ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

24 March 2010

ಈ ಸಾವು ನ್ಯಾಯವೇ..??

ಅರಳದೇ ಬಾಡಿದ ಅನ್ನಪೂರ್ಣಳ ನೆನೆಯುತ...



ಡಿಯರ್ ಫ್ರೆಂಡ್ಸ್


ಕಳೆದ ವರ್ಷದ ಮಾರ್ಚ್ 24 ರ ಆ ಮಂಗಳವಾರದ ದಿನ ನೆನಪಾಗುತ್ತಿದ್ದಂತೆ ಸುಳಿವೀಯ್ಯದೆ ವಿಧಿಗೆ ವಶಳಾದ ಈ ಪುಟ್ಟ ಹುಡುಗಿ ಅನ್ನಪೂರ್ಣಳ ನೆನಪು ಎಡೆಬಿಡದೆ ಕಾಡುತ್ತಿದೆ. ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ನಿಶ್ಚಿತ ಆದರೆ ಹಿಂದೆ ಮುಂದೆ ಸುಳಿದಾಡಿಕೊಂಡಿದ್ದವರು ಅರೆಗಳಿಗೆಯಲ್ಲಿ ಇಲ್ಲವಾದರೆ 'ಈ ಸಾವು ನ್ಯಾಯವೇ' ಅನಿಸುತ್ತದೆ. ಅವರು ಉಳಿಸಿಹೋದ ನೆನಪುಗಳು ಅಳಿಯದೇ ಕಾಡುತ್ತಿರುತ್ತವೆ. ಈ ವಿಧಿಯಾಡುವ ಆಟಗಳೇ ವಿಚಿತ್ರ, ಬದುಕಬೇಕೆಂಬ ಆಸೆಹೊತ್ತು ಬದುಕಿಗಾಗಿ ಹಪಹಪಿಸುವವರನ್ನು ಬದುಕಲು ಬಿಡಲಾರದು ವಿಧಿ. ತುತ್ತು ಕೂಳಿಗೂ ಕರಕಷ್ಟವಾಗಿ, ತುಂಡು ಬಟ್ಟೆಗೆ ತತ್ವಾರವಾಗಿ ಈ ಬದುಕು ಸಾಕು ಎಂದು ಸಾವನ್ನು ಆಶಿಸುವವರ ಬಳಿ ಸಾವು ಸುಳಿಯಲೊಲ್ಲದು. ಕಾಲನ ಹೂಟವನು ಬಲ್ಲವರುಂಟೇ? ಕಾಲನ ಕುತಂತ್ರವನ್ನರಿಯದೆ ಮನದಲ್ಲಿ ಬೆಟ್ಟದಷ್ಟು ಆಸೆಗಳನ್ನಿಟ್ಟುಕೊಂಡು, ಬದುಕನ್ನು ಕಟ್ಟಿಕೊಳ್ಳಲು ಬಣ್ಣದ ಕನಸುಗಳನ್ನು ಹೆಣೆದುಕೊಂಡು, ಪುಟ್ಟ ಕಂದನ ಬರುವಿಕೆಗಾಗಿ ಹಗಲಿರುಳು ಹಂಬಲಿಸಿ ಕಂದ ಕಣ್ತೆರೆದಾಗ ಕಣ್ಮಚ್ಚಿದ ಅನ್ನಪೂರ್ಣಳ ಆತ್ಮಕ್ಕೆ ಅಕ್ಷರ ತರ್ಪಣವಿದು ಈ ಬರಹ.

ಅನ್ನಪೂರ್ಣ ನಮ್ಮ ಸಿಆಸು ಇಲಾಖೆಯ ಆಡಳಿತ ಕೋಶ ಶಾಖೆಯಲ್ಲಿ ಬೆರಳಚ್ಚುಗಾರ್ತಿಯಾಗಿದ್ದಳು. ವರ್ಷದ ಹಿಂದೆ ನೀವ್ಯಾರಾದರೂ ನಿಮ್ಮ ಜೇಷ್ಠತಾ ಪಟ್ಟಿಯನ್ನು ಪಡೆಯಲು ಈ ಶಾಖೆಗೆ ಹೋಗಿರುವಿರಾದರೆ ಖಂಡಿತಾ ಈ ಹುಡುಗಿಯನ್ನು ನೋಡಿರುತ್ತೀರಿ. ಈ ಭಾವಚಿತ್ರ ನೋಡಿಯಾದರೂ ನಿಮಗೆ ನೋಡಿದ ನೆನಪು ಮಸುಕು ಮಸುಕಾಗಿ ಮರುಕಳಿಸೀತು. ಕುಳ್ಳನೆಯ ಶರೀರ, ಮುದ್ದುಮುಖ, ಸದಾ ಹಸನ್ಮುಖಿಯಾಗಿದ್ದ ಮೃದು ಮಾತಿನ, ಮೆದು ಮನಸಿನ ಚಟುವಟಿಕೆಯ ಹುಡುಗಿಯಾಗಿದ್ದಳು ಅನ್ನಪೂರ್ಣ. ಅವಳೊಂದಿಗೆ ನಗುನಗುತ್ತಾ ಕಳೆದ ಕೆಲವೇ ದಿನಗಳ ನನ್ನ ನೆನಪುಗಳನ್ನು ನಿಮ್ಮ ಮುಂದೆ ಮುಂದಿಡುತ್ತಿದ್ದೇನೆ.

ನನಗೆ ಎರಡೂ ವರೆ ವರ್ಷಗಳ ಹಿಂದೆ 'ವಿಧಾನ ಸೌಧ'ದಲ್ಲಿ ಕೆಲಸ ಸಿಕ್ಕಿ, ಈ ಬೆಂಗಳೂರೆಂಬ ಬೆಂಗಳೂರಿಗೆ ನಾನು ಕಾಲಿಟ್ಟಾಗ ಯಾರೆಂದರೆ ಯಾರ ಪರಿಚಯವೂ ಇರಲಿಲ್ಲ. ವಿಧಾನ ಸೌಧದಲ್ಲಿ ಕೆಲಸ ಎಂಬುದೇ ನನ್ನಲ್ಲಿ ಭಯ ಮಿಶ್ರಿತ ಆತಂಕವನ್ನು ಸೃಷ್ಟಿಸಿತ್ತಾದ್ದರಿಂದ ಗಟ್ಟಿ ಧ್ವನಿಯಲ್ಲಿ ಬಾಯ್ತೆರೆದು ಮಾತನಾಡಲೂ ಭಯಪಡುತ್ತಿದ್ದೆ. ನಾವು ಕ.ಸ.ಸ ದಲ್ಲಿ ಕಿ.ಸ ರಾಗಿ ವರದಿ ಮಾಡಿಕೊಂಡ ಒಂದೇ ವಾರದಲ್ಲಿ ನಮಗೆ ಪೋಸ್ಟಿಂಗ್ ಸಹ ಮಾಡಲಾಯಿತು. ಪರ-ವಿರೋಧಗಳ ನಡುವೆ ನಮ್ಮ ಶಾಖೆ (ಆಡಳಿತ-ಸಿ) ಯಲ್ಲಿ ಕರ್ತವ್ಯಕ್ಕೆ ಹಾಜರಾದ ನಾನು ಹೊಸತನದ ಬಿಗುವಿನಲಿ ಸುಮ್ಮನೆ ಕುಳಿತಿದ್ದಾಗಲೊಮ್ಮೆ ಅನ್ನಪೂರ್ಣ ಬಂದು ಮಾತಿಗೆಳೆದಳು. ನಮ್ಮ ಶಾಖೆಯ ಬೆರಳಚ್ಚುಗಾರ್ತಿ ದೀಪಶ್ರೀ ಮತ್ತು ಅನ್ನಪೂರ್ಣಳ ನಡುವೆ ಆತ್ಮೀಯ ಗೆಳೆತನವಿತ್ತಾದ್ದರಿಂದ ಅನ್ನಪೂರ್ಣ ಆಗಾಗ ನಮ್ಮ ಸೆಕ್ಷನ್ ಗೆ ಬರುವುದು ರೂಢಿಯಾಗಿತ್ತು. ದಿನಕ್ಕೆ ಕನಿಷ್ಠ ನಾಲ್ಕೈದು ಬಾರಿಯಾದರೂ ಅನ್ನಪೂರ್ಣ ನಮ್ಮ ಸೆಕ್ಷನ್ ಗೆ ಬಂದು ಹೋಗುತ್ತಿದ್ದಳು. ಅಂದು ಬಂದವಳು ನನ್ನ ಇಹಪರಗಳನ್ನೆಲ್ಲವನ್ನು ವಿಚಾರಿಸುತ್ತಾ "ನಿಮಗೆ ಬೆಂಗಳೂರಲ್ಲಿ ಯಾರೂ ರಿಲೇಶನ್ನೇ ಇಲ್ವೇನ್ರೀ?" ಎಂದಳು. ನಾನು ಇಲ್ಲವೆಂದಷ್ಟೇ ತಲೆಯಲ್ಲಾಡಿಸುತ್ತಿದ್ದಂತೆ "ಅತ್ತೆ, ಮಾವ, ಮಾವನ ಮಕ್ಳು, ಅತ್ತೆ ಮಗಳು ಯಾರೂ ಇಲ್ವಾ?" ಎಂದು ಕಿಚಾಯಿಸಿದಳು. ಇವಳೊಂದಿಗೆ ದೀಪಶ್ರೀಯೂ ಧ್ವನಿಗೂಡಿಸಿ ಇಬ್ಬರೂ ರೇಗಿಸುತ್ತಿದ್ದುದು ಮೊತ್ತಮೊದಲಿಗೆ ನನ್ನ ಭಯದ ಬಲೂನು ಠುಸ್ ಎನ್ನಲು ಕಾರಣವಾಯಿತು. ನಾನು ಆತಂಕದ ಆವರಣದಿಂದ ಹೊರಬಂದು ಆತ್ಮೀಯತೆಯ ಅಂಗಳದಲ್ಲಿ ನಲಿಯಲು ದಾರಿಯಾಯ್ತು. ಬರಬರುತ್ತಾ ಈ ರೀತಿ ಕಿಚಾಯಿಸುವುದು, ಕಾಲೆಳೆಯುವುದು ನಮ್ಮಲ್ಲಿ ರೂಢಿಗತವಾಗಿ ಆತ್ಮೀಯತೆಯ ಬಂಧವನ್ನು ಭದ್ರಗೊಳಿಸುತ್ತಿತ್ತು.

ಅನ್ನಪೂರ್ಣ, ದೀಪಶ್ರೀ, ಮಾಲಾ, ಮತ್ತು ನಿರ್ಮಲ ಇವರದ್ದು ಒಂದು ಗುಂಪು. ಸರಿಯಾಗಿ ಊಟದ ಸಮಯಕ್ಕೆ ನಮ್ಮ ಸೆಕ್ಷನ್ ನಲ್ಲಿ ಹಾಜರಿರುತ್ತಿದ್ದರು. ಎಲ್ಲರೂ ಕುಳಿತು ಹರಟುತ್ತಾ ನನ್ನ ಟೇಬಲ್ ಮೇಲೆಯೇ ಊಟ ಮೆಲ್ಲುತ್ತಿದ್ದರು. ಎಲ್ಲರಿಗಿಂತಲೂ ಮೊದಲು ಬರುತ್ತಿದ್ದ ಅನ್ನಪೂರ್ಣ ನಾನಿನ್ನೂ ಕೆಲಸದಲ್ಲಿ ನಿರತನಾಗಿರುತ್ತಿದ್ದುದನ್ನು ಕಂಡು "ಹೊಟ್ಟೆ ಹಸೀತಿದೆ, ಎದ್ದೇಳ್ರೀ ಮೇಲೆ" ಎಂದು ಪ್ರೀತಿಯ ಮಾತಿನಿಂದಲೇ ದಬಾಯಿಸಿ ನನ್ನನ್ನು ಊಟಕ್ಕೆ ಕಳುಹಿಸುತ್ತಿದ್ದುದು ಸಾಮಾನ್ಯವಾಗಿತ್ತು. ನಾನು ಕ್ಯಾಂಟೀನಿಗೆ ಹೋಗಿ ಊಟ ಮುಗಿಸಿ ಬಂದರೂ ಇವರ ಊಟ ಮತ್ತು ಮಾತು ಎರಡೂ ಮುಗಿಯುತ್ತಿರಲಿಲ್ಲ.! ಸೆಕ್ಷನ್ ನ ತುಂಬೆಲ್ಲಾ ನಗೆಯ ಹೊಗೆ ತುಂಬಿರುತ್ತಿತ್ತು!! ಅನ್ನಪೂರ್ಣಳ ಸಾವಿಗಿಂತ ಒಂದು ತಿಂಗಳ ಮೊದಲಿನವರೆಗೂ ನಮ್ಮ ಸೆಕ್ಷನ್ ನಲ್ಲಿ ಈ ವಾತಾವರಣವಿತ್ತು. ನಂತರದಲ್ಲಿ ದೀಪಶ್ರೀ, ಮಾಲಾ, ನಿರ್ಮಲ ರಿಗೆ ಮುಂಬಡ್ತಿ ಸಿಕ್ಕಿ ನಮ್ಮ ಸೆಕ್ಷನ್ ನಿಂದ ದೂರವಾದರೆ, ಅನ್ನಪೂರ್ಣ ಮಾತ್ರ ಇಹ ಲೋಕದಿಂದಲೇ ದೂರವಾದಳು.

ನಮ್ಮ ಸೆಕ್ಷನ್ ನಲ್ಲಿ ನನಗೂ ಮತ್ತು ದೀಪಶ್ರೀಗೂ ಒಂಥರಾ ಎಣ್ಣೆ ಸೀಗೆಕಾಯಿಯ ಸಂಬಂಧ. ಪ್ರತಿದಿನ ಒಂದಿಲ್ಲೊಂದು ವಿಚಾರಕ್ಕೆ ಒಬ್ಬರನ್ನೊಬ್ಬರು ರೇಗಿಸುವುದು, ಕಾಲೆಳೆಯುವುದು ಸಾಮಾನ್ಯವಾಗಿತ್ತು. ಹೀಗೆ ರೇಗಿಸದೆ ಕಾಲೆಳೆಯದೆ ದಿನಕಳೆದೆವೆಂದರೆ ಏನೋ ಕಳಕೊಂಡ ಅನುಭವ ನನಗಾಗುತ್ತಿತ್ತು. ಕೆಲವೊಮ್ಮೆ ಯಾವುದೋ ಅಕ್ಷರದ, ಪದದ ತಪ್ಪು ಬಳಕೆಯ ಬಗ್ಗೆಯೋ, ಉಚ್ಛಾರಣಾ ದೋಷದ ಬಗ್ಗೆಯೋ, ಒಬ್ಬರನ್ನೊಬ್ಬರು ಮಾತನಾಡಿಸುವ ಧಾಟಿಯ ಬಗ್ಗೆಯೋ, ಕ್ಷುಲ್ಲಕ ಟೀಕೆಯ ಬಗ್ಗೆಯೋ ಹೀಗೆ ಯಾವುದೋ ಒಂದು ಕಾರಣವಲ್ಲದ ಕಾರಣಕ್ಕೆ ನಮ್ಮಿಬ್ಬರಲ್ಲಿ ವಾಕ್ಸಮರ ನಡೆಯುತ್ತಿತ್ತು. ಅದು ಹಾಗೆ, ಇದು ಹೀಗೆ, ಇದು ಹೀಗೀಗೆ ಎಂಬಿತ್ಯಾದಿಯಲ್ಲಿ ವಾದ-ವಿವಾದಗಳು ಜರುಗುತ್ತಿದ್ದವು. ಇಂತಹ ಸಂದರ್ಭಗಳಲೆಲ್ಲ ಅನ್ನಪೂರ್ಣ- ದೀಪಶ್ರೀ ತನ್ನ ಗೆಳತಿಯಾಗಿದ್ದರೂ ಸಹ- ನನ್ನ ಪರವಾಗಿ ನಿಂತು ನನ್ನ ವಾದಕ್ಕೆ ಪುಷ್ಠಿ ನೀಡುತ್ತಿದ್ದಳು. ಇದನ್ನು ವಿರೋಧಿಸಿ ದೀಪಶ್ರೀ "ನೋಡೂ ನೀನೂ ಅವರ ಕಡೆ ಸೇರ್ಕೋಬೇಡ, ಸರಿ ಇರೊಲ್ಲ" ಎಂದು ತಾಕೀತು ಮಾಡಿದರೆ. "ಪಾಪ ಸುಮ್ನಿರೇ ನಿನಿಗಾದರೆ ನಾವೆಲ್ಲಾ ಇದೀವಿ, ಅವರಿಗೆ ಯಾರಿದಾರೆ ಹೇಳು" ಎಂದು ನನ್ನ ಪರವಾಗಿ ಮಾತನಾಡುತ್ತಿದ್ದಳು. ಇಂತಹ ಅನ್ನಪೂರ್ಣಳದ್ದು ತುಂಬಾ ಮೃದು ಮನಸ್ಸು, ಒಂದೇ ಒಂದು ದಿನವೂ ಅವಳು ಯಾರೊಡನೆಯೂ ರೇಗಾಡಿದ್ದನ್ನು, ಜಗಳ ಕಾಯ್ದಿದ್ದನ್ನು ನಾನಂತೂ ನೋಡಿಯೇ ಇಲ್ಲ. ಆಕೆಯದು ಅಷ್ಟೇ ಉದಾರ ಬುದ್ದಿ. ತಾನು ಗರ್ಭಿಣಿಯಾಗಿದ್ದಂತಹ ಸಂದರ್ಭದಲ್ಲಿ ತಿನ್ನಲು ತಂದಿರುತ್ತಿದ್ದ ಹಣ್ಣು-ಹಂಪಲು, ಬ್ರೆಡ್ಡು-ಬನ್ನು, ಸಿಹಿತಿಂಡಿ ಹೀಗೆ ಏನಾದರೂ ಸಹ ಅದರಲ್ಲಿ ಒಂದುಚಿಕ್ಕ ಪಾಲನ್ನು ಆಗಾಗ ನನಗಾಗಿ ಎತ್ತಿಟ್ಟು ಕೊಡುತ್ತಿದ್ದಳು. ನಾನು "ನನಗ್ಯಾಕ್ರೀ ಇವು, ಈಗ ನೀವೇ ಇಬ್ಬಿಬ್ಬರಾಗ್ತಾ ಇದೀರಿ ನೀವೇ ತಿನ್ಬೇಕು" ಎಂದು ತಮಾಷೆ ಮಾಡುತ್ತ ತಿನ್ನುತ್ತಿದ್ದೆ. ನನ್ನ ಅದ್ಯಾವ ಗುಣ ಅವಳ ಕನಿಕರಕ್ಕೆ ಕಾರಣವಾಗಿತ್ತೋ ಗೊತ್ತಿಲ್ಲ 'ಪರಶುರಾಮನ್ನ ಕಂಡ್ರೆ ಏನಾದ್ರೂ ಕೊಡಬೇಕು ಅನ್ಸುತ್ತೆ ಕಣೆ' ಅಂತ ತನ್ನ ಗೆಳತಿ ದೀಪಶ್ರೀ ಜೊತೆ ಆಗಾಗ ಹೇಳಿತ್ತಿದ್ದಳಂತೆ. ಹೀಗೆ ಹೇಳಿದಂತೆಯೇ ಆಗಾಗ ಏನಾದರೊಂದನ್ನು ತಂದು ಕೊಡುತ್ತಲೇ ಇದ್ದಳು. ಇಂತಹ ಅನ್ನಪೂರ್ಣ ದಿನಾ ಬೆಳಿಗ್ಗೆ ನಮ್ಮ ಸೆಕ್ಷನ್ ಗೆ ಬಂದು ಗುಡ್ ಮಾರ್ನಿಂಗ್ ಹೇಳಿ, ಎಲ್ಲರನ್ನೂ ಮಾತನಾಡಿಸಿಕೊಂಡು ಹೋಗುತ್ತಿದ್ದಳು. ಒಂದೊಮ್ಮೆ ಬಾರದಿದ್ದರೆ 'ಯಾಕೋ ಅನ್ನಪೂರ್ಣ ಬರಲಿಲ್ಲವಲ್ಲಾ' ಅನಿಸುತ್ತಿತ್ತು. ನಮ್ಮ ಸೆಕ್ಷನ್ ನೊಂದಿಗೆ ಆಕೆಗೆ ಅಷ್ಟೊಂದು ಭಾವನಾತ್ಮಕವಾದ ನಂಟಿತ್ತು. ಆತ್ಮೀಯತೆಯ ಬೆಸುಗೆ ಇತ್ತು.

ಕಳೆದವರ್ಷ ಮಾರ್ಚ್ 24 ರ ಮಂಗಳವಾರದ ದಿನ ನಾನು ಎಂದಿನಂತೆ ಕಛೇರಿಗೆ ಬಂದು ಕೆಲಸ ಪ್ರಾರಂಭಿಸಬೇಕೆಂಬ ತಯಾರಿಯಲ್ಲಿದ್ದಾಗ 'ಅನ್ನಪೂರ್ಣ ಕೋಮಾದಲ್ಲಿದ್ದಾಳಂತೆ' ಎಂಬ ಸುದ್ದಿ ಬಂತು. ತಲ್ಲಣದ ಮನಸ್ಸಿನಿಂದ ತಕ್ಷಣ ದೀಪಶ್ರೀಗೆ ಫೋನಾಯಿಸಿದರೆ 'ಅನ್ನಪೂರ್ಣ ನಮ್ಮನ್ನೆಲ್ಲಾ ಬಿಟ್ಟು ಹೋಗ್ತಿದಾಳ್ರೀ, ಕೊನೇ ಬಾರಿ ಅವಳ ಮುಖವನ್ನಾದ್ರೂ ನೋಡ ಬನ್ರೀ' ಎಂಬ ಗದ್ಗದಿತ ಧ್ವನಿ ಕೇಳಿತು. ತರಾತುರಿಯಲ್ಲಿ ನಾವೆಲ್ಲಾ ಹೋಗಿ ಅವಳನ್ನು ನೋಡಬೇಕೆನ್ನುವಷ್ಟರಲ್ಲೇ ಅನ್ನಪೂರ್ಣಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅನ್ನಪೂರ್ಣ ಎಂಬ ನಿಶ್ಚಲ ದೇಹವನ್ನು ಮಾತ್ರ ಆಸ್ಪತ್ರೆಯಿಂದ ಮನೆಗೆ ಸಾಗಿಸಲಾಗಿತ್ತು. ಸದಾ ನಗುತ್ತಿದ್ದ ಹುಡುಗಿಯ ನೆನೆದು ಅಳುತ್ತಿದ್ದವರ ನಡುವೆ, ನಿದ್ದೆ ಬಂದು ಮಲಗಿರುವಳೇನೋ ಎಂಬಂತಿದ್ದ ಅನ್ನಪೂರ್ಣಳ ಆ ಮುದ್ದು ಮುಖವನ್ನು ಅಂತಿಮ ಬಾರಿಗೆ ನೋಡಿದೆ. ಆತ್ಮೀಯ ಕೊಂಡಿಯೊಂದು ಹೃದಯದಿಂದ ಕಳಚಿಕೊಂಡ ನೋವಿಗೆ ನನ್ನ ಅರಿವಿಗೂ ಬಾರದೇ ಕಣ್ಣಂಚಿನಲ್ಲಿ ಕಂಬನಿಯ ಪಸೆ ಜಿನುಗುತ್ತಿತ್ತು.

ಗರ್ಭಿಣಿಯಾಗಿದ್ದ ಅನ್ನಪೂರ್ಣ ಕೇವಲ ಮೂರು ವಾರಗಳ ಮೊದಲಷ್ಟೇ ಸಚಿವಾಲಯದಿಂದ ಬಿಡುಗಡೆ ಹೊಂದಿ ಮೈಸೂರಿನಲ್ಲಿ ನಿಯೋಜನೆ ಮೇಲೆ ಕೆಲಸಕ್ಕೆ ತೆರಳಿದ್ದಳು. ಹೆರಿಗೆಯ ದಿನ ಸಮೀಪಿಸಿದಂತೆ ಮತ್ತೆ ಬೆಂಗಳೂರಿಗೆ ಬಂದು ತನ್ನ ಚಿಕ್ಕಪ್ಪನ ಮನೆಯಲ್ಲೇ ಇದ್ದಳು. ಆ ಮಂಗಳವಾರಕ್ಕಿಂತ ಒಂದು ದಿನ ಮೊದಲು ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಅವಳ ಚಿಕ್ಕಪ್ಪ ಅವಳನ್ನು ನಗರದ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಹುಟ್ಟುವ ಕಂದನ ನೆವವನ್ನಿಟ್ಟು ತಾಯ ಆಯುವನ್ನು ಮುಗಿಸಣಿಸಿದ್ದನೇನೋ ವಿಧಿ, ಅಂದು ಗಂಡು ಮಗುವಿಗೆ ಜನ್ಮವಿತ್ತ ಅನ್ನಪೂರ್ಣ ತನ್ನ ಜೀವವನ್ನು ವಿಧಿಗೊಪ್ಪಿಸಿದ್ದಳು. ಅಂದು ಮಗುವಿಗೆ ಜೀವವ ನೀಡಿ ತಾಯಿಯ ಜೀವವನ್ನು ಕಸಿದುಕೊಳ್ಳುವಲ್ಲಿ ವಿಧಿ ಯಶಸ್ವಿಯಾಗಿದ್ದ. ತಾಯಿ ಇಲ್ಲದೇ ಮಗು ಹೇಗೆ ಬೆಳೆದೀತು ಎಂಬ ಸಾಮಾನ್ಯ ಜ್ಞಾನವೂ ಇರಲಿಲ್ಲವೇನೋ ಆ ದುರ್ವಿಧಿಗೆ. ಹುಟ್ಟಿದ ಕೆಲ ಗಳಿಗೆಗಳಲ್ಲಿಯೇ ಮಗುವೂ ತಾಯಿಯ ಮಡಿಲನ್ನೇ ಸೇರಿತು. ಹುಟ್ಟುವ ಕಂದನ ಬಗ್ಗೆ, ಕಂದನ ಹೆಸರಿನ ಬಗ್ಗೆ, ಕಂದನ ನಗುವಿನ ಬಗ್ಗೆ, ಸಾವಿರ ಸಾವಿರ ಕನಸುಗಳನ್ನು ಕಟ್ಟಿಕೊಂಡಿದ್ದ ಅನ್ನಪೂರ್ಣ ಕಂದನ ಅಳುವನ್ನೂ ಕೇಳಲಾರದೆ ಕಣ್ಮುಚ್ಚಿದ್ದಳು. ಅನ್ನಪೂರ್ಣ ಇಲ್ಲದೆ ಇಂದಿಗೆ ವರ್ಷವೇ ಕಳೆದೋಯ್ತು. ಆದರೆ ಕಣ್ಣ ಪರದೆಯ ಹಿಂದೆ ಅವಳ ರೂಪವಿಂದೂ ಕಾಣಿಸುತ್ತಲೇ ಇದೆ. ಭಾವಭಿತ್ತಿಯಲಿ ಚಿತ್ರಿಸಿದ ಗೆರೆಗಳು ಮಸುಕಾಗದೇ ಹೊಳೆಯುತ್ತಿವೆ. ಆತ್ಮೀಯ ತಂಗಿಯ ಮುಗ್ದ ಮಾತು, ನಿಷ್ಕಪಟ ನಗು ಮನಸ್ಸಿನ ಮೂಲೆಯಲ್ಲಿ ಅನುರಣಿಸುತ್ತಲೇ ಇವೆ. ಅಪೂರ್ಣಾಯುವಾಗಿ ಹೋದ ಅನ್ನಪೂರ್ಣಳ ಆತ್ಮಕ್ಕೆ ಮರುಜನ್ಮವೆಂಬುದೊಂದಿದ್ದರೆ ಮತ್ತೆ ಇಲ್ಲಿಯೇ ಹುಟ್ಟಿ ಬರಲಿ ಅನ್ನಪೂರ್ಣ ಳಾಗಿ ಎಂದು ಮನಸ್ಸು ಪದೇ ಪದೇ ಆಶಿಸುತ್ತಿದೆ.

ಪರಶು..,
parashusagar@gmail.com


08 March 2010

"ಯತ್ರ ನಾರ್ಯಸ್ತು, ಪೂಜ್ಯಂತೆ ರಮಂತೆ ತತ್ರ ದೇವತಾ:"
-ಮನು



* ಮಹಿಳಾ ದಿನದ ಶುಭಾಷಯಗಳು.....