗಳ ಕಾರ್ಯ ವೈಖರಿಯ ಬಗ್ಗೆನೂ ಸವಿವರವಾಗಿ ವಿವರಿಸುತ್ತಾರೆ. ಬ್ಲಾಗ್ ಬಗೆಗೆ ಬಹಳಷ್ಟನ್ನು ಕಲಿಸಿದ ರೇವಪ್ಪ ನಮಗೆಲ್ಲ 'ಬ್ಲಾಗ್ ಗುರು'ವಿನಂತಾಗಿದ್ದಾರೆ. ಪ್ರತಿ ಬಾರಿ ಬ್ಲಾಗ್ ನಲ್ಲಿ ಹೊಸದನ್ನು ಸೇರಿಸಿದಾಗಲೂ ಬ್ಲಾಗ್ ನಲ್ಲಿ ವಿವರಿಸುವುದಷ್ಟೇ ಅಲ್ಲ, ಖುದ್ದು, ನನ್ನ ಸೆಕ್ಷನ್ ಗೆ ಬಂದು ನನ್ನ ಟೇಬಲ್ ಎದುರು ಖುರ್ಚಿ ಎಳೆದು ಕೂತು, ಇದು ಹೀಗೆ, ಇದು ಹೀಗೀಗೆ ಎಂದು ವಿವರಿಸಿ, ವಿವರಿಸಿ ಹೇಳಿದ್ದಾರೆ. ಕೆಲವೊಮ್ಮೆ ಆಫೀಸು ಮುಗಿಸಿ ಮನೆಗೆ ಹೋಗುವಾಗಲೂ ನನ್ನ ಡೌಟುಗಳನ್ನು ಪರಿಹರಿಸಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ ನಾನು ಬ್ಲಾಗ್ ಪ್ರಾರಂಭಿಸಬೇಕೆಂದುಕೊಂಡ ಈ ದಿನ (09/09/09) ನಮ್ಮಲ್ಲಿ ಬ್ಲಾಗ್ ಸ್ಪಾಟ್ ಓಪನ್ ಆಗ್ತಾನೇ ಇರಲಿಲ್ಲ. ಬೆಳಿಗ್ಗೆಯಿಂದ ಪ್ರಯತ್ನ ಪಡುತ್ತಿದ್ದೆ. ನಡುವೆ ರೇವಪ್ಪನನ್ನು ಚಾಟ್ ಮೂಲಕ ಸಂಪರ್ಕಿಸಿ, ಎಲ್ಲವನ್ನೂ ಅವರೇ ಪ್ರಾರಂಭಿಸಲು ಕೇಳಿಕೊಂಡೆ. 'ತಾಳ್ಮೆ ಇರಲಿ ಸರಿಹೋಗುತ್ತೆ' ಎಂದರು ರೇವಪ್ಪ. ಸಂಜೆ ವರೆಗೂ ತಾಳ್ಮೆಯಿಂದಲೇ ಪ್ರಯತ್ನಿಸುತ್ತಿದ್ದೆ. ಪ್ರಾರಂಬಿಸಲನುವಾಗುವಂತಹ ಲಕ್ಷಣಗಳು ತೋರಲಿಲ್ಲವಾದ್ದರಿಂದ. ರೇವಪ್ಪನಿಗೆ ಸಕಲವನ್ನೂ ಮೇಲ್ ಮಾಡೋಣ ಎಂದು ಅಣಿಯಾಗಿ, ಕೊನೇ ಬಾರಿಗೆಂಬಂತೆ ಬ್ಲಾಗ್ ಸ್ಪಾಟ್ ತಲುಪಲು ಪ್ರಯತ್ನಿಸಿದೆ. ಅಂತೂ ಓಪನ್ ಆಯ್ತು. ಅದೇ ವೇಳೆಗೆ ನನ್ನ ಮೊಬೈಲ್ ಗೆ 'surprise' ಅಂತ ಮೆಸೇಜ್ ಒಂದು ಬಂತು, ನೋಡ್ತೀನಿ ರೇವಪ್ಪನಿಂದ..! ಬ್ಲಾಗ್ ಸ್ಪಾಟ್ ಈಗ ಓಪನ್ ಆಗಿದ್ದು ರೇವಪ್ಪಗೆ ಹೇಗೆ ತಿಳೀತು ಅಂತ ರಿಪ್ಲೆ ಬರೆಯುತ್ತಿದ್ದಾಗಲೇ ರೇವಪ್ಪ ನನ್ನೆದುರಿಗೇ ಹಾಜರ್..!! ಕೊನೆಗೆ ಈ ಬ್ಲಾಗ್ ಗೆ ಅಪ್ ಲೋಡ್ ಮಾಡುವ ಎಲ್ಲಾ ವಿಧಾನಗಳನ್ನೂ ನನಗೆ ವಿವರಿಸಿ ರೇವಪ್ಪ ತೆರಳಿದರು.

ಇಂತಿಪ್ಪ ರೇವಪ್ಪನ ಕ್ರಿಯೇಟಿವಿಟಿಯನ್ನು ಮೆಚ್ಚಲೇ ಬೇಕು. ಅವರ ಕ್ರಿಯಾಶೀಲತೆಗೆ ಈ ಒಂಭತ್ತು ತಿಂಗಳಲ್ಲಿ ಪುನರ್ನವದಲ್ಲಾದ ಬದಲಾವಣೆಗಳೇ ಸಾಕ್ಷಿ. ನನಗನಿಸುತ್ತದೆ ತುಂಬಾ ಫಾಸ್ಟ್ ಆಗಿ ಊಟ ಮುಗಿಸುವವರು ತಮ್ಮ ಕೆಲಸದಲ್ಲೂ ತುಂಬಾ ಕ್ರಿಯಾಶೀಲರಾಗಿರುತ್ತಾರೆನೋ ಅಂತ. ಪರೀಕ್ಷಿಸಬೇಕೆಂದರೆ, ರೇವಪ್ಪನನ್ನು ಒಂದು ದಿನ ನಿಮ್ಮೊಂದಿಗೆ ಊಟಕ್ಕೆ ಆಹ್ವಾನಿಸಿ, ಅಥವಾ ಅವರು ಕರೆದಾಗ ತಪ್ಪದೇ ಹೋಗಿ. ಹಾಗೇ ಇನ್ನೂ ಒಂದು ಬೇರು ರೂಪುಗೊಂಡಿದೆ ಅದು ಮಂಜುದಾದಾರ 'ಗೆಳೆಯರ ಅಂಗಳ'. ಇಂತಹ ಬೇರು-ಬಿಳಲುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ. ವೃಕ್ಷ frout ಇಲ್ಲದಿದ್ದರೆ ಬದುಕಬಲ್ಲದು, root ಇಲ್ಲದಿದ್ದರೆ ಸಾಧ್ಯವಿಲ್ಲವಲ್ಲವೇ..?



ಗಣೇಶನೇಕೆ ಅಧಿನಾಯಕ
-

ನಾನು ಮೊದಲೇ ಹೇಳಿದಂತೆ ನಮ್ಮ ಗಣೇಶ ಈ ಬ್ಲಾಗಿನ ಅಧಿನಾಯಕ. ಅವನೂ ನಮ್ಮ 'ಕೆಟಗರಿಗೆ' ಸೇರಿದವನು ಕಣ್ರೀ.. ಅದು ಹೇಗೆ ಅಂತೀರಾ ದೇಹದ ಯಾವುದೇ ಸದೃಶ ಅಂಗಗಳು ಶಾಶ್ವತವಾಗಿ ಊನವಾಗಿದ್ರೂ ಅವರನ್ನು ವಿಕಲಚೇತನರು ಅಂತೀವಿ. ಗಣೇಶನಿಗೂ ಒಂದು ದಂತ ಭಗ್ನವಾಗಿದೆ ಆದುದರಿಂದ ಅವನೂ..... ಹೋಗ್ರೀ ಒಂದು ಹಲ್ಲು ಮುರಿದಿದ್ದಕ್ಕೇ ವಿಕಲಾತೀತ ಅನ್ನೋಕಾಗುತ್ತಾ ಅಂತೀರಾ? ನಮ್ಮ ನಿಮ್ಮಂತಹ ದಂತವಾಗಿದ್ರೆ ಅನ್ನೋಕಾಗೊಲ್ಲ ಆದರೆ ಅವನದು ಗಜದಂತ ನೋಡಿ, ಅದಕ್ಕೆ. ಹಾಗಂತ ಧನ್ವಂತರಿ ಏನು ಸರ್ಟಿಫಿಕೇಟ್ ಕೊಟ್ಟಿದ್ನಾ ಅಂತೀರಾ..? ಅದರ ಅವಶ್ಯಕತೆ ಅವನಿಗೆ ಇರಲಿಲ್ಲ. 'ನನ್ನ ಒಂದು ಹಲ್ಲು ಮುರಿದಿದೆ' ಎಂದು ಯಾವಾಗಲೂ ಗಣೇಶ ಕೀಳರಿಮೆಯಿಂದ ಹಿಂಜರಿಯಲಿಲ್ಲ. ತನ್ನ ನ್ಯೂನತೆಯನ್ನು ಮರೆತು ಅಥವಾ ಅದನ್ನು ಗಣನೆಗೆ ತೆಗೆದುಕೊಳ್ಳದ ಗಣನಾಯಕ ಸಕಲ ಕಾರ್ಯಗಳಲ್ಲೂ ಅಗ್ರಪೂಜೆಗೆ ಪಾತ್ರನಾದ. ಅದೆಲ್ಲಾ ಸರಿ ಈ ಗಜವದನನನ್ನು ಏಕದಂತ ನನ್ನಾಗಿ ಮಾಡಿದವರು ಯಾರು ಗೊತ್ತಾ..? ಮತ್ಯಾರೂ ಅಲ್ಲ ಆ ಪರಶುರಾಮ. ಅದೇನಾಯ್ತು ಅಂತ ಹೇಳ್ತೀನಿ ಕೇಳಿ. ಒಮ್ಮೆ ಕೈಲಾಸದಲ್ಲಿ ಪಾರ್ವತಿ-ಪರಮೇಶ್ವರರು ಒಂದು ಗಹನವಾದ ವಿಚಾರವನ್ನು ಚರ್ಚಿಸಲು ತೊಡಗುತ್ತಾರೆ. ಆಗ ಅಲ್ಲೇ ಇದ್ದ ತುಂಟ ಗಣಪ ಡಿಸ್ಟರ್ಬ್ ಮಾಡುತ್ತಿರುತ್ತಾನೆ, ಇದನ್ನು ಮನಗಂಡ ದಂಪತಿ ಗಣೇಶನನ್ನು ಕರೆದು " ನೋಡು ಪುಟ್ಟಾ, ನಾವು ಏಕಾಂತದಲ್ಲಿ ಏನನ್ನೋ ಮಾತನಾಡುವುದಿದೆ. ನೀನು ಹೊರಗೆ ನಿಂತು, ನಮ್ಮ ಅಪ್ಪಣೆ ಇಲ್ಲದೆ ಯಾರೂ ಒಳಗೆ ಬಾರದಂತೆ ಕಾಯುತ್ತಿರು" ಎನ್ನುತ್ತಾರೆ. ಮಾತಾ-ಪಿತರ ಮಾತಿಗೆ ತಲೆಬಾಗಿದ ನಮ್ಮ ಗಣೇಶ ಕೈಲಾಸದ ದ್ವಾರದಲ್ಲಿ ದ್ವಾರ ಪಾಲಕನಾಗಿ ಕಾವಲು ನಿಲ್ಲುತ್ತಾನೆ. ಇತ್ತ ಪಾರ್ವತಿ ಪರಮೇಶ್ವರರು ಜಗದ್ವಿಚಾರಗಳ ವಿವೇಚಿತ ಚಿಂತನಾತ್ಮಕ ಚರ್ಚೆಗೆ ತೊಡಗುತ್ತಾರೆ. ಸತಿ-ಪತಿಯರಿಗೆ ಈ ಜಗತ್ತೇ ಅವರ ಸಂಸಾರವಾದುದರಿಂದ ಒಂದರ್ಥದಲ್ಲಿ ಸಾಂಸಾರಿಕ ಜೀವನದ ಆಗು-ಹೋಗುಗಳ ಬಗ್ಗೆ ಮಾತಿಗೆ ಕುಳಿತಿರುತ್ತಾರೆ. ಹೀಗಿರುವಾಗ ತನ್ನಘೋರ ತಪಶ್ಯಕ್ತಿಯಿಂದ ಪರಶಿವನಿಂದಲೇ 'ಪರಶು'ವನ್ನು ಪಡೆದವನೂ, ಪಿತೃವಾಕ್ಯ ಪರಿಪಾಲಕನೆಂದು ಜಗದ್ವಿಖ್ಯಾತನಾದವನೂ, ರೇಣುಕಾತನಯನೂ ಆದ ಪರಶುರಾಮನು ಯಾವುದೋ ಒಂದು ಅರ್ಜೆಂಟ್ ಕೆಲಸದ ನಿಮಿತ್ತ ಪರಮೇಶ್ವರನನ್ನು ಕಾಣಲು ಕೈಲಾಸದೆಡೆ ಓಡಿ ಬರುತ್ತಾನೆ. ಕೈಲಾಸದ ದ್ವಾರದೆಡೆ ಯಾರೋ ದೌಡಾಯಿಸುವುದನ್ನು ಕಂಡ ಗಣೇಶ ಅವನನ್ನು ತಡೆಯಲು ಸಜ್ಜಾಗುತ್ತಾನೆ. ಇದನ್ನು ನಿರೀಕ್ಷಿಸದೇ ಎಂದಿನಂತೆ ಬರುತ್ತಿದ್ದ ಪರಶುರಾಮನು ಕ್ಷಣವೊತ್ತು ಅವಕ್ಕಾದರೂ ಸಾವರಿಸಿಕೊಂಡು, ಒಳ ಬಿಡುವಂತೆ ಗಣೇಶನನ್ನು ನಯವಾಗಿ ಕೇಳುತ್ತಾನೆ. ಪರಶುರಾಮನ ಯಾವ ಬೆಣ್ಣೆ ಮಾತಿಗೂ ಬೆಲೆ ಕೊಡದೆ ಗಣೇಶ " ಮಾತಾ-ಪಿತರು ಏಕಾಂತದಲ್ಲಿದ್ದಾರೆ. ಸ್ವಲ್ಪಹೊತ್ತು ಬಿಟ್ಟು ಬನ್ನಿ" ಎಂಬಂತೆ ಆಜ್ಞಾಪಿಸುತ್ತಾನೆ. ಎಲ್ಲಾ ವಿಧದಲ್ಲೂ ಹೇಳಿ ನೋಡಿದ ಪರಶುರಾಮನು ತಾಳ್ಮೆಗೆಟ್ಟು ಗದರಿಸಿ ಹೇಳುತ್ತಾನೆ. ಅವನ ಗದರಿಕೆಗೂ ಕ್ಯಾರೇ ಅನ್ನದೇ ಗಣೇಶ ತನ್ನ ಪಟ್ಟನ್ನೇ ಬಿಗಿ ಹಿಡಿಯುತ್ತಾನೆ. ಹೀಗೆ ರೇಣುಕಾತನಯನಿಗೂ ಪಾರ್ವತಿತನಯನಿಗೂ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿ ಇಬ್ಬರೂ ಯುದ್ಧಕ್ಕೆ ಅಣಿಯಾಗುತ್ತಾರೆ. ಇವರ ಮಾತು, ಕೃತ್ಯಗಳ ಪರಿಣಾಮದಿಂದ ತ್ರಿಲೋಕಗಳೂ ಕಂಪಿಸುತ್ತವೆ. ಪರಶುರಾಮನ ಪ್ರತಿಯೊಂದು ತಂತ್ರಕ್ಕೂ ಪ್ರತಿತಂತ್ರ ರೂಪಿಸಿ ಗಣೇಶನು ಪರಶುರಾಮನನ್ನೇ ಎದುರಿಸುತ್ತಾನೆ. ಇದರಿಂದ ಹತಾಶೆಗೊಂಡಂತಾದ ರೇಣುಕಾತನಯನು ತನ್ನಲ್ಲಿರುವ 'ಪರಶು' ಆಯುಧವನ್ನು ಮಂತ್ರಿಸಿ ಗಣೇಶನೆಡೆ ಬಿಡುತ್ತಾನೆ.ಪರಿಣಾಮವಾಗಿ ಕೈಲಾಸವೇ ಒಂದರೆಕ್ಷಣ ಗಡ ಗಡ ಗಡ ನಡುಗುತ್ತದೆ. ಇದರಿಂದ ಎಚ್ಚೆತ್ತವರಾದ ಪಾರ್ವತಿ-ಪರಮೇಶ್ವರರು ಹೊರಬಂದು ನೋಡುವಷ್ಟರಲ್ಲಿ, ಗಣೇಶನ ಕುತ್ತಿಗೆಯನ್ನು ಕತ್ತರಿಸಲು ಚಿಮ್ಮಿ ಬಂದ ಆಯುಧ ಅವನ ಬೃಹತ್ ಶಕ್ತಿಗೆ ಬೆದರಿ ಅವನ ಒಂದು ದಂತವನ್ನು ಮಾತ್ರ ಬೇಧಿಸಿ ಮುಂದೆ ಸಾಗುತ್ತದೆ. ಪರಮೇಶ್ವರನನ್ನು ಕಂಡೊಡನೆ ರೇಣುಕಾತನಯನ ಸಿಟ್ಟು ಕರಿಗಿ ನೀರಾಗುತ್ತದೆ. ಗಣೇಶನಲ್ಲೂ ಕ್ಷಮೆ ಕೋರಿ ಅವನಿಗೆ ತಲೆಬಾಗುತ್ತಾನೆ. ಆದರೂ ಗಣೇಶನ ಮುದ್ದಾದ ಒಂದು ದಂತ ಕೈಲಾಸದ ಧರೆಗುರುಳಿರುತ್ತದೆ. ಹೀಗೆ ರೇಣುಕಾತನಯನಿಂದಾಗಿ ಏಕದಂತನಾದ ನಮ್ಮ ಗಣೇಶನನ್ನು ವಕ್ರವೃಕ್ಷದ ಅಧಿನಾಯಕ ನನ್ನಾಗಿ ಅನುಸ್ಥಾಪಿಸಲಾಗಿದೆ.
ಅರಿಕೆ

ನಾನು ಪುನರ್ನವದಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳಲಾಗಲಿಲ್ಲ ಎಂಬ ಅಳುಕು ಸಹಜವಾಗಿಯೇ ಇದೆಯಾದರೂ 'ಅಗೋಚರವಾಗಿ' ನಾನಿದ್ದೇನೆ ಅನಿಸುತ್ತಿದೆ, ಪ್ರತಿ ಬಾರಿಯೂ ನನ್ನನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಇದು ಹೀಗೆ ಎನ್ನುತ್ತಲೇ ತಿದ್ದಿದ, ತಿಳಿಸಿದ, ಕಲಿಸಿದ ನಿಮಗೆ ಕೃತಜ್ಞತೆಗಳು. ನೀಮ್ಮ ಸಲಹೆ, ಸಹಕಾರಗಳ ಸವಿಜಲವನ್ನು ವಕ್ರವೃಕ್ಷಕ್ಕೂ ಎರೆದು ಸೊಂಪಾಗಿ ಬೆಳೆಸಲು ನೆರವಾಗುತ್ತೀರೆಂಬ ದೃಢ ನಂಬಿಕೆ ನನ್ನಲ್ಲಿದೆ.....

ನಮಸ್ಕಾರ.....

ಪರಶು..,
ನಿಮಗೇನೆನೆಸಿತು..?

ಇಲ್ಲಿಗೆ ಬರೆಯಿರಿ

renukatanaya@gmail.com