ವಕ್ರವೃಕ್ಷ

ಗಂಧದ ಮರ ಡೊಂಕಾದರೆ ಗಂಧಕ್ಕೆ ಕೊರತೆಯೇ..?

03 December 2014

ಮರಳಿ ಬ್ಲಾಗಿಗೆ...

ಪ್ರಿಯ ಸ್ನೇಹಿತರೇ...

 ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು.
ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದೇಶ ಇಟ್ಟುಕೊಂಡು ಈ ಬ್ಲಾಗ್ ತೆರೆದಿದ್ದೆ. ಆದರೆ ಇದುವರೆಗೂ ಆ ಉದ್ದೇಶದ ಒಂದಂಶವನ್ನೂ ಮುಟ್ಟಲೂ ಸಹ ಆಗಲಿಲ್ಲ. ಕಾರಣ ಕೆಲಸ, ಬ್ಯುಸಿ, ಅದೂ ಇದು ಅನ್ನೋದು ಖಂಡಿತಾ ಸುಳ್ಳು. ಪ್ರಾರಂಭದಲ್ಲಿ ಇದ್ದ ಆಸಕ್ತಿಯನ್ನು ಕೊನೆಯವರೆಗೂ ಉಳಿಸಿಕೊಳ್ಳುವಲ್ಲಿ ವಿಫಲನಾದೆ ಎಂಬುದಂತೂ ಸತ್ಯ. ಅದಿರಲಿ Past is Past. ನನ್ನ ಅಂದಿನ ಕಲ್ಪನೆಗಳನ್ನೇ ಮುಂದಿನ ದಿನಗಳಲ್ಲಿ ಸಾಕಾರ ಪಡಿಸಿಕೊಳ್ಳಲೋಸ್ಕರ ಮತ್ತೆ ಇಂದಿನಿಂದ ಬ್ಲಾಗಿಗೆ ಮರಳುತಿದ್ದೇನೆ.

 ನನ್ನಂತಹ ಹಲವು ಗೆಳೆಯರನ್ನು  ನೇರವಾಗಿ ಸಂಪರ್ಕಿಸಿ, ಸಂದರ್ಶಿಸಿ ಅವರ ಬದುಕಿನ ಚಿತ್ರಗಳನ್ನು ಚಿಕ್ಕದಾಗಿ, ಚೊಕ್ಕದಾಗಿ ಬೆನ್ನುಡಿಯ ರೂಪದಲ್ಲಿ ಬರೆದು ನನ್ನ ಈ ಬ್ಲಾಗಿನಲ್ಲಿ ಪ್ರಕಟಿಸಬೇಕೆಂಬ ಇರಾದೆ ಹೊಂದಿದ್ದೇನೆ. ಪ್ರತಿಯೊಬ್ಬರ ಜೀವನವೂ ಒಂದು ಮಹತ್ತರ ಹೊತ್ತಿಗೆಯಿದ್ದಂತೆ ಮೇಲ್ನೋಟಕ್ಕೆ ಮುಖಪುಟವನ್ನು ನೋಡಬಹುದೇ ವಿನಃ ಆಂತರ್ಯದ ಅಂತಸತ್ವಗಳನ್ನು ಅರಿಯಲು ಸಾಧ್ಯವಾಗಲಾರದು. ಪ್ರತಿಯೊಬ್ಬರ ಜೀವನದ ಮಜಲುಗಳೂ ಭಿನ್ನ ಭಿನ್ನ. ಅದರಲ್ಲೂ ಸಾಮಾನ್ಯ ಮನುಷ್ಯನಿಗಿಂತಲೂ ಕಣ್ಣಿಗೆ ಕಾಣುವ ವಿಕಲತೆಗಳನ್ನು ಹೊತ್ತು ಜನಿಸಿದ ಅಥವಾ ಜನಿಸಿದ ನಂತರ ಅಂಗವಿಕಲನಾಗಿ ಬೆಳೆದ ಮನುಷ್ಯನ ಬದುಕಿನ ಚಿತ್ರಗಳು ವಿಭಿನ್ನವಾಗಿರುತ್ತವೆ. ತಮ್ಮದಲ್ಲದ ತಪ್ಪಿಗೆ ವಿಕಲತೆಯನ್ನು ಧರಿಸಿ ಸಮಾಜದ ನಿಂದನೆ, ತಿರಸ್ಕಾರ, ಅವಹೇಳನ, ಅವಕೃಪೆಗೆ ಒಳಪಟ್ಟರೂ ಯಾವುದನ್ನೂ ಲೆಕ್ಕಿಸದೆ ಬದುಕಲೇ ಬೇಕೆಂಬ ಛಲಹೊತ್ತು ಬದುಕುವ ಹಲವಾರು ಸ್ನೇಹಿತರು ನಮ್ಮ ನಡುವಿದ್ದಾರೆ. ಇಂತಹವರ ಬದುಕಿನ ಬಗೆಗಿನ ಬರಹಗಳನ್ನು ಮುಂದಿನ ದಿನಗಳಲ್ಲಿ ಈ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದಿದ್ದೇನೆ. ವಾರಕ್ಕೊಬ್ಬರಂತೆ ವರ್ಷಕ್ಕೆ ಕನಿಷ್ಠ 50 ಮಂದಿಯನ್ನಾದರೂ ಸಂದರ್ಶಿಸಿ ಅವರ ಬದುಕಿನ ಬವಣೆಗಳನ್ನು ಅರಿಯುವ ಮಹದಾಸೆ ನನ್ನದು. ಈ  ಕೆಲಸವನ್ನು ನನ್ನ ಕಾರ್ಯಕ್ಷೇತ್ರದಿಂದಲೇ ಪ್ರಾರಂಭಿಸಲು ಬಯಸಿದ್ದೇನೆ. ಜೀವನೋತ್ಸಾಹವನ್ನು ಕಳೆದುಕೊಂಡವರಿಗೆ ಇಂತಹವರ ಜೀವನವು ಸ್ಪೂರ್ತಿಯಾಗಲೆಂದು ಕೇವಲ ಬ್ಲಾಗ್ ನಲ್ಲಿ ಅಷ್ಟೇ ಅಲ್ಲದೇ ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣದಲ್ಲೂ ನನ್ನ  ಬರಹಗಳನ್ನು ಪ್ರಕಟಿಸುವ ಉದ್ದೇಶದಿಂದ 'ವಕ್ರವೃಕ್ಷ' ಎಂಬ ಫೇಸ್ ಬುಕ್ ಪುಟವನ್ನೂ ತೆರೆದಿದ್ದೇನೆ.

ಶರೀರದ ನ್ಯೂನತೆಗಳು ಬದುಕಿನ ನ್ಯೂನತೆಗಳಾಗಿರಬೇಕೆಂಬ ನಿಯಮವೆನೂ ಇಲ್ಲವಲ್ಲ. ಹಾಗಾಗಿ ನ್ಯೂನತೆಗಳನ್ನು ಮೆಟ್ಟಿನಿಂತವರ ಬದುಕನ್ನು ಅರಿಯುವ ಪ್ರಯತ್ನಕ್ಕೆ ಹೊರಟಿದ್ದೇನೆ. ಇದಕ್ಕೆ ನಿಮ್ಮ ಸಹಕಾರವೂ ಇರಲಿ.

ಮತ್ತೊಮ್ಮೆ ಎಲ್ಲರಿಗೂ ವಿಶ‍್ವ ಅಂಗವಿಕಲರ ದಿನಾಚರಣೆಯ ಶುಭಾಶಯಗಳು.



-ರೇಣುಕಾತನಯ

12 December 2012


ಕಾಪಿ-ಪೇಸ್ಟ್




ಮೊನ್ನೆ ಶನಿವಾರ ಬೆಂಗ್ಳೂರಲ್ಲಿ ಮಳೆ ಬಿದ್ದ ಮುಂಜಾನೆ ಗಂಟೆ ಹತ್ತಾಗಿದ್ರೂ ಹೊರಗೆ ಮಬ್ಬು ಸರಿದಿರಲಿಲ್ಲ. ಮುಸುಕಿದ ಮೋಡದ ಬೆಸುಗೆಗೆ ಅಂಜಿದವನಂತೆ ರವಿವರ್ಯ ತನ್ನ ಕಿರಣಗಳನ್ನು ಧರೆಯೆಡೆಗೆ ಕಳುಹಿಸಲು ಹರಸಾಹಸ ಪಡುತ್ತಿದ್ದ. ಶ್ವೆಟರ್ ಒಳಗೆ ಮೈತೂರಿಸಿ, ಬಿಸಿ ಚಹಾಕ್ಕೆ ತುಟಿ ಆನಿಸಿ, ಶೆಟ್ಟರ್ ಭಾಷಣ ಕೇಳಿ, ಸ್ಪೋಟಕ ಸುದ್ಧಿಯೇನಾದರೂ ಬರಬಹುದೇನೋ ಎಂಬ ಕುತೂಹಲದಿಂದ ಗರಹಿಡಿದವರಂತೆ ಅರಚುವ ಸುದ್ದಿವಾಹಿನಿಗಳೊಂದೊಂದನ್ನೇ ಬದಲಿಸಿ ಬದಲಿಸಿ ನೋಡುತ್ತಿದ್ದ ನಾನು ಅದ್ಯಾವ ಮಾಯೆಯಿಂದಲೋ ಬಂದ ಸೂರ್ಯ ರಶ್ಮಿಯೊಂದು ಮೈತಾಕಿದಂತಾಗಿ ರೋಮಾಂಚನಗೊಂಡು ಹೊರ ನೋಡಿದೆ. ಮೋಡಗಳ ಬೆಸುಗೆಯನ್ನೇ ಇನಿತಿನಿತು ಕರಗಿಸಿ ಕರಗಿಸಿ ದಿನಕರನು ಮಬ್ಬಿನ ಮುಸುಕನ್ನು ಸರಿಸುತ್ತಲಿದ್ದ. ಇಂತಹ ಸವಿಸಮಯದಲ್ಲಿ ಹೊರಗೆ ಸುತ್ತಾಡುವ ಮನಸಾಗಿ ಚಪ್ಪಲಿ ಮೆಟ್ಟಿ ಬೀದಿಗಿಳಿದೆ.
ಬೀದಿಗಿಳಿದು ತುಸು ದೂರ ನಡೆಯುವಷ್ಟರಲ್ಲಿ  ಗೆಳೆಯ ಮಾದೇಸನ ನೆನಪಾಯಿತು. ಬೀದಿಯ ಕೊನೆಗಿದ್ದ ಅವನ ಮನೆಯೆಡೆಗೆ ದೂರದಿಂದಲೇ ದೃಷ್ಠಿ ಬೀರಿದೆ. ಅವನ ಮನೆಯೆದುರು ಮೋಡಗಳ ಮರೆಯಿಂದ ಇಣುಕಿ ಇಣುಕಿ ಮರೆಯಾಗುತ್ತಿದ್ದ ಬಿಸಿಲಿನ ಝಳಕ್ಕೆ ಮೈಯೊಡ್ಡಿ,  ಚಪ್ಪಡಿ ಕಲ್ಲಿನ ಮೇಲೆ ಕುಳಿತ ಆಕೃತಿಯೊಂದು ದೂರದಿಂದಲೇ ಅಸ್ಪಷ್ಟವಾಗಿ ಕಾಣಿಸಿತು. ಅವನು ಮಾದೇಸನೇ ಇರಬೇಕೆಂದು ಬಗೆದೆನಾದರೂ ಮಾದೇಸನೋ ಅಥವಾ ಅವನ ತಮ್ಮ ಸೀಲಿಂಗನೋ ಎಂಬ ಸಣ್ಣ ಕನ್ಪ್ಯೂಸನ್ನು ಮನಸ್ಸಿನಲ್ಲಿ  ಶುರುವಾಯಿತು.
ಸೀಲಿಂಗ ಮಾದೇಸನ ಚಿಕ್ಕಪ್ಪನ ಮಗ. ಹುಟ್ಟಿದಾಗ ಅವನಿಗಿಟ್ಟ ಹೆಸರು 'ಶ್ರೀಲಿಂಗ' ಅಂತ. ಅದು ಅವರಜ್ಜಿಯ ಬಾಯಲ್ಲಿ ಸೀಲಿಂಗ ಆಗಿ ಎಲ್ಲರೂ ಹಾಗೇ ಕರೆಯೋದೇ ರೂಢಿ ಆಗಿತ್ತು. ಅದಕ್ಕೆ ಶ್ರೀಲಿಂಗನದೇನೂ ಆಕ್ಷೇಪವಿರಲಿಲ್ಲ ಆದರೆ  ಕೆಲವರು 'ಸ್ತ್ರೀಲಿಂಗ' ಎಂದು ಕರೆದು ರೇಗಿಸಿದಾಗ ಅವನ ಕೋಪ ನೆತ್ತಿಗೇರುತ್ತಿತ್ತು. ತನ್ನೆಸರಿನ ಬಗ್ಗೆ  ಅವನಿಗೇ ಜಿಗುಪ್ಸೆ ಮೂಡುತ್ತಿತ್ತು. ಇಂತಹ ಸೀಲಿಂಗನಿಗೆ ನಿನ್ನೆ ತಾನೇ ನಾನು " ಸೀಲಿಂಗು ಸ್ವಲ್ಪ ಕೆಲ್ಸ ಐತೆ, ನಾಳೆ ಮನೆ ಹತ್ರ ಬಾರೋ" ಅಂದದ್ದಕ್ಕೆ " ಇಲ್ಲಣ್ಣೋ ನಾಳೆ ನಂಗೆ ಹಿಸ್ಟ್ರಿ ಎಕ್ಸಾಂ ಐತಿ, ಓದ್ಕೋಬೇಕೂ, ಎಕ್ಸಾಂ ಮುಗುದ್ ಮೇಲೆ ಬತ್ತೀನಿ ಬೇಕಾರೆ" ಎಂದು ಬರಲಾಗದಿದ್ದಕ್ಕೆ ಕಾರಣ ಹೇಳಿದ್ದ. ಇದೆಲ್ಲಾ ನೆನಪಾಗಿ ಕಲ್ಲು ಚಪ್ಪಡಿಯ ಮೇಲೆ ಕುಳಿತಿದ್ದ ಆಕೃತಿ ಸೀಲಿಂಗನದಲ್ಲ ಮಾದೇಸನದೇ ಅಂತ ಡಿಸೈಡು ಮಾಡಿ ಹತ್ರತ್ರ ಹೋಗಿ ನೋಡ್ತೀನಿ, ಅವನು ಮಾದೇಸನಲ್ಲ.  ಸೀಲಿಂಗ! ಕಯ್ಯಲ್ಲೊಂದು ಮೋಟುದ್ದ ಕಡ್ಡಿ ಹಿಡಿದು, ನೆಲ ಕೆದರ್ತಾ ಕುಂತಿದ್ದ.! 'ಎಲಾ ಇವ್ನಾ..?, ನಿನ್ನೆ ನನಗೇ ಸುಳ್ಳು ಹೇಳಿ ಟಾಂಗ್ ಕೊಟ್ನಲ್ಲ.! ಅಂತ ಮನಸ್ಸಲ್ಲೇ ಎಣಿಸಿ ಹತ್ತಿರ ಹೋದವನೇ " ಏನ್ಲಾ ಬಡ್ಡೆತ್ತದ್ದೇ, ಹಿಸ್ಟ್ರಿ ಎಕ್ಸಾಂ ಐತಿ ಅಂತ ಸುಳ್ಳು ಬೊಗಳಿ, ಇಲ್ಲಿ ಕುಕ್ಕರಿಸಿಕೊಂಡಿದೀಯಾ? ಅಂತ ಥೇಟು ಸಿನಿಮಾ ಆ್ಯಕ್ಟ್ರು ದೊಡ್ಡಣ್ಣನ ಸ್ಟೈಲಲ್ಲಿ ದಬಾಯಿಸತೊಡಗಿದೆ. ಎಷ್ಟು ಬೈದ್ರೂ, ಏನಂದ್ರೂ ಮಾತೇ ಇಲ್ಲ! ಕೆಳಗಿಳಿಸಿದ ಮುಖ ಮೇಲೆತ್ತದೆ, ನೆಲದ ಮೇಲೆ ಚಿತ್ತಾರ ಬರಿತಾನೇ ಇದ್ದ. ಯಾಕೋ ಉಸಾರಿಲ್ಲಿರಬೇಕು ಅಂದ್ಕೊಂಡು "ಯಾಕ್ಲಾ ಉಸಾರಿಲ್ವೇನ್ಲಾ?" ಎನ್ನುತ್ತ ಅವನೆದುರು ಹೋಗಿ ಕುಂತು ಅವನ ಗಲ್ಲಕ್ಕೆ ಕೈ ಹಾಕಿ ಮುಖ ಮೇಲೆತ್ತಿದೆ. ಕಣ್ಣು ಕೆಂಪಾಗಿತ್ತು!, ಮುಖ ಕಪ್ಪಾಗಿತ್ತು!. ನನ್ನ ಕೈ ಸ್ಪರ್ಷವಾದೊಡನೆ "ನಾನೇನೂ ಸುಳ್ಳು ಹೇಳುಲ್ಲ" ಎಂದು ಕೈ ಕೊಡವಿ ಎದ್ದು ನಿಂತ.
ಮತ್ಯಾಕೆ ಎಕ್ಸಾಂಗೆ ಹೋಗಿಲ್ಲ?
ಹೋಗಿದ್ದೆ...ಎಂದು ಕ್ಷೀಣ ಧ್ವನಿಯಲ್ಲೇ ಉಸುರಿದ.
ಅವನ ಸುಳ್ಳನ್ನು ನಂಬಲಾರದವನಾಗಿದ್ದ ನಾನು "ಅಯ್ಯೋ ತಮ್ಮಾ.. ನನ್ನತ್ರ ಡ್ರಾಮಾ ಮಾಡ್ಬೇಡ. ಅದ್ಯಾವಾಗ ಹೋಗಿದ್ದೆ? ನೂರು ಮಾರ್ಕ್ಸಿಗೆ ಬರ್ದು ಮುಗ್ಸಿ ಇಷ್ಟು ಬೇಗ ಬಂದ್ಬಿಟ್ಯಾ ನೋಡು ಟೈಮೆಸ್ಟು? ಎನ್ನುತ್ತಾ ನನ್ನ ತುಂಬ ತೋಳಿನ ಸ್ವೆಟರ್ ಒಳಗೆ ಹುದುಗಿದ್ದ ಕೈ ಗಡಿಯಾರವನ್ನು ಅವನ ಮುಖದೆದುರು ಹಿಡಿದೆ.
ಹನ್ನೊಂದು ಗಂಟೆ... ಎಂದ.
ಹ್ಞೂಂ ನಂಗೊತ್ತು, ಇಷ್ಟು ಬೇಗ, ಅದೂ ಹಿಸ್ಟ್ರಿ ಎಕ್ಸಾಂ ಬರೆದು ಬರುವಂತಹ ಅಸಾಮಿ ನೀನಲ್ಲ. ಹ್ಞೂಂ ಏನಾಯ್ತೇಳು? ಎಂದು ಅವನ ಬಗ್ಗೆ ಅವನಿಗಿಂತಲೂ ಹೆಚ್ಚಿಗೆ ಅರಿತಿರುವವನಂತೆ ಪ್ರಶ್ನಿಸಿದೆ. 
ಕ್ಷಣ ಹೊತ್ತು ಮಾತನಾಡಲಿಲ್ಲ, ಕೊನೆಗೊಮ್ಮೆ ಕ್ಷೀಣ ಸ್ವರದಲ್ಲಿ "ಸ್ಕ್ವಾಡ್ ಬಂದು ಡಿಬಾರ್ ಮಾಡಿದ್ರು" ಎಂದ. ಅವನ ಮಾತಿನಲ್ಲಿ ಅವಮಾನದ ಚುಳುಕಿತ್ತು. ಕೋಪದ ನಂಜಿತ್ತು.
"ಅಯ್ಯೋ... ನಿನಗೇನು ಬಂದಿತ್ತೋ ದೊಡ್ಡ ರೋಗ? ಅದೇನು ಕಾಪಿ ಹೊಡಿದೆ ? ಎಂದು ಸ್ವಲ್ಪ ಬಿರುಸಾಗಿಯೇ ಕೇಳಿದೆ. ಈ ಕಾಪಿ ಹೊಡಿಯೋದು, ಹೊಡೆದೊರನ್ನು ಸಮರ್ಥಿಸೋದು ನನಗೆ ಹಿಡಿಸದು. ಆದರೂ ಏನ್ ಮಾಡೋದು, ಕಂಪ್ಯೂಟರ್ ಎಂಬ ಮಾಯಾಂಗನೆಯಿಂದ ಕೆಲಸ ತೆಗೆಸಿಕೊಳ್ಳುವಾಗ ಶಾರ್ಟ್ ಕಟ್ ನಲ್ಲಿ  'ಕಾಪಿ-ಪೇಸ್ಟ್' ಮಾಡದೆ ಇರೋದು ಸಾಧ್ಯವಿಲ್ಲ. ನಾನು ಎರಡೆರಡು ಬಾರಿ "ಸೀಲಿಂಗ, ಅದ್ಹೇಂಗೆ ಕಾಪಿ ಹೊಡ್ದು, ಸಿಕ್ಕು ಬಿದ್ದೆ  ಹೇಳು" ಎಂದು ದಬಾಯಿಸಿದಾಗ, "ಏನೂ ಇಲ್ಲ ನೋಡಣ್ಣೋ, ಎಂದು ತನ್ನ ಎಡಗೈ ಹಸ್ತವನ್ನು ಮುಂದು ಮಾಡಿದ. ನೋಡಿದೆ, ಅದರಲ್ಲಿ ಹೈದರಾಲಿ ಸತ್ತಿದ್ದು, ಟಿಪ್ಪು ಹುಟ್ಟಿದ್ದು, ಕೃಷ್ಣದೇವರಾಯ ಆಳಿದ್ದು, ಹೀಗೆ ಏನೇನೋ ಹತ್ತಾರು ಇಸ್ವಿಗಳ ಚಿಕ್ಕ ಚಿಕ್ಕ ಅಕ್ಷರಗಳಿದ್ವು. "ಇದಿಷ್ಟಕ್ಕೇ ಬಡ್ಡಿಮಕ್ಳು ಈ ಹಾಳು ಇಸ್ಟ್ರೀನ ಇನ್ನೂ ಒಂದು ವರ್ಸ ಓದೋ ಹಂಗೆ ಮಾಡಿದ್ರು" ಅಂತ ಏನೇನೋ ಬಯ್ಯಲಾರಂಬಿಸಿದ. ಇಷ್ಟು ಹೊತ್ತು ಸುಪ್ತವಾಗಿದ್ದ ಅವನ ಅಸಹನೆ ನನ್ನೆದುರು ಅನಾವರಣಗೊಳ್ಳತೊಡಗಿತು. ಅವನ ಬಯ್ಗುಳಗಳ ಸ್ಪೀಡಿಗೆ ಬ್ರೇಕು ಹಾಕುವಂತೆ ನಾನು "ನೋಡು, ಕಡ್ಡಿಯಲ್ಲಿ ತಿಂದ್ರೂ ಕಕ್ಕಾನೇ, ಕೈಯಲ್ಲಿ ತಿಂದ್ರೂ ಕಕ್ಕಾನೇ, ಯಾಕ್ ಮಾಡ್ಬೇಕಾಗಿತ್ತು ಇಂತ ಹಲ್ಕಾ ಕೆಲ್ಸ ಎಂದೆ.
ಮಾತನಾಡಲಿಲ್ಲ.....
"ನಿಮ್ ಮುಸುಡಿಗೆ ಬೆಂಕಿ ಹಾಕಾ.. ಓದೋ ಟೈಮಲ್ಲಿ ಓದೋಲ್ಲ, ಕಾಲೇಜ್ ಟೇಮಲ್ಲಿ ಕಾಲೇಜಿಗೋಗೊಲ್ಲ, ಕಿವಿಗೊಟ್ಟು ಪಾಠ ಕೇಳೋದಂತೂ ನಿಮ್ ಹಣೇಬರದಲ್ಲೇ ಇಲ್ಲ. ಯಾವುದಾದ್ರೂ ಒಂದು ಹುಡ್ಗಿ ಕಿಸಕ್ ಅಂತ ಹಲ್ಲು ಬಿಟ್ರೆ ಅವಳ ಹಿಂದೆ ಬಸ್ ಸ್ಟ್ಯಾಂಡು, ರೈಲು ಟೇಸನ್ನು ಅಲಿತೀರಿ, ಈಗ ಕಾಪಿ ಹೊಡಿಯೋದಲ್ದೇ ಮತ್ತೇನ್ ಆಗ್ತೈತಿ ನಿಮ್ಮಿಂದ" ಎಂದು ಜೋರು ಜೋರಾಗಿ ದಬಾಯಿಸತೊಡಗಿದೆ.
ಒಂದು ಹದದ ಧೈರ್ಯದಿಂದಲೇ ನನ್ನೆಡೆ ನೋಡುತ್ತಿದ್ದ ಸೀಲಿಂಗ "ಅಣ್ಣಾ... ಸ್ಟಾಪ್, ಸ್ಟಾಪ್, ಸ್ಟಾಪ್ ನಿನ್ ಅನುಭವನೆಲ್ಲಾ ನಂಗೆ ಹೇಳ್ಬೇಡಾ.." ಎನ್ನುತ್ತಾ ನನ್ನ ಜಂಘಾಬಲವನ್ನೇ ಹುದುಗಿಸುವ ಪ್ರಯತ್ನ ಮಾಡಿ, "ಈ ಹಾಳಾದ್ ಹಿಸ್ಟ್ರಿ ನನ್ ತಲಿಗೆ ಹೋಗೋದೇ  ಇಲ್ಲ, ಅದ್ಕೇ.... ಅಂತ ರಾಗ ಎಳೆದ.
"ಅದ್ಕೆ ಕೈಯಲ್ಲಿ ಗೀಚ್ಕೊಂಡು ಹೋಗೋದಾ..? ನಾಚ್ಕೆ ಆಗ್ಬೇಕು ನಿಮಗೆ" ಎಂದು ಅವನ ತಪ್ಪನ್ನು ಅವನಿಗೆ ಅರಿವು ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೆ. "ನಂಗೆ ಯಾಕ್ ನಾಚ್ಕೆ ಆಗ್ಬೇಕು, ಆ ಸ್ಕ್ವಾಡ್ ನನ್ ಮಕ್ಳಿಗೆ ನಾಚ್ಕೆ ಆಗ್ಬೇಕು" ಎನ್ನುತ್ತಾ "ನಿನ್ನೇದು ಪೇಪರ್ ನೋಡಿದ್ಯಾ? ಎಂದ. ದಿನ ಪತ್ರಿಕೆಯನ್ನು  ಇಂಚಿಂಚು ಬಿಡದೆ ಓದುವ ನಾನು "ಹ್ಞೂಂ  ಯಾಕೆ ?" ಎಂದು ದೊಡ್ಡ ಪ್ರಶ್ನಾರ್ಥಕದ ರೂಪದಲ್ಲಿ ಅವನ ಮುಖ ನೋಡಿದೆ. 
"ಅದ್ಯಾವನೋ ಮೈಲಾರಪ್ಪ ಅಂತ ಬೆಂಗ್ಳೂರು ಯೂನಿವರ್ಸಿಟಿಗೇ ರಿಜಿಸ್ಟ್ರರ್ರು ಅಂತೆ. ಅಂತವುನೇ ಕಾಪಿ ಹೊಡುದು ಪಿಹೆಚ್ಡಿ ಪಡ್ದು, ತನ್ನ ಸಿಸ್ಯನಿಗೂ ತನ್ನ ಪ್ರಬಂಧದ್ದೇ ನೂರಿಪ್ಪತ್ತು ಪುಟ ಮಕ್ಕಿ ಕಾ ಮಕ್ಕಿ ಮಾಡ್ಸಿ ಪಿಹೆಚ್ಡಿ  ಕೊಡ್ಸಿದಾನಂತೆ. ಇಂತಹ ದೊಡ್ ದೊಡ್ಡೋರೇ ಕಾಪಿ ಹೊಡ್ದು ದೊಡ್ಡೋರಾಗಿ ಮೆರಿತಿದಾರಂತೆ ಅಂತದ್ರಲ್ಲಿ ಅಂಗೈ ನೋಡಿ ಕಾಪಿ ಹೊಡೆದ ನಾನೇನು ಮಹಾ!?" ಎಂಬಿತ್ಯಾದಿ ದೊಡ್ಡ ದೊಡ್ಡ ವಿಚಾರ ಎತ್ತಿ ಸೀಲಿಂಗು ಬಡಬಡಾಯಿಸತೊಡಗಿದ.
ಸೀಲಿಂಗನ ಮಾತಿಗೋ, ಏರುತ್ತಿರುವ ಬಿಸಿಲಿನ ತಾಪಕ್ಕೋ ಗೊತ್ತಿಲ್ಲ ನನ್ನ ಸ್ವೆಟರ್ ಒಳಗಿನ ಬನಿಯನ್ ಒದ್ದೆಯಾಗುತ್ತಿತ್ತು.



-ರೇಣುಕಾತನಯ

01 January 2011

ಹೊಸ ವರ್ಷದ ಹೊಸ್ತಿಲಲಿ...



ಹತ್ತು ಕಳೆಯಿತು, ಹನ್ನೊಂದು ಬಂದಿತು.

2010ನೇ ಕೋಣೆಯ ಪಯಣವನು ಮುಗಿಸಿ, 2011ನೇ ಕೋಣೆಯ ಹೊಸ್ತಿಲಲಿ ನಿಂತು ಕದವ ತೆರೆದಿದ್ದೇವೆ. ಹೌದು ಹೊಸಮನೆಯ ಹೊಸ್ತಿಲಲ್ಲವಿದು, ಹೊಸ ಕೋಣೆಯ ಹೊಸ್ತಿಲು.! ಕತ್ತಲು, ಬೆಳಕುಗಳ ಮಿಶ್ರಣವೇ ಮೆತ್ತಿರುವ ಕಿರಿದಾದ ಕೋಣೆ.! ಹಿಂದಿನ ಪಯಣದ ಅನುಭವವ ನೆನೆಯುತ, ಮುಂದಿನ ಪಯಣದ ದಾರಿಯನು ಅರಿಯುತ ದಿನದ ಹೆಜ್ಜೆಯನಿಟ್ಟು ಸಾಗಲೇ ಬೇಕು ನಾವು. ಕತ್ತಲೋ, ಬೇಳಕೋ, ಕಷ್ಟವೋ, ಸುಖವೋ ಬಂದುದನನುಭವಿಸಿ ಮುನ್ನಡೆಯಲೇ ಬೇಕು. ಹಿಂತಿರುಗಿ ನಡೆಯುವ, ಮುಂದೋಗದೆ ನಿಲ್ಲುವ ಅರ್ಹತೆಯು ನಮಗಿಲ್ಲ.  ಕಾಲನ ಕೈಯೊಳಗೆ ಪರವಶರು ನಾವು. ಅವನಾಣತಿಯನು ಮೀರಿ ಉಸಿರಾಡುವಂತೆಯೂ ಇಲ್ಲ.! ಪ್ರತಿಕ್ಷಣವನು ವ್ಯರ್ಥಯಿಸಿ  ಸಾವಿನೆಡೆಗೆ ಸಾಗುತ್ತಿರುವೆವು ನಾವು. ನಿಜ, ಆದರೂ ನಮಗೆ ಸಾವೆಂಬುದರ ಭಯ ಕಿಂಚಿತ್ತೂ ಇಲ್ಲ.! ಆಯುಷ್ಯದ ಗಡಿಯ ಗುರುತು ತಿಳಿದಿಲ್ಲ. ತಿಳಿದಿದ್ದರೆ ಮನಸ್ಸು ಚಡಪಡಿಸುತ್ತಿತ್ತೇನೋ ? ಸ್ವಾರ್ಥತೆಯ ಬಿಟ್ಟು ದೇಹ ದುಡಿಯುತ್ತಿತ್ತೇನೋ ?  ಆದರೇನು ಮಾಡುವುದು ಸಾವಿನ ಗಡಿಯ ಗುರುತು ತಿಳಿಯಲು ಸಾವೆಂಬುದೇನು ಸರ್ಕಾರಿ ನೌಕರಿಯೇ ? ಅರವತ್ತಕ್ಕೆ ನಿವೃತ್ತಿಹೊಂದಿ ಮನೆಗೆ ತೆರಳುವಂತಿದೆಯೇ?.!!

ಅಯ್ಯೋ ಹೊಸ ವರ್ಷದ ಹೊಸ್ತಿಲಲಿ ನಿಂತ ನಮಗೆ ಸಾವಿನ ಮಾತೇಕೆಂದುಕೊಳ್ಳುವೆವಾದರೂ  ಕಳೆದುಕೊಂಡಿದ್ದರ ನೆನಪೇ ಅತಿಯಾಗಿ ಕಾಡುತ್ತದೆ.  ಅಗಲಿದ ಆತ್ಮಿಯರು ತುಂಬಲಾಗದ ನಷ್ಟವಾಗುತ್ತಾರೆ. ಕಳೆದ ದಿನಗಳು ಉಳಿಸಿಹೋದ ಕಲೆಯಲ್ಲೆ ಎದ್ದು ಕಾಣುವುದು ಇಂತಹ ನೆನಪೇ ಅಲ್ಲವೇ ?

ಅದೇನೇ ಇರಲಿ,   ಭೂಮಿಗೆ ಬಿದ್ದ ಸೂರ್ಯರಶ್ಮಿ ವ್ಯರ್ಥವಾಗುವುದಿಲ್ಲ. ಗರಿಕೆಗೂ ಜೀವ ಸ್ಪುರಿಸುವಂತೆ ಮಾಡುತ್ತದೆ. ಪ್ರತಿಕ್ಷಣವೂ ಸದ್ದಿಲ್ಲದೆ ಚಲಿಸುತ್ತಲೇ ಇರುತ್ತದೆ. ಈ ಚಲನೆಯೇ ಬದಲಾವಣೆಯನ್ನೂ ತರುತ್ತದೆ. ಇಂದಿನ ಸಂಬಂಧಗಳು ಮುಂದೇನೋ ಆಗುತ್ತವೆ. ಪುನರ್ನವವು ಸಾರ್ಥವಾದಂತೆ, ಸಾರ್ಥವು ಮನನ ವಾದಂತೆ.!

 ಬದಲಾವಣೆಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳೋಣ. ಕಳೆದ ದಿನಗಳ ಸವಿನೆನಪುಗಳನ್ನೇ ನೆನೆನೆನೆದು ಕಹಿ ಗಳಿಗೆಗಳನು ಶಾಶ್ವತವಾಗಿ ಮರೆಯಲೆತ್ನಿಸೋಣ. ಮುಂದಿನ ಜೀವನದ ಪ್ರಜ್ವಲತೆಗೆ ಸವಿಗನಸ ಕಾಣೋಣ. ಕನಸುಗಳ ನೆನಸಿಗೆ ಹಗಲಿರುಳು ಶ್ರಮಿಸೋಣ. ಹೊಸ ವರುಷ ಎಲ್ಲರಿಗೂ ಹೊಸ ಹುರುಪು ಕೊಡಲಿ.  ಹೊಸ ಹರುಷ ತರಲಿ. ಬದುಕಿನಲಿ ನವಚೈತನ್ಯವು ಉಮ್ಮಳಿಸಲಿ..


  " ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು "  

03 November 2010

:: ಜಾತಿ ಮತ್ತು ಹೆಸರು ::


(ದಿನಾಂಕ: 27/10/2010 ರ 'ಸಾರ್ಥ' ದಲ್ಲಿ   ಪ್ರಕಟವಾದ "ಜಾತಿ ಪದ್ದತಿ : ರೇವಪ್ಪನ ಅವಲೋಕನ"ಲೇಖನಕ್ಕೆ ಅನಿಸಿಕೆಯಾಗಿ ಬರೆದ ಬರಹ)

ಜಾತಿ ಯಂತಹ ಸೂಕ್ಷ್ಮ ವಿಚಾರದ ಬಗ್ಗೆ ಮಾತನಾಡುವಾಗ ತುಂಬಾ ಜಾಗರೂಕರಾಗಿರಬೇಕು. ಎಲ್ಲೇ ಸ್ವಲ್ಪ ಎಚ್ಚರ ತಪ್ಪಿದರೂ ಯಾರನ್ನೋ ಉದ್ದೇಶಪೂರ್ವಕವಾಗಿ ಆಡಿಕೊಂಡಂತಾಗಿ ಬಿಡುತ್ತದೆ ಉದ್ದೇಶ ನನಗೆ ಖಂಡಿತಾ ಇಲ್ಲ ಎನ್ನುತ್ತಲೇ ...

ನಮ್ಮ ಹಿಂದೂಧರ್ಮದಲ್ಲಿ ವೃತ್ತಿ ದ್ಯೂತಕವಾಗಿ ರೂಪುಗೊಂಡ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಚತುರ್ವರ್ಣಗಳು ಕಾಲಾನಂತರದಲ್ಲಿ ಜಾತಿ ಗಳಾಗಿ ಮಾರ್ಪಾಟುಗೊಂಡವು ಎನ್ನಲಾಗುತ್ತಿದೆ. ನಾಲ್ಕು ವರ್ಣಗಳಲ್ಲೇ ಕ್ರಮೇಣವಾಗಿ ಒಂದೊಂದರಲ್ಲೇ ಹಲವಾರು ಒಳಪಂಗಡಗಳು, ಉಪಜಾತಿಗಳು ಸೃಷ್ಟಿಯಾದವು. ಒಂದು ವರ್ಣದೊಳಗಿನ ವಿಂಗಡನೆಗೆ, ಜಾತಿ-ಉಪಜಾತಿಗಳ ಸೃಷ್ಠಿಗೆ ಇನ್ನೊಂದು ವರ್ಣ ನೇರವಾಗಿ ಕಾರಣವಾಗಿಲ್ಲದೇ ಇರಬಹುದು ಆದರೆ ಒಂದು ವರ್ಣದ ಜನತೆ ಅದೇ ವರ್ಣದಲ್ಲೇ ಜೀವನ ಸವೆಸಲು ಮತ್ತು ಗಡಿದಾಟಿ ಬಾರದಂತೆ ಕಾಯ್ದುಕೊಳ್ಳಲು ಇನ್ನೊಂದು ವರ್ಣ ಸದಾ ಜಾಗೃತವಾಗಿತ್ತು ಎನ್ನಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಶೂದ್ರನು ಶೂದ್ರನಾಗೇ ಇರಬೇಕೆಂಬುದು ಬ್ರಾಹ್ನಣ ವರ್ಣದ ಅಪೇಕ್ಷೆಯಾಗಿತ್ತು. ಅವರನ್ನು ಹಾಗೇ ಇರಿಸುವಲ್ಲಿ ಅದು ಸದಾ ಜಾಗೃತವಾಗಿತ್ತು.
 
ಈಗ ನೋಡಿ ನಾವು ಯಾವ ಜಾತಿಗೆ ಸೇರಿದವರು ಎಂದು ತಿಳಿಯಲು ನಮ್ಮ ಜಾತಿ ಸರ್ಟಿಫಿಕೇಟ್ ಕೂಡಾ ನೋಡ ಬೇಕಾಗಿಲ್ಲ. ನಮ್ಮ ನಾಮದ ಕುರುಹು ಮತ್ತು ನಾವಾಡುವ ಭಾಷಾ ವೈಖರಿ ಅಷ್ಟೇ ಸಾಕು. ಹೆಸರಿನ ಉತ್ತರಾರ್ಧದಲ್ಲಿ ಖಾನ್, ಮಹಮ್ಮದ್ ಎಂದಿದ್ದರೆ ಮುಸ್ಲೀಮರೆಂದೂ, ಡಿಸೋಜಾ, ಫರ್ನಾಂಡೀಸ್ ಎಂತಿದ್ದರೆ ಕ್ರಿಶ್ಚಿಯನ್ನರೆಂದೂ, ಸಿಂಗ್ ಎಂತಿದ್ದರೆ ಸಿಖ್ಖರೆಂದೂ ಎಷ್ಟು ಸುಲಭವಾಗಿ ನಾವು ಒಂದು ಧರ್ಮದ ಜನತೆಯನ್ನು ಗುರುತಿಸಬಲ್ಲೆವೋ ಅಷ್ಟೇ ಸುಲಭವಾಗಿ ಹಿಂದೂ ಧರ್ಮದ ವಿವಿಧ ಜಾತಿಗಳ ಜನರನ್ನೂ ಅವರ ಹೆಸರಿನಂದಲೇ ಗುರುತಿಸಬಹುದು. ಇತ್ತೀಚೆಗೆ ಲಗ್ನ ಪತ್ರಿಕೆಯನ್ನು ನೋಡಿ ಒಬ್ಬರು ಹೇಳುತ್ತಿದ್ದರು " ಹುಡುಗ ವಕ್ಕಲಿಗರವನು, ಆದ್ರೆ  ಹುಡುಗಿ ತಂದೆ ಹೆಸರು ಹೇಗಿದೆ ನೋಡಿ ಗಂಗಾಧರ ರಾವ್ ಅಂತ. ಇದು ಇಂಟರ್ ಕ್ಯಾಸ್ಟ್ ಮ್ಯಾರೇಜ್ ಕಣ್ರೀ" ಅಂತಿದ್ರು. ರಾವ್ ಎನ್ನುವ ಉಪನಾಮ ವಕ್ಕಲಿಗರಲ್ಲಿ ಬರೊಲ್ಲ ಅನ್ನೋದು ಇವರ ತರ್ಕ ಹಾಗಾಗಿ ಇವರು ಜಾತಿಯವರಲ್ಲ ಎಂದು ನೇರವಾಗಿ ಹೇಳಬಲ್ಲರು. ಹೀಗೆ ಇಂತಹ ಜಾತಿಯವರು ಇಂತದ್ದೇ ಹೆಸರನ್ನು ಹೊಂದಿರಬೇಕು ಎಂದು ರೂಪಿಸಿದ್ದು ಯಾರು ? ಬ್ರಾಹ್ಮಣೋತ್ತಮ ಜನತೆಯ ಹೆಸರುಗಳು ಯಾಕೆ ಸುಂದರವಾಗಿ, ಕೇಳಲು ಲಾಲಿತ್ಯಪೂರ್ಣವಾಗಿರುತ್ತವೆ ? ಶೂದ್ರರ ಹೆಸರೇಕೆ ಕಿವಿಗೂ ಅಹಿತವಾಗಿರುತ್ತವೆ ?

ಬೇಕಾದರೆ ಗಮನಿಸಿ ನೋಡಿ ಕೇವಲ ಎರಡು-ಮೂರು ದಶಕಗಳ ಹಿಂದಿನ ಶೂದ್ರ ವರ್ಣದ ದಲಿತ ವ್ಯಕ್ತಿಗಳ ಹೆಸರುಗಳು ಹಾಗೂ ಬ್ರಾಹ್ಮಣ ವರ್ಣದ ವ್ಯಕ್ತಿಗಳ ಹೆಸರುನ್ನು ಹೋಲಿಸಿ ನೋಡಿ. ಶೂದ್ರರಲ್ಲಿ ಸಾಮಾನ್ಯವಾಗಿ ಗುತ್ಯ, ಚಮ್ಮಿ, ರಾಚ, ಪಿಳ್ಳ, ಚೋಮ, ಟೊಕ್ಕ, ಡೊಳ್ಳ ರೀತಿಯ ಹೆಸರು ಗಳು ಕಂಡು ಬಂದರೆ ಬ್ರಾಹ್ಮಣ ವರ್ಣದ ಜನತೆಯಲ್ಲಿ ಗುರುಮೂರ್ತಿ, ಚಂದ್ರಕಾಂತ, ಪದ್ಮನಾಭ, ಲಕ್ಷ್ಮೀ ನಾರಾಯಣ ಎಂಬ ರೀತಿಯ ಹೆಸರು ಗಳನ್ನು ಕಾಣಬಹುದು. ಹೀಗೆ ನಾಮದಲ್ಲೂ ತಾರತಮ್ಯಕ್ಕೆ ಕಾರಣವೇನು ?

ಸಾಮಾನ್ಯವಾಗಿ ಶೂದ್ರ ಸಮುದಾಯದಲ್ಲಿ ಮಕ್ಕಳು ಹುಟ್ಟಿದ ತಕ್ಷಣ ಅವರೇ ನೇರವಾಗಿ ಮಕ್ಕಳಿಗೆ ನಾಮಕರಣ ಮಾಡುವುದಿಲ್ಲ. ಅವರಿಗೆ ಪಂಚಾಂಗ ನೋಡಿ ಜಾತಕ ಬರೆದು ಹೆಸರಿಡುವ ಯಾವ ಜ್ಯೋತಿಷ್ಯ ವಿದ್ಯೆಯೂ ಗೊತ್ತಿಲ್ಲ. ಆದುದರಿಂದ ಮಕ್ಕಳು ಹುಟ್ಟಿದ ದಿನ, ಗಳಿಗೆಯನ್ನು ನೆನಪಿಟ್ಟುಕೊಂಡು ಪುರೋಹಿತರ ಬಳಿ ಹೋಗುವುದು ರೂಢಿ. ಪುರೋಹಿತರೋ ಮುಖ ನೋಡಿ ಮಣೆ ಹಾಕುವಂತವರು ಅವರು ಮೊದಲು ಕೇಳುವುದು   'ಯಾವ ಜಾತಿ ನಿಂದು?' ಅಂತ. ಜಾತಿ ಹೇಳೋಕೆ ಹಿಂದೆ ಮುಂದೆ ನೋಡಿದರೆ  ಎರಡನೇ ಪ್ರಶ್ನೆ ಕೇಳೋದು 'ಮನೆ ದೇವರು ಯಾವುದು ನಿಂದು ?' ಅಂತಇವೆರಡರಲ್ಲಿ ಯಾವುದು ಗೊತ್ತಾದ್ರೂ ಶೂದ್ರ ಮಕ್ಕಳಿಗೆ ಹೆಸರಿಡೋಕೆ ಪುರೋಹಿತರಿಗೆ ತುಂಬಾ ಸುಲಭ! ಅದರಂತೆ ಹುಡುಗನ ಜಾತಕದಲ್ಲಿ '' ಅಕ್ಷರದಿಂದ ಶುರುವಾಗೋ ಹೆಸರಿಡಬೇಕು ಅಂತ ಬಂದ್ರೆ  ಪುರೋಹಿತರು ಸೂಚಿಸುವುದು 'ಚಮ್ಮಿ' ಅಥವಾ 'ಚೌಡ' ಎಂಬ ಹೆಸರನ್ನೇ ಹೊರತು 'ಚಂದ್ರ ಶೇಖರ' ಅಂತ  ಅಲ್ಲ. ಪುರೋಹಿತರ ಮಾತನ್ನು ಶೂದ್ರನೆಂದಾದರೂ  ಮೀರುವುದುಂಟೇ ? ಸಾಧ್ಯವಿಲ್ಲ. ಮಾತು ಮೀರಿ ಎಲ್ಲಾದರೂ ಕೆಡುಕುಂಟಾದರೆ ಕಷ್ಟ ಕಷ್ಟ. ಆದ್ದರಿಂದ ಶೂದ್ರರ ಮಕ್ಕಳಿಗೆ ಚಮ್ಮಿ, ಚೌಡ ಹೆಸರೇ ಗತಿಆದರೆ ಈಗ ಪ್ರಸ್ತುತದಲ್ಲಿ ಇಂತಹ ಪರಿಸ್ಥಿತಿ ಇಲ್ಲ ಬಿಡಿ. ಶೂದ್ರರೆನಿಸಿಕೊಂಡವರೂ ವಿದ್ಯಾವಂತರಾಗಿ ಕತೆ, ಕಾದಂಬರಿ ಓದಿಸಿನಿಮಾಗಳನ್ನು ನೋಡಿ ಅಲ್ಲಿ ಬರುವ ನಾಯಕ-ನಾಯಕಿಯರ ಸುಂದರ ಹೆಸರುಗಳನ್ನೇ ತಮ್ಮ ಮಕ್ಕಳಿಗೂ ನಾಮಕರಣ ಮಾಡುತ್ತಿದ್ದಾರೆ. ಔಪಚಾರಿಕವಾಗಿ ಪುರೋಹಿತರ ಮನೆಗೆ ಹೋಗಿ ಬರುತ್ತಾರೆ ಅಷ್ಟೇ.

ಹೀಗೆ  ಸಜೀವ ಜೀವವನ್ನು ಗುರುತಿಸಲು ಇಡುವ ಹೆಸರಿನಲ್ಲೂ ಸಹ ತನ್ನ ಮಟ್ಟಕ್ಕೆ ಬರಬಾರದೆಂದು ಒಂದು ವರ್ಣ ಇನ್ನೊಂದು ವರ್ಣವನ್ನು ಬಹುಕಾಲದವರೆಗೆ ತನ್ನ ಅಂಕೆಯಲ್ಲಿಟ್ಟುಕೊಂಡಿದ್ದು ಸುಳ್ಳಲ್ಲ. ಹೆಸರು ನಮ್ಮ ಜಾತಿಯನ್ನು ಸೂಚಿಸುವಂತೆ ಇರಬಾರದು ಎಂಬುದು ನನ್ನ ಅಭಿಮತ. ಜಾತಿ ಗೊತ್ತಾದ್ರೆ ತಾನೇ ಜಾತಿ ಬೇದ, ತಾರತಮ್ಯ ಮಾಡೋದು ಆದ್ದರಿಂದ ಅದು ಗೊತ್ತಾಗದೇ ಇರೋದೇ ಒಳ್ಳೆಯದು. ಯಾರಿಗೆ ಯಾರನ್ನೂ ಸಹ ನೇರವಾಗಿ ನಿನ್ನ ಜಾತಿ ಯಾವುದು ಅಂತ ಕೇಳೋ ಧೈರ್ಯ ಇರೊಲ್ಲ. ಸುತ್ತೀ ಬಳಸೀ ಕೇಳಿ ಹೇಗಾದ್ರೂ ತಿಳಕೋ ಬೇಕು ಅನ್ನೋ ಹಂಬಲ ಇರುತ್ತೆ ಅಷ್ಟೆ. ಅಷ್ಟಕ್ಕೂ ಮನುಷ್ಯನಿಗೆ ನಿಜವಾಗಿಯೂ ಬೇಕಾಗಿರುವುದು ಪ್ರೀತಿ, ವಿಶ್ವಾಸ, ಸಹನೆ, ಸುಗುಣಗಳಿಂದ ಕೂಡಿದ ಜಾತ್ಯಾತೀತ ಮಾನವ ಸಂಬಂಧವೇ ಹೊರತು ಜಾತಿಯ ಕೊಂಪೆಯಲ್ಲೇ ಗಿರಕಿ ಹೊಡೆಯುವ, ಜಾತಿಗೋಸ್ಕರ ಅನಾಚಾರಕ್ಕಿಳಿಯುವ ರಾಕ್ಷಸ ಸಂಬಧವಲ್ಲ. ಅಲ್ಲವೇ ?
ರೇಣುಕಾತನಯ 
renukatanay@gmail.com