ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

16 November 2009

ಕಥಾ ಪುಷ್ಪ


1. ಮಸುಕು

ಬೆಳಿಗ್ಗೆಯಿಂದ ಬಿಡುವಿಲ್ಲದೆ ಕೆಲಸ ಮಾಡಿದ ಬಾನುಗೆ ಈ ಭಾನುವಾರ ಯಾಕಾದ್ರೂ ಬರುತ್ತೋ ಏನೋ ಅನ್ನಿಸಿ ಬಿಟ್ಟಿತ್ತು. ಬಾಕಿ ದಿನಗಳಲ್ಲಾದರೆ ಕಾಲೇಜಿಗೆ ಹೋಗಿ-ಬರುವುದರಲ್ಲಿಯೇ ಸಮಯ ಕರಗಿ ದಿನಗಳುರುಳಿ ಹೋಗುತ್ತವೆ. ಆದರೆ ಇಂದು ಮಾತ್ರ ಗಡಿಯಾರವೇ ನಿಶ್ಚಲವಾದಂತೆ ಕಾಣುತ್ತಿತ್ತು. ಅಮ್ಮ ಬೇಗಂ ಬೆಳಿಗ್ಗೆ ಬೇಗ ಎದ್ದವಳೇ ಸಾಗರಕ್ಕೆ ಹೋಗಿದ್ದರೆ, ಅಣ್ಣ ಹಮೀದ ಏನೋ ಮೀಟಿಂಗ್ ಇದ್ದಿದ್ದರಿಂದ ಮಸೀದಿ ಕಡೆ ಹೋಗಿದ್ದ. ಅತ್ತಿಗೆಯಂತೂ ತವರು ಮನೆ ಸೇರಿ ಮೂರ್ನಾಲ್ಕು ದಿನಗಳೇ ಕಳೆದಿದ್ದವು. ಇವೆಲ್ಲವುಗಳಿಂದಾಗಿ ಬಾನು ಒಬ್ಬಳೇ ಇಂದು ಮನೆಯ ಹೊಣೆ ಹೊತ್ತಿದ್ದಳು. ಎದ್ದಾಗಿನಿಂದ ಕೆಲಸದ ಹಿಂದೆ ಕೆಲಸ ಮಾಡುತ್ತಾ ಬಂದಿದ್ದರೂ ಒಂದೂ ಮುಗಿದಂತೆ ಕಾಣಲಿಲ್ಲ. ಇಡೀ ಮನೆಯೆಂಬ ಮನೆಯೇ ಬಣಗುಡುತ್ತಿದ್ದುದರಿಂದ ಹೊರೆ ಕೆಲಸದ ನಡುವೆಯೂ ಏನೋ ಅವ್ಯಕ್ತ ಬೇಸರ ಮೂಡುತ್ತಿತ್ತು.
ಹೊತ್ತು ಹತ್ತಾಗುವ ವೇಳೆಗೆ "ಸಾಕಪ್ಪಾ ಈ ಮನೆಗೆಲಸದ ಸಹವಾಸ" ಎಂದು ಗೊಣಗುತ್ತಾ ಬಂದ ಬಾನು ಮಂಚದ ಮೇಲೆ ಕುಳಿತಳು. ಸುಮ್ಮನೆ ತೆಪ್ಪಗೆ ಮನೆಯ ಮೂಲೆಯಲ್ಲಿ ಕುಳಿತಿದ್ದ ಟಿ.ವಿ.ಯ ಸ್ವಿಚ್ಚು ಅದುಮಲು ಅದು ತನ್ನ ಭಾವಾಭಿನಯದ ಠೀವಿಯಿಂದಲೇ 'ತೇರಾ ಮೇರಾ ಬೀಚುಮೆ ಕೈಸಾ ಹೈಯೇ ಬಂಧನ್......' ಎಂದು ಶುರುಹಚ್ಚಿಕೊಳ್ಳುತ್ತಿದ್ದಂತೆ ಕರೆಂಟು 'ಟುಸ್' ಎಂದು ಹೋಯಿತು. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಮನಸ್ಸಿನಲ್ಲಿ ಇನ್ನಷ್ಟು ಬೇಸರ ಬೆಳೆಯುತ್ತಾ ಹೋಯಿತು. ಗೆಳತಿ ಉಷಾಳೊಂದಿಗಾದರೂ ಮಾತನಾಡಿ ರಿಲ್ಯಾಕ್ಸ್ ಆಗೋಣ ಎಂದು ಪಕ್ಕದಲ್ಲಿದ್ದ ಫೋನನ್ನೆತ್ತಿ ನಂಬರ್ ಒತ್ತಿದರೆ ಅಲ್ಲೂ ಅದೇ ಅಪಸ್ವರ " ನೀವು ಡಯಲ್ ಮಾಡಿದ ಮಾರ್ಗವು ತುಂಬಾ ಬ್ಯುಸಿಯಾಗಿದೆ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಪೋನನ್ನಿಡಿದು ಕುಟ್ಟ ಬೇಕೆನಿಸಿತು ಬಾನುಗೆ, ಆದರೆ ಈ ನಿರ್ಜೀವ ವಸ್ತುವಿಗೆ ಶಿಕ್ಷೆ ಕೊಟ್ಟು ಪ್ರಯೋಜನವಿಲ್ಲ ಎಂಬ ತಿಳಿವು ಹೊಳೆದು ಎಡಗೈಯಲ್ಲಿ ಹಿಡಿದಿದ್ದ ರಿಸೀವರನ್ನೊಮ್ಮೆ ನೋಡಿದಳು ಅದು ಆಕೆಯನ್ನೇ ನೋಡಿ ನಕ್ಕಂತೆ ಭಾಸವಾಯಿತು. ಅದರ ನೋಟದಿಂದ ತಪ್ಪಿಸಿಕೊಳ್ಳಲು ಅದನ್ನು ಅದರ ಸ್ವ-ಸ್ಥಾನದಲ್ಲಿಟ್ಟಳು. ಆಗಲೂ ಅದು 'ಫಟ್' ಎಂದು ನಕ್ಕಿತು.
ಇಂದು ಮನೆಯಲ್ಲಿರುವ ವಸ್ತುಗಳಿಗೆಲ್ಲಾ ಇಂದೇನೋ ಅಗೋಚರ ಜೀವ ಬಂದಿದೆ. ಅದಕ್ಕೇ ಅವು ತನ್ನನ್ನು ಅಣಕಿಸುತ್ತಿವೆ. ಅವುಗಳ ಗೊಡವೆಯೇ ತನಗೆ ಬೇಡವೆಂದು ಬಾನು ಹಾಗೇ ಮಂಚದ ತುದಿಗೊರಗಿ ಕುಳಿತಳು. ಆಗಲೂ ತಿಂಗಳಿಗೊಂದೊಂದು ವಸ್ತ್ರವ ಬದಲಿಸುವಂತೆ ಪುಟ ತಿರುಗಿಸಿ ನಳನಳಿಸುತ್ತಾ ಗೋಡೆಯ ಮೇಲೆ ನೇತಾಡುತ್ತಿದ್ದ ಕ್ಯಾಲೆಂಡರ್ ಅವಳ ಗಮನ ಸೆಳೆಯಿತು. ಅದನ್ನು ಮುದ್ದಿನಿಂದೆತ್ತಿ ತೊಡೆಯ ಮೇಲಿಟ್ಟುಕೊಂಡು ಒಂದೊಂದೇ ಹಾಳೆಯನ್ನು ತಿರುವುತ್ತಾ ಮುಂಬರುವ ದಿನಗಳನ್ನು ತನ್ನ ಕಣ್ಮುಂದೆ ತಂದುಕೊಂಡಳು. ಹೀಗೆ ನೋಡುತ್ತಿದ್ದಾಗ ರಂಜಾನು ಹಬ್ಬಕ್ಕೆ ಇನ್ನೆರಡೇ ತಿಂಗಳುಗಳಿವೆ ಎಂಬುದು ತಿಳಿದು ಮನಸ್ಸು ಉಲ್ಲಸಿತವಾಯಿತು. ರಂಜಾನು ಹಬ್ಬದ ಸಡಗರ ಸಂಭ್ರಮಗಳೆಲ್ಲಾ ಮನಸ್ಸಿನಲ್ಲಿ ಹಸಿ-ಹಸಿಯಾಗಿ ಮೂಡತೊಡಗಿದವು. ಹಬ್ಬಕ್ಕೆ ಬರುವ ನೆಂಟರಿಷ್ಟರು, ಹಬ್ಬದ ನೆವದಲ್ಲಾದರೂ ಬರುವ ಅಕ್ಕಂದಿರು, ತಮ್ಮ ಪುಟ್ಟ ಪುಟ್ಟ ಕಾಲ್ಗಳಲ್ಲಿ ಪಟಪಟನೆ ಓಡಾಡುತ್ತಾ ಮುದ್ದು ಮಾತಿನಿಂದ ಇಡೀ ಮನೆಯನ್ನೇ ಗಿಜಿಗುಡಿಸುವ ಅವರ ಮಕ್ಕಳು, ಹಬ್ಬಕ್ಕಿಂತಲೂ ಮೊದಲೇ ಹತ್ತುಬಾರಿ ಶುಭಾಷಯ ಕೋರುವ ಕೃಪಾ, ಶುಭಾ, ಉಷಾ ಮೊದಲಾದ ಗೆಳತಿಯರು, ಹೀಗೆ ಎಲ್ಲವೂ ಒಮ್ಮೆಗೇ ನೆನಪಾದವು. ಇವೆಲ್ಲಾ ನೆನಪಿನಿಂದ ಮನಸ್ಸು ಉಡುಗೆ-ತೊಡುಗೆಯ ಕಡೆ ಹರಿದು ಈ ಬಾರಿ ಹಬ್ಬಕ್ಕೆ ಹೇಗಾದರೂ ಮಾಡಿ ಒಂದು ಒಳ್ಳೆಯ ಚೂಡಿ ತರಿಸಲೇಬೇಕು ಎನಿಸಿತು. ಹೀಗೆ ತನ್ನ ಬಟ್ಟೆಯ ಬಗ್ಗೆ ಯೋಚನೆ ಹರಿದದ್ದೇ ತಡ ಕಳೆದ ಹದಿನೈದು ದಿನಗಳಿಂದಲೂ ತೊಳೆಯದೇ ಹಾಗೇ ನೇತಾಕಿದ್ದ ತನ್ನ ಬಟ್ಟೆಗಳ ನೆನಪಾಗಿ ಧಡಕ್ಕನೆ ಹೊರಗೋಗಿ ಸೂರ್ಯನನ್ನೊಮ್ಮೆ ದಿಟ್ಟಿಸಿದಳು. ನೆತ್ತಿಯ ಮೇಲೆ ಮೇಲೆ ಹತ್ತಲೆತ್ನಿಸುತ್ತಿದ್ದ ಸೂರ್ಯನ ಬಿಸಿಲು ಭೂಮಿಯ ಬಣ್ಣವನ್ನೇ ಬದಲಾಯಿಸುವಂತಿತ್ತು. ತೊಳೆದು ಹಾಕುತ್ತಿದ್ದಂತೆ ಬಟ್ಟೆಗಳು ಒಣಗುವುದು ಗ್ಯಾರಂಟಿ, ಹಾಗೇನೆ ಇಸ್ತ್ರೀನೂ ಮಾಡ ಬಹುದು ಎಂದೆಣಿಸಿ ನಾಲೆಯ ಮೇಲೆ ಜೋತು ಬಿದ್ದಿದ್ದ ಕೆಲವು ಚೂಡಿಗಳನ್ನು ಒಂದೆರಡು ನೈಟಿಗಳನ್ನು ಬಗಲಿಗವುಚಿಕೊಂಡು ಕೈಯಲ್ಲಿ ಒಂದು 'ಸುಂದರಿ'ಯನ್ನಿಡಿದು ಬಚ್ಚಲು ಮನೆಕಡೆ ನಡೆದಳು.
ಬಾನು ಒಂದೊಂದೇ ಚೂಡಿಯನ್ನು ನೆನೆಸಿ ಸೋಪು ಹಚ್ಚುತ್ತಿದ್ದಂತೆ ಅದನ್ನು ತರಲು ತಾನು ಪಟ್ಟ ಪರಿಶ್ರಮಗಳೆಲ್ಲಾ ಮಿದುಳಿನಾಳದಲ್ಲಿ ಅನಾವರಣಗೊಳ್ಳುತ್ತಿದ್ದವು. ಅಣ್ಣನ ಮದುವೆಯಲ್ಲಿ ಮನೆಯವರು ಸ್ವ-ಇಚ್ಚೆಯಿಂದ ಎರಡು ಚೂಡಿ ತಂದಿದ್ದು ಬಿಟ್ಟರೆ ಉಳಿದೆಲ್ಲವೂ ತಾನು ಕಾಡಿ-ಬೇಡಿ ತರಿಸಿಕೊಂಡಂತಹವೇ ಆಗಿದ್ದವು. ಹೀಗೆ ನಾನಾ ನೆನಪುಗಳೊಂದಿಗೆ ಎಲ್ಲವನ್ನೂ ತೊಳೆದು ಕೊನೆಯಲ್ಲಿ ತನಗೆ ಅಚ್ಚು ಮೆಚ್ಚೆನಿಸಿದ ಪಳಪಳನೆ ಹೊಳೆವ ಕೆಂಪು ಚೂಡಿಯನ್ನು ತೊಳೆಯಲು ಕೈಯಲ್ಲಿ ಹಿಡಿಯುತ್ತಿದ್ದಂತೆ ಎದೆ ಒಡೆಯುವಂತಹ ಆಘಾತವಾಯಿತು. ಕಳೆದೊಂದು ವಾರದಿಂದ ತೊಡದೇ ಹಾಗೇ ಇಟ್ಟಿದ್ದ ಆ ಚೂಡಿಯನ್ನು ಇಲಿ ಎಂಬೋ ಪ್ರಾಣಿ ತನಗೆ ಮನಬಂದಂತೆ ಕಚ್ಚಿ-ಕಡಿದು ಹಾಕಿತ್ತು. ಬರೋಬ್ಬರಿ ಅಂಗೈ ಅಗಲದಷ್ಟನ್ನಾದರೂ ತುಂಡು ಮಾಡಿತ್ತು.! ಅರೆಕ್ಷಣ ಬಾನೂಗೆ ಏನು ಮಾಡಲೂ ತೋಚದಾಯಿತು. ಇಲಿ ಎಲ್ಲಿಯಾದರೂ ಸಿಕ್ಕಿದರೆ ಸುಟ್ಟು ಬೂದಿ ಮಾಡುವಷ್ಟು ಕೋಪ ನೆತ್ತಿಗೇರಿತು. ಆದರೂ ತನ್ನ ಅಸಹಾಯಕತೆಯ ಅರಿವಾಗಿ ಅಳುವುದೊಂದೇ ಬಾಕಿಯುಳಿಯಿತು. ಇಡೀ ಚೂಡಿಯನ್ನು ಎತ್ತಿ ತನ್ನ ಮೈ ಗೆ ಆನಿಸಿ ಹಿಡಿದಳು- ಪ್ಯಾಚುಮಾಡಿ ಧರಿಸಬಹುದೇನೋ ಎಂಬ ಆಸೆಯಿಂದ. ಆದರೆ ಇಲಿ ಚೂಡಿಯ ಹಿಂಬಾಗದ ಸೊಂಟದ ಭಾಗವನ್ನೇ ತುಂಡರಿಸಿಬಿಟ್ಟಿತ್ತು. 'ಪ್ಯಾಚು' ಮಾಡಿ ತೊಟ್ಟರೂ ಅಸಹ್ಯವಾಗಿ ಕಾಣುವಂತಿತ್ತು. ಅದರ ವೇಲೂ ಸಹ ಅದನ್ನು ಮುಚ್ಚುವಂತಿರಲಿಲ್ಲ. ಅದಾಗಲೇ ಬಿಸಿಲ ಝಳದಿಂದ ಬಳಲಿ ಬಂದ ಬೇಗಂ ಒಳಗಡಿ ಇಡುತ್ತಿದ್ದಂತೆ ಬಾನು ಕುಡಿಯಲು ತಣ್ಣನೆಯ ನೀರು ತಂದುಕೊಟ್ಟಳು, ಜೊತೆಗೆ ಇಲಿಕಡಿದ ಚೂಡಿಯನ್ನು ತಂದು ತೋರಿಸಿ ತನ್ನ ಅಳಲನ್ನು ತೋಡಿಕೊಂಡಳು. ಎಲ್ಲವನ್ನೂ ಗಮನಿಸಿದ ಬೇಗಂ ನಿರ್ಲಿಪ್ತತೆಯಿಂದ "ಹ್ಞಾ.. ನಂ ಬಗ್ಗೆ ನಮಿಗೆ ಜವಾಬ್ದಾರಿಲ್ಲಾಂದ್ರೆ ಹೀಂಗೇ ಆಗೋದು, ಬಟ್ಟೆನಾದ್ರೂ ಅಷ್ಟೇ ಬಾಳಾದ್ರೂ ಅಷ್ಟೇ" ಎಂದಾಗ ಬಾನುಗೆ ತಾಯಿಯ ಮಾತಿನ ತಳ ಬುಡ ಅರ್ಥವಾಗಲಿಲ್ಲ. " ನಂಗೆ ಅದೆಲ್ಲಾ ಗೊತ್ತಾಗೊಲ್ಲಮ್ಮ, ನನ್ನ ಬಂಗಾರದಂತ ಡ್ರೆಸ್ ನ ಇಲಿ ತಿಂದು ಹಾಕಿದೆ. ನನಗೀಗ ಇನ್ನೊಂದು ಡ್ರೆಸ್ ಕೊಡುಸ್ತೀಯೋ ಇಲ್ವೋ..? " ಎಂದು ಸ್ವಲ್ಪ ಬಿರುಸಾಗಿಯೇ ಕೇಳಿದಳು ಬಾನು. "ನನ್ನ ಬಳಿ ನಯಾ ಪೈಸೆನೂ ಇಲ್ಲಮ್ಮಾ ಬೇಕಾದ್ರೆ ನಿಮ್ಮಣ್ಣನ ಕೇಳ್ಕೋ ಹೋಗ್" ಎಂದೇಳಿ ಮುಖ ತಿರುಗಿಸಿದರೂ ಬೆನ್ನು ಬಿಡದ ಬಾನು " ಪ್ಲೀಸ್ ಅಮ್ಮಾ, ಈಗ ಬೇಡಮ್ಮಾ, ಇನ್ನೆರಡು ತಿಂಗಳಲ್ಲಿ ರಂಜಾನ್ ಬರುತ್ತೆ ಆಗ ಕೊಡ್ಸಮ್ಮಾ" ಎಂದು ಅನುನಯವಾಗಿ ಬೇಡಿಕೊಂಡಾಗ ಬೇಗಂಗೆ 'ಇಲ್ಲ' ಎನ್ನಲಾಗಲಿಲ್ಲ. 'ನೋಡೋಣ' ಎಂದಷ್ಟೇ ಹೇಳಿ ಅಡುಗೆ ಮನೆ ಒಳಹೊಕ್ಕಳು.
ರಾತ್ರಿ ಮಲಗಿದಾಗಲೂ ಕೂಡಾ ಬಾನು ಗೆ ತನ್ನ ಆ ಚೂಡಿಯ ನೆನಪು ಕಾಡುತ್ತಿತ್ತು. ! ಜೊತೆಗೆ ಇಲಿಗಳ ಬಗೆಗಿನ ಕೋಪವೂ ಇಮ್ಮಡಿಸುತ್ತಿತ್ತು. ತಾನು ಮಲಗಿದ ಮಂಚದಡಿಯಲ್ಲಿ ಹಲ್ಲಿಯೋ ಜಿರಲೆಯೋ, ಸರಕ್ಕೆಂದರೂ ಸಹ ದೀಪ ಹಾಕಿ ತಳ-ಬುಡ ಸೋಸುತ್ತಿದ್ದಳು. ಏನೂ ಕಾಣದಿದ್ದರೂ ಸಹ ದಿನಾಲು ಇಲಿಹುಡುಕುವುದ ಬಿಡುತ್ತಿರಲಿಲ್ಲ. ಇನ್ನುಳಿದ ಚೂಡಿಗಳಿಗೂ ಅಂತಹ ದುರ್ಗತಿ ಒದಗದಿರಲೆಂದು ಒಂದೆರಡು ರಾತ್ರಿ ಪಕ್ಕದ ಮನೆಯ ಬೆಕ್ಕನ್ನು ತಂದೂ ಸಹ ಹಾಲೆರೆದು ತನ್ನ ಬಳಿ ಇಟ್ಟುಕೊಂಡಳು. ಆದರೆ ಅವಳಿಗೆ ನಿದ್ರೆ ಹತ್ತುತ್ತಿದ್ದಂತೆ ಅದು ಒಡತಿಯ ಮನೆ ಸೇರಿರುತ್ತಿತ್ತು!
ಬಾನು ಕಾಲೇಜಿಗೆ ಹೋದಾಗಲೂ ಸಹ ತನ್ನ ಗೆಳತಿಯರೊಡನೆ ತನ್ನ ಗತಿಸಿದ ಚೂಡಿಯ ವರ್ಣನೆ ಮಾಡಿದ್ದೇ ಮಾಡಿದ್ದು. ತನ್ನ ವ್ಯಥೆಯನ್ನು ಹೇಳಿದ್ದೇ ಹೇಳಿದ್ದು. ಯಾರ ಕೆಂಪನೆಯ ಡ್ರೆಸ್ ಕಂಡರೂ ಬಾನುಗೆ ತನ್ನ ಚೂಡಿಯ ನೆನಪು ಬರುತ್ತಿತ್ತು. ಇನ್ನೊಂದು ಬಂದು ಅದರ ಸ್ಥಾನ ತುಂಬಿ ಅವಳ ಮೈ ಅಲಂಕರಿಸುವವರೆಗೂ ಅವಳ ಮನಸ್ಸು ಆ ಗತ ಚೂಡಿಯ ನೆನಪಿನಿಂದ ಹೊರಬರಲು ಸಾಧ್ಯವಿರಲಿಲ್ಲ. ಹೊಸದನ್ನು ತರಿಸಿಕೊಳ್ಳಲು ಬಾಯ್ಬಿಟ್ಟು ಅಣ್ಣನೊಡನೆ ಕೇಳುವ ಧೈರ್ಯವೂ ಆಕೆಗಿರಲಿಲ್ಲ.
ಮೊದಲೆಲ್ಲಾ ಆಗಿದ್ದರೆ ಬಾನು ಅಣ್ಣನೊಡನೆ ನೇರವಾಗಿ ಮಾತನಾಡುತ್ತಿದ್ದಳು. ತಮಾಷೆ ಮಾಡುತ್ತಿದ್ದಳು. ಹರಟೆ ಹೊಡೆಯುತ್ತಿದ್ದಳು. ಜೋಕ್ ಹೇಳಿ ನಗಿಸುತ್ತಿದ್ದಳು. ಅವನೂ ಅಷ್ಟೇ ತಂಗಿಯೊಡನೆ ಬಹಳ ಪ್ರೀತಿಯಿಂದಲೇ ಮಾತನಾಡುತ್ತಿದ್ದ. ತಾನು ಏನೇ ತಂದರೂ ತಂಗಿಗೆ ಮೊದಲು ತೋರಿಸುತ್ತಿದ್ದ. ಅವಳು ಏನೇ ಕೇಳಿದರೂ 'ಇಲ್ಲ' ಎನ್ನದೆ ತಂದು ಕೊಡುತ್ತಿದ್ದ. ಆದರೆ ಅವನ ಮದುವೆ ಯಾವಾಗ ಆಯ್ತೋ ಆಗಿನಿಂದ ಅವನ ವರ್ತನೆಗಳು ಬದಲಾದವು. ತಂಗಿ ಏನೇ ಕೇಳಿದರೂ ಗದರಿಸುವ ದನಿಯಲ್ಲೇ ಅವನ ಮಾತುಗಳಿರುತ್ತಿದ್ದವು. ಮೊದಮೊದಲು ಬಾನು, ಅಣ್ಣನ ಪ್ರೀತಿಯಲ್ಲಿ ಅತ್ತಿಗೆ ಪಾಲು ಪಡೆದಿದ್ದರ ಪರಿಣಾಮವಿದು ಅಂದುಕೊಂಡಳಾದರೂ ಪ್ರೀತಿಯಲ್ಲಿ ಪಾಲು ಮಾಡಲಾಗದೆಂಬುದು ಅರಿವಾಗುತ್ತಿದ್ದಂತೆ ತನ್ನನ್ನು ನಿಯಂತ್ರಿಸಲು ಅಣ್ಣ ಬಳಸುತ್ತಿರುವ ಅಸ್ತ್ರವಿದು ಎಂದು ಮನವರಿಕೆಯಾಯಿತು.
ಬಾನು ಹೈಸ್ಕೂಲು ಮುಗಿಸಿ ಕಾಲೇಜು ಸೇರುವುದೂ ಸಹ ಅಣ್ಣ ಹಮೀದನಿಗೆ ಇಷ್ಟವಿರಲಿಲ್ಲ. ಅವಳ ತಾಯಿ ಮತ್ತು ಅವಳ ಮೇಲೆ ಅತೀವ ಪ್ರೀತಿ ಹೊಂದಿದ್ದ ತಂದೆಯಿಂದಾಗಿ ಬಾನು ಕಾಲೇಜು ಮೆಟ್ಟಿಲು ಹತ್ತುವಂತಾಗಿತ್ತು. ಆದರೆ ಆ ವಿಧಿಗೆ ಏನನ್ನಿಸಿತೋ ಏನೋ ಬಾನು ಪ್ರಥಮ ಪಿ.ಯು.ಸಿ. ಮುಗಿಸುವಷ್ಟರಲ್ಲಿ ಅವಳ ತಂದೆ ವಿಧಿವಶರಾದರು. ಅಂದಿನಿಂದ ಅವಳ ಅಂತಃಸತ್ವವೇ ಅಡಗಿಹೋದಂತಾಯಿತು. ಈಗ ತಾಯಿಯ ಬೆಂಬಲವೊಂದರಿಂದಲೇ ಕಾಲೇಜಿಗೆ ಹೋಗುತ್ತಿರುವಳಾದರೂ ಆ ಬೆಂಬಲದ ಶಕ್ತಿ ಕ್ಷಣಿಕವಾದದ್ದು ಎಂಬುದರಲ್ಲಿ ಅನುಮಾನವಿರಲಿಲ್ಲ. ಅಪ್ಪನ ಮರಣದ ನಂತರ ಮನೆಯ ಜವಾಬ್ದಾರಿ ಅಣ್ಣನ ಹಿಡಿತದಲ್ಲಿದ್ದುದರಿಂದ ಹಾಗೂ ಅಣ್ಣನ ಕೈಗಳೇ ತಮ್ಮ ಹೊಟ್ಟೆಯನ್ನೂ ತುಂಬಿಸುತ್ತಿದ್ದುದರಿಂದ ಬಾನು ಮತ್ತು ಬೇಗಂ ಹಮೀದನ ಅಣತಿಯಂತೆ ನಡೆಯುವುದು ಅನಿವಾರ್ಯವಾಗಿತ್ತು. ಹೀಗಾಗಿ ಬಾನು ಅಣ್ಣನೆದುರಿಗೆ ಗಟ್ಟಿಯಾಗಿ ಮಾತನಾಡುತ್ತಿರಲಿಲ್ಲ. ತತ್ಪರಿಣಾಮವಾಗಿ ಅತ್ತಿಗೆಯೊಡನೆಯ ಮಾತೂ ಅಷ್ಟಕಷ್ಟೆ. ಏನಾದರೂ ಕೇಳಿದರೆ ಹಾಂ, ಹೂಂ ಎಂದಷ್ಟೇ ಉತ್ತರ. ಎಲ್ಲಿ ಅತ್ತಿಗೆಯೊಡನೆ ಅತಿ ಸಲುಗೆಯಿಂದ ವರ್ತಿಸಿದರೆ ಅಣ್ಣ ಬಯ್ಯುತ್ತಾನೋ ಎಂಬ ಅಂಜಿಕೆ. ಇಂತಹ ಸ್ಥಿತಿಯಲ್ಲಿ ಬಾನು ಹೇಗೆ ತಾನೇ ಅಣ್ಣನ ಬಳಿ ಧೈರ್ಯದಿಂದ ಕೇಳಿ ತನ್ನ ಬೇಡಿಕೆ ಈಡೇರಿಸಿಕೊಂಡಾಳು.? ಅದಕ್ಕಾಗಿಯೇ ಬಾನು ತನ್ನ ತಾಯಿಯ ಮೂಲಕ ಒತ್ತಡ ತಂದು ತನ್ನ ಆಸೆ ಪೂರೈಸಿಕೊಳ್ಳುತ್ತಿದ್ದಳು.
********
ರಂಜಾನು ಹಬ್ಬಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಅಕ್ಕಂದಿರು ಅವರ ಮಕ್ಕಳೆಲ್ಲಾ ಜಮಾಯಿಸಿದರು. ಮನೆಯ ಯಾವ ಮೂಲೆಯಲ್ಲಿ ನೋಡಿದರೂ ಹಬ್ಬದ ವಾತಾವರಣ. ಸದಾ ಬಣಗುಡುತ್ತಿದ್ದ ಮನೆಯಲ್ಲಿ ಪುಟ್ಟ ಮಕ್ಕಳ ಕಲರವ. ಈ ಮಕ್ಕಳು ಕಳೆದ ವರ್ಷ ತನ್ನ ಟಾಲ್ಕಂ ಪೌಡರನ್ನು ನೀರಿನಲ್ಲಿ ಅದ್ದಿ ಮುದ್ದೆ ಮಾಡಿದ್ದು ಬಾನುಗೆ ನೆನಪಾಗಿ ಈಗ ಅವುಗಳ ಕೈಗೆ ಏನೂ ಸಿಗದಂತೆ ಎಚ್ಚರಿಕೆ ವಹಿಸಿದಳು. ತಾನೂ ಸಹ ಕಾಲೇಜಿಗೆ ರಜೆ ಹಾಕಿ ಎಲ್ಲರೊಡಗೂಡಿ ರಂಜಾನು ಆಚರಿಸಿದಳು. ಬಹುದಿನಗಳಿಂದ ಒತ್ತಡ ತಂದಿದ್ದರ ಫಲಶೃತಿ ಎಂಬಂತೆ ಹಬ್ಬಕ್ಕೊಂದು ಚೂಡಿಯೂ ಬಂದಿತ್ತು. ಅದು ಇಲಿ ಕಡಿದು ಹಾಳಾದ ಆ ಚೂಡಿಯನ್ನು ಹೋಲುತ್ತಿರಲಿಲ್ಲವಾದರೂ ಹೊಸದಾದುದರಿಂದ ಅದು ಚೆನ್ನಾಗಿಯೇ ಇತ್ತು. ಆಸೆ ಪಟ್ಟಂತೆ ಬಾನು ಹೊಸ ವಸ್ತ್ರತೊಟ್ಟು ಹಬ್ಬ ಆಚರಿಸಿದಳು, ಖುಷಿಪಟ್ಟಳು, ಸಂಭ್ರಮಿಸಿದಳು.
ಹಬ್ಬ ಮುಗಿದ ಒಂದು ವಾರಕ್ಕೇ ಅಕ್ಕಂದಿರೆಲ್ಲಾ ತಂತಮ್ಮ ಊರಿಗೆ ಹೊರಟು ಹೋಗುತ್ತಿದ್ದಂತೆ ಮನೆ ಬಣಗುಡಲಾರಂಭಿಸಿತಾದರೂ ನಾಳೆಯಿಂದ ಕಾಲೇಜಿಗೆ ಹೋಗಬೇಕೆಂಬ ಸಂತಸವೂ ಬಾನುವಿನ ಮನಸ್ಸಿನಾಳದಲ್ಲಿ ಮೇಳೈಸಿದ್ದರಿಂದ ಅದರ ಪರಿಣಾಮ ಬಾನುವಿಗಾಗಲಿಲ್ಲ.
ನವ ಚೈತನ್ಯದಿಂದೆಂಬಂತೆ ಬೆಳಿಗ್ಗೆ ಎದ್ದು ಹೊಸ ಚೂಡಿಯನ್ನು ತೊಟ್ಟು ಕಾಲೇಜಿಗೆ ಹೊರಡಲು ಅಣಿಯಾಗುತ್ತಿದ್ದ ಬಾನುಳ ಬಳಿ ಬಂದ ಬೇಗಂ " ಬೇಬೀ ತಗೋ, ಇವತ್ನಿಂದ ಇದನ್ನೂ ಹಾಕೊಂಡೋಗು" ಎಂದು ಒಂದು ಕಪ್ಪನೆಯ ಕವರನ್ನು ಮಗಳ ಕೈಗಿತ್ತಳು. ಬಾನು ಆಶ್ವರ್ಯಾಭರಿತ ಕುತೂಹಲದಿಂದ ಬಿಚ್ಚಿದಾಕ್ಷಣ ಹೃದಯವೇ ಒಮ್ಮೆ ನಿಂತು ಹೋದಂತೆನಿಸಿತು. "ಬು...ರು...ಖಾ.... ಯಾರಿಗಮ್ಮಾ.. ಇದು" ತೊದಲುತ್ತಲೇ ನುಡಿದಳು ಬಾನು. " ನಿನ್ಗೇ ಕಣಮ್ಮಾ... ಮೊನ್ನೇನೆ ನಿಮ್ಮಣ್ಣ ತಂದಿಟ್ಟಿದ್ದ. ಇನ್ಮೇಲೆ ನೀನೆಲ್ಲಿಗೇ ಹೋಗೋದಾದ್ರೂ ಇದ್ನ ಹಾಕೊಂಡೇ ಹೋಗ್ಬೇಕಂತೆ" ತನ್ನಾಜ್ಞೆಯಲ್ಲವಿದು ಎನ್ನುವ ರೀತಿಯಲ್ಲಿ ಬೇಗಂ ಹೇಳುತ್ತಿದ್ದರೂ ಬಾನುಗೆ ತನ್ನಮ್ಮನೂ ಕೂಡಾ ತನ್ನ ಸ್ವಾತಂತ್ರ್ಯದ ಸಂಹಾರ ಮಾಡುತ್ತಿರುವಂತೆ ತೋರಿತು. " ಯಾಕಮ್ಮಾ ಇದು ? ನಾನೇನು ಇಷ್ಟು ದಿನ ಹಾಗೇ ಹೋಗಿ ಬರಲಿಲ್ವಾ..? ಮಾತು ಮಾತಿಗೂ ಬಾನೂಳ ದ್ವನಿ ಗದ್ಗಧಿತವಾಗುತ್ತಿತ್ತು. ಇಷ್ಟು ದಿನ ತನ್ನಣ್ಣನ ಅನುಮಾನದ ಪಹರೆಯನ್ನು ಸಹಿಸಿದ್ದಳು. ಕಿಂಚಿತ್ತೂ ಅನುಮಾನ ಬರದಂತೆ ನಡೆದಿದ್ದಳು ಕೋಡಾ. ಆದರೂ ತನ್ನಣ್ಣ ತನ್ನ ಸೌಂದರ್ಯ ಮುಚ್ಚುವ ಪ್ರಯತ್ನ ಮಾಡಿದ್ದು ಅವಳಲ್ಲಿ ಅತೀವ ದು:ಖ ತಂದಿತು. ಇಡೀ ತರಗತಿಯಲ್ಲಿ ಒಬ್ಬಳೇ ಇರುವ ತಾನು ಈ ಬುರುಖಾ ಧರಿಸಿ ಕುಳಿತುಕೊಳ್ಳುವುದನ್ನು ನೆನಪಿಸಿಕೊಳ್ಳಲೂ ಅವಳಿಂದ ಸಾಧ್ಯವಾಗಲಿಲ್ಲ. ಕಂಬನಿ ತುಂಬಿದ ಕಂಗಳಿಂದಲೇ " ಇಲ್ಲ, ಆಗೊಲ್ಲಮ್ಮ; ನನ್ನಿಂದ ಖಂಡೀತಾ ಸಾಧ್ಯವಿಲ್ಲ. ಈ ಈ ಕಾಲೇಜಿಗೆ ಹೋಗೋದನ್ನೇ ಬಿಡು ಅನ್ನು, ಬಿಡ್ತೀನಿ. ಆದ್ರೆ ಮುಸುಕಾಕ್ಕೊಂಡು ಕಾಲೇಜಿಗೆ ಹೋಗು ಅಂತ ಖಂಡಿತಾ ಹೇಳ್ಬೇಡಾ" ಎನ್ನುತ್ತಾ ಗೋಡೆಗೆ ತಲೆಕೊಟ್ಟು ರೋಧಿಸಲಾರಂಭಿಸಿದಳು. ಮಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಳಾದರೂ ಬೇಗಂ " ಹಾಂಗೆಲ್ಲ ಹಠ ಮಾಡ್ಬಾರ್ದಮ್ಮ. ನಮ್ಮ ರಕ್ಷಣೆಗೆ ನಾವಿದನ್ನು ಹಾಕೊಳ್ಲೇ ಬೇಕು. ನಾನು ನಿನ್ ಗಿಂತ ಸಣ್ಣೋಳಿದ್ದಾಗ್ಲೇ ಹಾಕ್ತಿದ್ದೆ. ಇದು ನಂ ಧರ್ಮದ ಸಂಪ್ರದಾಯ" ಎಂದರೂ ಬಾನು ಅವಳಾವ ಮಾತಿಗೂ ಕಿವಿಕೊಡದಂತೆ ರೋಧಿಸುತ್ತಲೇ " ಬರೀ ಬಟ್ಟೆ ನಮ್ಮ ಜೀವನಾನೇ ರಕ್ಷಿಸುತ್ತಾ..? ಇದಾವುದೂ ಇಲ್ದೆ ಇರೋ ನನ್ನ ಗೆಳತಿಯರಿಲ್ವಾ..? ಅವರದೂ ಜೀವ ಅಲ್ವಾ..? ಎಂದೆಲ್ಲಾ ಪ್ರಶ್ನಿಸಿದಳು. ಮಗಳ ಪ್ರಶ್ನೆಗಳಿಗೆ ಉತ್ತರ ಕಾಣದ ಬೇಗಂ ಒದ್ದೆ ಕಣ್ಣುಗಳಿಂದಲೇ ಒಳ ಹೋದರು. ಅಲ್ಲೇ ಕುಸಿದು ಕುಳಿತ ಬಾನು ಅಗಿನ್ನೂ ಕಾಲಡಿಯೇ ಬಿದ್ದಿದ್ದ ಬುರುಕಾವನ್ನು ಬೀಸಿ ಎಸೆದು, ತನ್ನ ಮೊಣಕಾಲುಗಳೆರಡನ್ನೂ ಕೈಗಳಿಂದ ಬಂಧಿಸಿ, ನಡುವೆ ತಲೆ ಹುದುಗಿಸಿ ಮುಸಿ-ಮುಸಿ ಅಳುತ್ತಾ ಕುಳಿತಳು. ಕುಳಿತ ಬಾನೂಳ ತಲೆಯಲ್ಲಿ ಸಾವಿರಗಟ್ಟಲೆ ಯೋಚನೆಗಳು ಹರಿದಾಡಿದವು. ನಡು ನಡುವೆ ಎರಡು ಬಾರಿ ಮಗಳನ್ನು ಸಮಾಧಾನಿಸಲು ಬಂದ ಬೇಗಂ ಅದು ಸಾಧ್ಯವಾಗದೇ ಕೈಚೆಲ್ಲಿ ಗುರುವಾರದ ಸಂತೆಗೆಂದು ಸಾಗರಕ್ಕೆ ಹೋದರು.
ಮಧ್ಯಾಹ್ನ ಊಟಕ್ಕೆ ಬಂದ ಹಮೀದ ಹೆಂಡತಿಯಿಂದ ಮನೆಯ ಪರಿಸ್ಥಿತಿಯನ್ನರಿತ ನಂತರ " ಇನ್ಮೇಲೆ ಬುರುಖಾ ಹಾಕದೆ ಹೊಸಲು ದಾಟಬಾರದು" ಎಂದಿದ್ದು, ಬಾನೂಳ ಕಿವಿಗೂ ಕೇಳಿ ಅನುರಣನಗೊಳ್ಳತೊಡಗಿತು. 'ಇನ್ನು ಮುಂದೆ ಪ್ರತಿದಿನವೂ ನನಗೆ ಭಾನುವಾರವೇ' ಎಂದು ಮನದಲ್ಲೇ ದುಃಖಿಸುತ್ತಾ ಬಾನು ಕುಳಿತಿದ್ದಾಗಲೇ ಅವಳಿಗೇ ಅರಿವಿಲ್ಲದೆ ಅಲ್ಲೇ ಮಂಪರು ಹತ್ತಿ ನಿದ್ದೆ ಬಂದು ಬಿಟ್ಟಿತ್ತು.! ಎಚ್ಚರವಾದಾಗ ಸಂಜೆಯಾಗಿತ್ತು. ಒಮ್ಮೆಗೇ ಕಣ್ಣು ಬಿಟ್ಟಾಗ ಎದುರಿಗೆ ತಾನೇ ಎಸೆದಿದ್ದ ಬುರುಕಾದ ಅಡಿಯಲ್ಲಿ ಇಲಿ ಕಡಿದು ಹಾಳು ಮಾಡಿದ್ದ ತನ್ನ ಆ ಕೆಂಪು ಚೂಡಿ ಸಿಕ್ಕಾಕಿಕೊಂಡಿರುವುದು ಮಸುಕು ಮಸುಕಾಗಿ ಕಾಣುತ್ತಿತ್ತು. ತನ್ನ ಆಸೆ, ಆಕಾಂಕ್ಷೆ, ಭಾವನೆಗಳ ರೂಪದಲ್ಲಿ ಚೂಡಿ ಬಿದ್ದಿದೆಯೇನೋ ಅನ್ನಿಸಿ ಕಿಟಕಿ ಸಂದಿಯಿಂದ ಹೊರಗೆ ನೋಡಿದರೆ ಬಾನಂಚಿನಲ್ಲಿ ಮೋಡದ ಮುಸುಕಿನಿಂದ ಮುಚ್ಚಲ್ಪಟ್ಟ ಸೂರ್ಯ ಮಸುಕು ಮಸುಕಾಗಿ ಕಾಣುತ್ತಿದ್ದ..!!

09 November 2009

ಕಳ್ಳ ಮನಸ್ಸು...!

ಸೋಮಾರಿ ತನವೆಂಬುದು ಹೆಗಲೇರಿ ಕುಳಿತುಬಿಟ್ಟಿತೆಂದರೆ ಮನಸ್ಸು ಕಳ್ಳ ಬೀಳಲಾರಂಭಿಸುತ್ತದೆ. ತಪ್ಪಿಸಿಕೊಳ್ಳಲೆತ್ನಿಸುವ ಮನಸ್ಸಿಗೆ ಸಿಗುವ ಕಳ್ಳದಾರಿಗಳೇ ಅನೇಕ. ಅದರಲ್ಲೂ ಈ ಬರೆಯುವ ವಿಚಾರದಲ್ಲಂತೂ ತಪ್ಪಿಸಿಕೊಳ್ಳಲು ಮನಸ್ಸು ಹುಡುಕುವ ನೆವಗಳು ಅಷ್ಟಿಷ್ಟಲ್ಲ. ಮೊದಮೊದಲು ನೆಲದ ಮೇಲೆ ಕುಳಿತು ಮೊಣಕೈಮಂಡಿಯೂರಿ ಕುಳಿತು ಬರೆಯತೊಡಗಿದಾಗ 'ಛೇ ಒಂದು ಟೇಬಲ್ಲು ಅಂತ ಇದ್ರೆ ಇನ್ನೂ ಹೆಚ್ಚಾಗಿ, ಬಹಳ ಹೊತ್ತು ಬರೆಯಬಹುದು' ಅನಿಸುತ್ತದೆ. ಅದೂ ಆಯ್ತು ಟೇಬಲ್ಲೂ ಬಂತು ಹೊಂದಿಕೆಯಾಗುವ ಕುರ್ಚಿಯೂ ಅಣಿಯಾಗುತ್ತೆ. ಆದರೆ ಮನಸು ಬರವಣಿಗೆಯಲ್ಲಿ ತೊಡಗಿತಾ ಹುಹುಂ ಹೀಗೆ ಕೈಯಲ್ಲಿ ಬರೆದು ಮತ್ತೆ ಕಂಪ್ಯೂಟರ್ ನಲ್ಲಿ ಟೈಪಿಸುವುದಕ್ಕಿಂತ ನೇರವಾಗಿ ಕಂಪ್ಯೂಟರ್ ಎದುರಿಗೇ ಕುಳಿತು ಯೋಚನೆಗಳನ್ನೆಲ್ಲಾ ಹಾಗೇ ಹಸಿಹಸಿಯಾಗಿ ಅಚ್ಚಿಸಬಹುದಲ್ಲಾ ಅಂತ ಯೋಚಿಸುತ್ತದೆ. ಇನ್ನು ಎಲ್ಲವೂ ಸರಿಯಾಗಿವೆ ಎಂದಿಟ್ಟುಕೊಂಡರೆ 'ಛೇ ಇವತ್ತು ಬೇಡ ಭಾನುವಾರ ಇಡೀ ದಿನ ರಜೆ ಇದೆಯಲ್ವಾ, ಅವತ್ತು ಬರೆಯೋಣ' ಎಂದು ಜಾರಿಕೊಳ್ಳುತ್ತದೆ. ಹೋಗಲಿ ಆ ಭಾನುವಾರವಾದರೂ ಬರೆಯಲು ತೊಡಗೀತಾ ಅಂದುಕೊಂಡರೆ 'ವಾರದಿಂದ ಬಾಕಿ ಉಳಿದ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು, ಒಂದು ಚಿಕ್ಕ ನಿದ್ರೆ ಮಾಡಿ ಕೂತು ಬಿಡೋಣ' ಎಂದು ತಪ್ಪಿಸಿಕೊಳ್ಳುತ್ತೆ. ಅಷ್ಟರಲ್ಲಿ ಸಂಜೆ ಆಗುತ್ತೆ, ನಾಳೆಯ ಕೆಲಸಕಾರ್ಯಗಳು ನೆನಪಾಗಿ ಮನಸ್ಸು ಆ ಕಡೆ ಹೊರಳುತ್ತೆ. ಹೀಗೆ ಮನಸ್ಸು ಇಲ್ಲದ್ದನ್ನು ಹುಡುಕುತ್ತಾ, ದಿನಗಳನ್ನು ಕಳೆಯುತ್ತಾ ವ್ಯಕ್ತಿತ್ವವನ್ನೇ ನಿಷ್ಪ್ರಯೋಜಕ ಗೊಳಿಸುತ್ತದೆ. ಇನ್ನು ಹಬ್ಬ-ಹರಿದಿನಗಳು ಬಂದರಂತೂ ಮುಗಿಯಿತು. ಊರಿಗೋಗಿ ಹಬ್ಬದ ಸಡಗರ ಮುಗಿಸಿ ಬರುವವರೆಗೂ ಮನಸ್ಸು ಒಂದಕ್ಷರ ಬರೆಯಲೂ ಮುಂದಾಗುವುದಿಲ್ಲ. ಹೀಗಾಗಿ ಒಮ್ಮೆ ಮನಸ್ಸಿಗೆ ಹೊಳೆದ ಒಂದು ವಿಚಾರ ಎಷ್ಟೋ ದಿನಗಳ ನಂತರ ಕೃತಿರೂಪಕ್ಕೆ ಇಳಿಯುತ್ತದೆ. ಇನ್ನೂ ಕೆಲವು ಮನಸಿನಲ್ಲೇ ಸತ್ತು ಮಲಗುತ್ತವೆ.

ನನಗೂ ಹೀಗೇ ಆಯ್ತು
ಇತ್ತೀಚೆಗೆ ಯಥೇಚ್ಚವಾಗಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಉತ್ತರ ಕರ್ನಾಕದ ಬಹುಪಾಲು ಹಳ್ಳಿಗಳು ನೆರೆಯಲ್ಲಿ ಕೊಚ್ಚಿಹೋಗಿ ಹಳ್ಳಿಗೆ ಹಳ್ಳಿಗಳೇ ನಾಶವಾಗಿ ಹೋದಾಗ, ಇಡೀ ಕರ್ನಾಕದ ಜನತೆಯೇ ಅತೀವ ಮಾನವೀಯತೆಯಿಂದ ನೆರೆಯ ಸಂತ್ರಸ್ತರ ನೆರವಿಗೆ ನಿಂತಾಗ. ಬ್ಲಾಗ್ ನಲ್ಲಿ ಹಾಕಲು ಒಂದು ಲೇಖನ ಬರೆಯಬೇಕೆಂದು ಕೊಂಡೆ ಅರ್ಧಂಬರ್ಧ ಬರೆದಿಟ್ಟೆ ಕೂಡಾ. ಅಷ್ಟರಲ್ಲಿ ದೀಪಾವಳಿ ಬಂತು ಊರಿಗೆ ಹೋಗುವ ಸಡಗರ. ಊರಿಂದ ಬಂದು ಪ್ರಕಟಿಸೋಣ ಅಂತಿದ್ದೆ. ಅಷ್ಟರಲ್ಲಿ ನೆರೆ ಇಳಿದಿತ್ತು. ನನ್ನ ಲೇಖನ ಅದರ ಅರ್ಥವನ್ನೂ ಕಳೆದುಕೊಂಡಿತ್ತು.
ತಿಂಗಳು ಕಳೆಯುತ್ತಾ ಬಂದರೂ ಬ್ಲಾಗ್ ಅಪ್ ಡೇಟ್ ಮಾಡದೇ ತಪ್ಪಿಸಿಕೊಳ್ಳುತ್ತಿರುವ ಬಗ್ಗೆ. ಕಾರಣ ಹೇಳಲಿಕ್ಕಾಗದೇ ಇಷ್ಟೆಲ್ಲಾ ಬರೆಯ ಬೇಕಾಯಿತು.

ಪರ್ಶು..,